400 ಕೆಜಿ ಆರ್ಡಿಎಕ್ಸ್ ಬಾಂಬ್ ಬಳಸಿ ಮುಂಬೈನ ವಿವಿಧ ಭಾಗಗಳಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರಿ ಮೂಲದ ಅಶ್ವಿನ್ ಎಂದು ಗುರುತಿಸಲಾಗಿದೆ.
ಬಿಹಾರಿ ಮೂಲದ ಅಶ್ವಿನ್, ಮುಂಬೈ ಪೊಲೀಸರಿಗೆ ಕರೆ ಮಾಡಿ, ಅನಂತ ಚತುರ್ದಶಿಯಂದು ಮುಂಬೈ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆನಂತರ ಚುರುಕುಗೊಂಡ ಮುಂಬೈ ಪೊಲೀಸರು 24 ಗಂಟೆಯ ಒಳಗಾಗಿ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಿಹಾರ ಮೂಲದವನಾಗಿದ್ದು, ಕಳೆದ ಐದು ವರ್ಷಗಳಿಂದ ನೋಯ್ಡಾದಲ್ಲಿ ವಾಸಿಸುತ್ತಿದ್ದಾನೆ. ಆರೋಪಿಯನ್ನು ನೋಯ್ಡಾದ ಸೆಕ್ಟರ್ -113 ರಲ್ಲಿ ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಗುರುವಾರ ಆರೋಪಿ ಮುಂಬೈ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಹಾಕಿದ್ದು, ನಗರದಾದ್ಯಂತ ವಾಹನಗಳಲ್ಲಿ ದೊಡ್ಡ ಬಾಂಬ್ಗಳನ್ನು ಇರಿಸಲಾಗಿದೆ ಮತ್ತು 400 ಕೆಜಿ ಆರ್ಡಿಎಕ್ಸ್ ಒಳಗೊಂಡ ದೊಡ್ಡ ಪ್ರಮಾಣದ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದನು.
ಕರೆ ಮಾಡಿದ ವ್ಯಕ್ತಿ ತಾನು ಪಾಕಿಸ್ತಾನ ಮೂಲದ ಜಿಹಾದಿ ಗುಂಪಿನ ಸದಸ್ಯನೆಂದು ಹೇಳಿಕೊಂಡಿದ್ದು, 14 ಭಯೋತ್ಪಾದಕರು ನಗರಕ್ಕೆ ಪ್ರವೇಶಿಸಿದ್ದಾರೆಂದು ಹೇಳಿದ್ದನು. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಪೊಲೀಸರು ಆತನಿಂದ ಮೊಬೈಲ್ ಫೋನ್ ಸಹ ವಶಪಡಿಸಿಕೊಂಡಿದ್ದಾರೆ. ಆ ವ್ಯಕ್ತಿ ಆರಂಭದಲ್ಲಿ ತನ್ನನ್ನು ಜ್ಯೋತಿಷಿ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಪೊಲೀಸರು ಇನ್ನೂ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.