ಬೆಂಗಳೂರು/ದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನರ್‌ರಚನೆಯ ಪ್ರಸ್ತಾವನೆ ಮಂಡಿಸಿದ್ದಾರೆ. ಮೂಲಗಳ ಪ್ರಕಾರ, ಈ ಬಾರಿ ಹೈಕಮಾಂಡ್ ಸಂಪೂರ್ಣ ಒಪ್ಪಿಗೆ ನೀಡಿದೆ. ಆ ಮೂಲಕ ನವೆಂಬರ್ ನಲ್ಲಿ ಸಂಪುಟ ಪುನಾರಚನೆಯ ಕ್ರಾಂತಿಗಷ್ಟೇ ರಾಜ್ಯ ರಾಜಕೀಯ ಬೆಳವಣಿಗೆ ನಡೆದಿದೆ.
ಸೋಮವಾರ ಪಟ್ಟಿ ಅಂತಿಮವಾಗಬಹುದು!
ಸೋಮವಾರ ಅಂತಿಮ ಪಟ್ಟಿ ಬರುವ ಸಾಧ್ಯತೆ ಹೆಚ್ಚಾಗಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಮತ್ತೆ ದೆಹಲಿಗೆ ತೆರಳುವ ನಿರೀಕ್ಷೆ ಇದೆ. ಸುಮಾರು 15 ರಿಂದ 17 ಮಂದಿ ಹಾಲಿ ಸಚಿವರನ್ನು ಬದಲಿಸಲಾಗುವ ಸಾಧ್ಯತೆ ಇದೆ.
ಜಾತಿ ಆಧಾರಿತ ಬದಲಾವಣೆ:
ಹೊಸ ಸಂಪುಟದಲ್ಲಿ ಸಾಮಾಜಿಕ ಹಾಗೂ ಜಾತಿ ಸಮತೋಲನ ಕಾಪಾಡಲು ಪ್ರಯತ್ನ ನಡೆಯಲಿದೆ. ಈಡಿಗ ಸಮುದಾಯದ ಹರಿಪ್ರಸಾದ್ ಅವರಿಗೆ ಅವಕಾಶ ಸಿಕ್ಕರೆ, ಹಾಲಿ ಸಚಿವ ಮಧು ಬಂಗಾರಪ್ಪ ಹೊರ ಬೀಳುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯದ ನಾಲ್ಕು ಸಚಿವರಿಗೂ ವಜಾ ಶಾಕ್ ಎದುರಾಗಬಹುದು.
ಆಕಾಂಕ್ಷಿತರ ಪಟ್ಟಿ ಇಂತಿದೆ:
ಬಿ.ಕೆ. ಹರಿಪ್ರಸಾದ್, ಎಂ. ಕೃಷ್ಣಪ್ಪ, ಪಿ.ಎಂ. ನರೇಂದ್ರಸ್ವಾಮಿ, ಪುಟ್ಟರಂಗಶೆಟ್ಟಿ, ಎಚ್.ಸಿ. ಬಾಲಕೃಷ್ಣ, ಎಸ್.ಆರ್. ಶ್ರೀನಿವಾಸ್, ಎಸ್.ಎನ್. ನಾರಾಯಣಸ್ವಾಮಿ, ಅಪ್ಪಾಜಿ ನಾಡಗೌಡ, ಕೆ.ಎಂ. ಶಿವಲಿಂಗೇಗೌಡ, ರೂಪಾ ಶಶಿಧರ್, ಡಾ. ಅಜಯ್ ಸಿಂಗ್, ಬೇಳೂರು ಗೋಪಾಲಕೃಷ್ಣ, ಲಕ್ಷ್ಮಣ್ ಸವದಿ, ಕೆ. ಷಡಕ್ಷರಿ, ಯು.ಟಿ. ಖಾದರ್, ತನ್ವೀರ್ ಸೇಠ್ ಮತ್ತು ಸಲೀಂ ಅಹ್ಮದ್ ಸೇರಿದಂತೆ ಅನೇಕರು ಮಂತ್ರಿ ಸ್ಥಾನಕ್ಕಾಗಿ ಜೋರಾಗಿ ಲಾಬಿ ನಡೆಸುತ್ತಿದ್ದಾರೆ.
ಲಾಬಿ ರಾಜಕಾರಣ ತೀವ್ರ:
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರ ಬಳಿ ನಾಯಕರು ಮಂತ್ರಿ ಸ್ಥಾನಕ್ಕಾಗಿ ಒತ್ತಡ ತೋರುತ್ತಿದ್ದಾರೆ. ಕೆಲವರು ನೇರವಾಗಿ ದೆಹಲಿಯ ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ. ವರ್ಷಾಂತ್ಯ ಅಥವಾ ಸಂಕ್ರಾಂತಿಯ ವೇಳೆಗೆ ಸಂಪುಟ ಪುನರ್‌ರಚನೆ ಆಗುವ ಸಾಧ್ಯತೆ ಬಲವಾಗಿದೆ.
ಮುಂದೇನು?
ಯಾರಿಗೆ ಲಾಟರಿ ಹೊಡೆಯಲಿದೆ, ಯಾರು ವಜಾಗೊಳ್ಳಲಿದ್ದಾರೆ—ಈ ಪ್ರಶ್ನೆಗೆ ಎಲ್ಲರ ಕಣ್ಣುಗಳು ಈಗ ದೆಹಲಿಯತ್ತ ನೆಟ್ಟಿವೆ. ರಾಜ್ಯ ಕಾಂಗ್ರೆಸ್ ರಾಜಕೀಯ ಈಗ ಹೊಸ ಹಂತದತ್ತ ಹೆಜ್ಜೆಯಿಡುತ್ತಿದೆ.
