ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಅವರ ಪಕ್ಷವು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಅವರು ಸರ್ಕಾರವು ವಿಶ್ವ ಬ್ಯಾಂಕ್‌ನಿಂದ ಪಡೆದ 14,000 ಕೋಟಿ ರೂಪಾಯಿ ಸಾಲವನ್ನು 2025ರ ವಿಧಾನಸಭೆ ಚುನಾವಣೆಯಲ್ಲಿ ಮತ ಖರೀದಿಸಲು ಮತ್ತು ಉಚಿತ ಕೊಡುಗೆಗಳ ರೂಪದಲ್ಲಿ ಜನರಿಗೆ ಹಂಚಲು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
“ಮಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ”ಯಲ್ಲಿ ಮಹಿಳೆಯರ ಖಾತೆಗೆ ಚುನಾವಣೆಗೆ ಮುನ್ನ 10,000 ರೂಪಾಯಿ ಜಮೆ ಮಾಡಿದ ವಿಷಯವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮತದಾನದ ಹಿಂದಿನ ದಿನಗಳಲ್ಲಿಯೂ ಹಣ ಹಂಚಿಕೆ ಮುಂದುವರಿದಿತ್ತು ಎಂದು ಅವರು ಹೇಳಿದರು.
ಪಕ್ಷದ ಮತ್ತೊಬ್ಬ ನಾಯಕ ಪವನ್ ವರ್ಮಾ ಅವರು ಸರ್ಕಾರವು ವಿಶ್ವ ಬ್ಯಾಂಕ್‌ನಿಂದ ಬಂದ ಒಟ್ಟು 21,000 ಕೋಟಿ ರೂಪಾಯಿಯನ್ನು ಬೇರೆಡೆ ಬಳಸಿಕೊಂಡಿದೆ ಎಂಬ ಮಾಹಿತಿ ತಮಗೆ ದೊರೆತಿದೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ ಬಿಹಾರದ ಸಾಲದ ಪ್ರಮಾಣ ಈಗ 4,06,000 ಕೋಟಿ ರೂಪಾಯಿಗೆ ತಲುಪಿದೆ ಮತ್ತು ದಿನಕ್ಕೆ ಸುಮಾರು 63 ಕೋಟಿ ರೂಪಾಯಿಯನ್ನು ಬಡ್ಡಿಯಾಗಿ ಪಾವತಿಸಲಾಗುತ್ತಿದೆ ಎಂಬ ಮಾಹಿತಿ ಬಹಿರಂಗಪಡಿಸಿದೆ.
ಆದರೆ ಈ ಆರೋಪಗಳ ಬಗ್ಗೆ ಬಿಹಾರ ಸರ್ಕಾರ ಅಥವಾ ಎನ್‌ಡಿಎ ನಾಯಕರು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
