ನವದೆಹಲಿ : ಯೂಟ್ಯೂಬ್ (Youtube) ಮೂಲಕ ಹಣ (Money) ಗಳಿಸೋದು ಸುಲಭ ಅಂತಿದ್ದೋರಿಗೆ ಯೂಟ್ಯೂಬ್ ಶಾಕ್ ಕೊಟ್ಟಿದೆ. ಯೂಟ್ಯೂಬ್ ಮೋನೆಟೈಸೇಶನ್ (Monitaisation) ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದೆ. ಹೊಸ ನಿಯಮ ಇದೇ ಜುಲೈ 15 ರಿಂದ ಜಾರಿಗೆ ಬರಲಿದೆ.
ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಜನರು ಎಐ ಬಳಸಿ, ಸುಲಭವಾಗಿ, ಯಾವುದೇ ಶ್ರಮವಿಲ್ಲದೆ ವಿಡಿಯೋ ತಯಾರಿಸ್ತಿದ್ದಾರೆ. ಕೆಲವರಂತೂ ಬೇರೆಯವರ ವಿಡಿಯೋಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಹಾಕುತ್ತಿದ್ದಾರೆ. ಹಳೆ ವಿಡಿಯೋಗಳನ್ನೇ ಮತ್ತೆ ಮತ್ತೆ ಅಪ್ಲೋಡ್ ಮಾಡಿ ಲಾಭ ಮಾಡುತ್ತಿದ್ದಾರೆ. ಈಗ ಇವೆಲ್ಲದಕ್ಕೂ ಕಡಿವಾಣ ಹಾಕಲು ಯೂಟ್ಯೂಬ್ ಮುಂದಾಗಿದೆ.
ಯೂಟ್ಯೂಬ್ ಹೊಸ ನಿಯಮ ಏನು?
ಜುಲೈ 15, 2025ರಿಂದ, ಪದೇ ಪದೇ ಒಂದೇ ವಿಡಿಯೋ ಅಪ್ಲೋಡ್ ಮಾಡಿದರೆ, ಇಲ್ಲವೆ ಬೇರೆಯವರ ವಿಡಿಯೋವನ್ನು ನಕಲಿ ಮಾಡಿ ಪೋಸ್ಟ್ ಮಾಡಿದ್ರೆ ಯೂಟ್ಯೂಬ್ ಹಣಗಳಿಸಲು ಅವಕಾಶ ನೀಡುವುದಿಲ್ಲ. ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗುವ ವಿಡಿಯೋಗಳ ಗುಣಮಟ್ಟವನ್ನು ಸುಧಾರಿಸಲು ಯೂಟ್ಯೂಬ್ ಈ ನಿರ್ಧಾರ ತೆಗೆದುಕೊಂಡಿದೆ.
ಯಾವ ವಿಡಿಯೋಗಳಿಗೆ ಸಿಗಲ್ಲ ಹಣ?
ಬೇರೊಬ್ಬರ ವಿಷಯವನ್ನು ಎತ್ತಿಕೊಂಡು ಅದನ್ನು ಸ್ವಲ್ಪ ಬದಲಾಯಿಸಿ ಪೋಸ್ಟ್ ಮಾಡಲು ಅನುಮತಿ ಇಲ್ಲ. ವೀಡಿಯೊವನ್ನು ಹೊಸದಾಗಿ ತಯಾರಿಸಬೇಕು. ಬೇರೆ ವಿಡಿಯೋವನ್ನು ಕೂಡ ಸಂಪೂರ್ಣ ಬದಲಿಸಿ ಪೋಸ್ಟ್ ಮಾಡ್ಬೇಕು. ಪುನರಾವರ್ತಿತ ವೀಡಿಯೊಗಳನ್ನು ನಿಷೇಧಿಸಲಾಗುವುದು. ಹಣ ಗಳಿಕೆಗೆ ನೀವು ಮಾಡಿದ ವಿಡಿಯೋವನ್ನೇ ಮತ್ತೆ ಮತ್ತೆ ಹಾಕುವಂತಿಲ್ಲ. ಟೆಂಪ್ಲೇಟ್ ಬಳಸಿದ ವಿಡಿಯೋ, ರೋಬೋಟ್ನಂತಹ ಧ್ವನಿ ಹೊಂದಿರುವ ವಿಡಿಯೋಕ್ಕೆ ಅವಕಾಶ ಇಲ್ಲ.
ಬರೀ ಹಣ ಗಳಿಸುವ ಉದ್ಧೇಶದಿಂದ ಮಾಹಿತಿ ಇಲ್ಲದ ಅಥವಾ ಮನರಂಜನೆ ಇಲ್ಲದ ವೀಡಿಯೊಗಳಿಗೆ ಅವಕಾಶ ಇಲ್ಲ. ಯೂಟ್ಯೂಬ್ ತನ್ನ ನಿಯಮದಲ್ಲಿ ಎಲ್ಲೂ ಎಐ ಹೆಸರನ್ನು ಹೇಳಿಲ್ಲ. ಆದರೆ ಎಐನಿಂದ ಮಾಡಿದ, ಆಟೋ ಜನರೇಟ್ ಧ್ವನಿಯ ವಿಡಿಯೋವನ್ನು ಸಹ ಈ ಕಟ್ಟುನಿಟ್ಟಿನ ನಿಯಮದಲ್ಲಿ ತರಬಹುದು ಎನ್ನಲಾಗಿದೆ