ಕನ್ನಡ ಸಿನೆ ಪ್ರೇಕ್ಷಕರು ವರ್ಷವಿಡೀ ಕುತೂಹಲದಿಂದ ಕಾಯುವ ಸಿನೆಮಾ ಹಬ್ಬಗಳಲ್ಲಿ ಬೆಂಗಳೂರಿನ ಸಿನೆಮಾ ಹಬ್ಬವೂ ಒಂದು. ಇಲ್ಲಿ ದೇಶ ವಿದೇಶಗಳ ಎಲ್ಲಿಯೂ ಕಾಣಸಿಗದ ಚಿತ್ರಗಳು, ಅದರ ಕಲಾವಿದರು, ನಿರ್ದೇಶಕರು ಕಾಣಲು ಸಿಗುವುದು ಅದಕ್ಕೆ ಕಾರಣ.
ಅದರ ಜೊತೆಗೆ ಈ ಸಿನೆಮಾ ಹಬ್ಬದ ನೆಪದಲ್ಲಿ ಸಿನೆಮಾ ಕುರಿತ ಚರ್ಚೆಗಳು ಗರಿಗೆದರುತ್ತವೆ. ಸಿನೆಮಾಸಕ್ತರ ಹಲವು ಬಗೆಯ ಕುತೂಹಲಗಳನ್ನು ಈ ಚರ್ಚೆಗಳು ತಣಿಸುತ್ತವೆ.
ಈ ಸಲದ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಮಾರ್ಚ್ 1ರಿಂದ ಆರಂಭವಾಗಲಿದ್ದು, ಸುಮಾರು 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶನ ಕಾಣಲಿವೆ.
ಬುಧವಾರ ನಗರದ ವಾರ್ತಾ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಬಿ.ಬಿ.ಕಾವೇರಿ ಅವರು, ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂದು ಹೇಳಿದರು.
ಆದರೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಥೀಮ್ ಇಟ್ಟುಕೊಂಡು ಇಸ್ಲಾಮೋಫೋಬಿಯ ಹರಡುವ ‘Reading Lolita in Tehran’ ಎನ್ನುವ ಚಿತ್ರವನ್ನು ಆಯ್ಕೆ ಮಾಡಿರುವುದು ಸಿನೆಮಾ ಪ್ರಿಯರ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಕುರಿತು ಈಗಾಗಲೇ ನಾಡಿನ ಹಿರಿಯ ಚಿಂತಕ ಕೆ ಫಣಿರಾಜ್ ಅವರು ಸಿನೆಮಾ ಉತ್ಸವದ ಕಲಾ ನಿರ್ದೇಶಕರಿಗೆ ಪತ್ರ ಬರೆದು ಚಿತ್ರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಅವರೊಂದಿಗೆ ಹಲವು ಪ್ರಜ್ಞಾವಂತ ಕಲಾವಿದರು ಹಾಗೂ ಜನಸಾಮಾನ್ಯರೂ ಈ ಕುರಿತು ದನಿಯೆತ್ತಿದ್ದಾರೆ. ಪತ್ರದ ಪೂರ್ಣ ಪಠ್ಯ ಇಲ್ಲಿದೆ:
ಮಾನ್ಯ ಕಲಾ ನಿರ್ದೇಶಕರು,
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ
ಮಾನ್ಯರೇ-
ನಾವು ಬಹುವಾಗಿ ನಿರೀಕ್ಷಿಸುತ್ತಿರುವ ಅಂತರಾಷ್ಟ್ರೀಯ ಸಿನಿಮೋತ್ಸವವು ಮಾರ್ಚ್ 1 ರಿಂದ ಪ್ರಾರಂಭವಾಗುತ್ತಿದೆ. ಅಲ್ಲಿ ಪ್ರದರ್ಶಿತವಾಗುವ ಗುಣಾತ್ಮಕ ಸಿನೆಮಾಗಳನ್ನು ನೋಡಲು ನಾವು ಕಾತುರರಾಗಿದ್ದೇವೆ. ಆದರೆ, ಏಶಿಯಾ ಸ್ಪರ್ಧ ವಿಭಾಗಕ್ಕೆ ಆಯ್ಕೆಯಾದ ಸಿನೆಮಾಗಳ ಪಟ್ಟಿಯಲ್ಲಿ ‘Reading Lolita in Tehran’ ಎಂಬ ಸಿನೆಮಾ ಆಯ್ಕೆ ಆಗಿರುವುದನ್ನು ಕಂಡು ಬಹು ಆತಂಕಿತರಾಗಿದ್ದೇವೆ.
ಪ್ರಸ್ತುತ ಚಿತ್ರೋತ್ಸವಕ್ಕೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸೂಕ್ತ ಶೀರ್ಷಿಕೆಯನ್ನು ಇಟ್ಟುಕೊಂಡಿರುವಾಗ ಇಂಥ ಪ್ರಮಾದವು ಏಕಾಗಿದೆ!? ಇಸ್ರೇಲ್ ಪ್ರಭುತ್ವವು ಫಿಲಿಸ್ತೀನಿನ ಗಾಝ ಪಟ್ಟಿಯಲ್ಲಿ ನೀಚ ನರಮೇಧ ನಡೆಸುತ್ತಿರುವ ಘಾತುಕ ಅಪರಾಧಿ ಪ್ರಭುತ್ವವಾಗಿದೆ. ಅದರಿಂದ ಪ್ರಾಯೋಜಿತವಾಗಿ, ಅದರ ಘಾತುಕ ಯೋಜನೆಗಳ ಭಾಗವಾಗಿ ಕಟ್ಟಲಾಗಿರುವ ‘Reading Lolita in Tehran’ ಒಂದು ಇಸ್ಲಾಮೋಫೋಬಿಯ ಬಿತ್ತುವ ಇರಾದೆಯ ಪ್ರಚಾರ ಸಿನೆಮಾವಾಗಿದೆ!
ಇಂಥ ಸಿನೆಮಾವನ್ನು ಸ್ಪರ್ದೆ ಹಾಗು ಪ್ರದರ್ಶನಕ್ಕೆ ಆಯ್ದು, ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವು ಈ ಆಕೃತ್ಯವನ್ನು ಬೆಂಬಲಿಸುವುದನ್ನು ನಾವು ಖಂಡಿಸುತ್ತೇವೆ. ಸಿನೆಮಾ ಪ್ರೇಮಿಗಳು, ಸಿನಿಮೋತ್ಸವದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಆಗಿರುವಂತೆಯೇ ನಾವು ಶಾಂತಿಯುತ ಜಗತ್ತಿಗೆ ಆಶಿಸುವ, ಪ್ರಭುತ್ವ ಪಾತಕಿಗಳನ್ನು ನೇರವಾಗಿ ಪ್ರಶ್ನಿಸಿ ಪ್ರತಿಭಟಿಸುವ ನಾಗರಿಕರು ಆಗಿದ್ದೇವೆ- ನಾವು ಇದನ್ನು ಸಹಿಸುವುದಿಲ್ಲ. ಕೂಡಲೇ, ಪಟ್ಟಿಯಿಂದ ಪ್ರಸ್ತುತ ಸಿನೆಮಾವನ್ನು ತೆಗೆದು ಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ.
-ಕೆ.ಫಣಿರಾಜ್