ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಶಿಷ್ಯನೆಂದೇ ಗುರುತಿಸಿಕೊಂಡಿದ್ದ ರೌಡಿ ಬಾಗಪ್ಪ ಹರಿಜನ್ ನೆತ್ತರು ಭೀಮಾ ತೀರದಲ್ಲಿ ಹರಿದಿದೆ. ರೌಡಿಶೀಟರ್ ಬಾಗಪ್ಪ ಹರಿಜನ್ ಮೇಲೆ ಕೆಲವು ಆಗಂತುಕರು ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಬಾಗಪ್ಪ ವಿಜಯಪುರದ ರೆಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ವಾಸ ಮಾಡುತ್ತಿದ್ದ. ಊಟ ಮಾಡಿ ರಾತ್ರಿ ಮನೆಯ ಬಳಿ ವಾಕ್ ಮಾಡುತ್ತಿದ್ದಾಗ ಆಟೋದಲ್ಲಿ ಬಂದ ಕೆಲವರು ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, “ಬಾಗಪ್ಪ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದ, ಇದೆ ಜಾಗದಲ್ಲಿ ನಾಲ್ಕೈದು ಜನರಿಂದ ಹತ್ಯೆ ಮಾಡಲಾಗಿದೆ, ಆಟೋದಲ್ಲಿ ಬಂದ ನಾಲ್ಕೈದು ಜನರು ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ, ಊಟ ಮಾಡಿಕೊಂಡು ಮನೆ ಎದುರು ಅಡ್ಡಾಡುತ್ತಿದ್ದ ಕೃತ್ಯ ಎಸಗಲಾಗಿದೆ, ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಲ್ಲದೆ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ” ಎಂದು ಘಟನೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಬಾಗಪ್ಪ ಹರಿಜನ್ ಮೇಲೆ ಹಲವು ಸಮಾಜಘಾತುಕ ಚಟುವಟಿಕೆ ನಡೆದ ಬಗ್ಗೆ ದೂರುಗಳಿವೆ. ವಿಜಯಪುರ ಭಾಗದ ಭೀಮಾತೀರದಲ್ಲಿ ಹಲವು ಕೃತ್ಯಗಳಲ್ಲಿ ಬಾಗಪ್ಪ ಭಾಗಿಯಾಗಿದ್ದ. 1998 ರಲ್ಲಿ ಸಿಂದಗಿಯಲ್ಲಿ ಸ್ಟನ್ ಗನ್ ಬಳಸಿ ಗುಂಡು ಹಾರಿಸಿದ್ದ ಪ್ರಕರಣ ಸೇರಿದಂತೆ ಹಲವು ಕೇಸ್ಗಳಲ್ಲಿ ಈತನ ಹೆಸರಿದೆ. ಕಳೆದ 2018 ಆಗಸ್ಟ್ 8ರಲ್ಲಿ ಇದೆ ಬಾಗಪ್ಪ ಹರಿಜನ್ ಮೇಲೆ ಪೈರಿಂಗ್ ನಡೆದಿತ್ತು. ಮತ್ತೋರ್ವ ಹಂತಕ ಪೀರಪ್ಪ ಹಡಪದ್ ಈತನ ಮೇಲೆ ಗುಂಡಿನ ದಾಳಿ ಮಾಡಿದ್ದ. ಪ್ರಕರಣದ ವಿಚಾರಣೆಗೆ ಬಂದಾಗ ವಿಜಯಪುರದ ಕೋರ್ಟ್ ಆವರಣದಲ್ಲೇ ಮಧ್ಯಾಹ್ನದ ವೇಳೆ ಗುಂಡಿನ ದಾಳಿ ನಡೆದಿತ್ತು. ಬಳಿಕ ಹೈದರಾಬಾದ್ನಲ್ಲಿ ಚಿಕಿತ್ಸೆ ಪಡೆದು ಬಾಗಪ್ಪ ಗುಣಮುಖನಾಗಿದ್ದ.