ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ (Biklu shiva case) ಭೀಕರ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳಿಗೆ ನ್ಯಾಯಾಲಯ ಶಾಕ್ ನೀಡಿದೆ. ಬಿಕ್ಲು ಶಿವ ಕೊಲೆ ಪ್ರಕರಣದ ಒಟ್ಟು 20 ಆರೋಪಿಗಳ ಪೈಕಿ A-1 ಆರೋಪಿ ಜಗದೀಶ್ ಸೇರಿ 18 ಆರೋಪಿಗಳ ಬಂಧನ ಈಗಾಗಲೇ ಆಗಿದ್ದು, ಹದಿನೆಂಟು ಆರೋಪಿತರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಬಂಧಿತ 18 ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಸಿರುವ 42 ಎಸಿಎಂಎಂ ಕೋರ್ಟ್ ಈ ಆದೇಶವನ್ನು ನೀಡಿದೆ. ಚಾರ್ಜ್ಶೀಟ್ ಪ್ರಕ್ರಿಯೆ ತಡವಾದ ಹಿನ್ನೆಲೆಯಲ್ಲಿ ಆರೋಪಿಗಳು ಡೀಫಾಲ್ಟ್ ಜಾಮೀನು ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇನ್ನು ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್.ಪುರಂನ ಬಿಜೆಪಿಯ ಶಾಸಕ ಬೈರತಿ ಬಸವರಾಜ್ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಡಿ.23ರಂದು ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಶಾಸಕ ಬೈರತಿ ಬಸವರಾಜ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಬೈರತಿ ಬಸವರಾಜ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಆದೇಶ ಹೊರಡಿಸಿದೆ. ತನಿಖೆಗೆ ಹಾಜರಾಗದೇ ನಾಮಪತ್ತೆಯಾಗಿರುವ ಬಸವರಾಜ್ಗಾಗಿ ಸಿಐಡಿ ತಂಡವೂ ಶೋಧ ನಡೆಸುತ್ತಿದೆ.
ಬೆಳಗಾವಿಯಿಂದ್ಲೇ ಬೈರತಿ ಎಸ್ಕೇಪ್
ಬೆಳಗಾವಿಯಿಂದ ಬೈರತಿ ಬಸವರಾಜ್ ಎಸ್ಕೇಪ್ ಆಗಿದ್ದಾರೆನ್ನಲಾಗುತ್ತಿದ್ದು, ಸಿಐಡಿ ಅಧಿಕಾರಿಗಳ ತಂಡ ಬೈರತಿ ಬಸವರಾಜ್ ಉಳಿದುಕೊಂಡಿದ್ದ ಜಾಗಕ್ಕೆ ಹೋಗಿ ಅಲ್ಲಿನ ಸಿಸಿಟಿವಿ, ಯಾವ ರಸ್ತೆಯ ಮೂಲಕ ಯಾವ ಕಡೆಗೆ ಹೋಗಿದ್ದಾರೆ ಅನ್ನೋದು ಸೇರಿದಂತೆ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಕ್ಕೆ ಕನೆಕ್ಟ್ ಆಗುವ ಟೋಲ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ.
ಪುಣೆಯಲ್ಲಿ ತಲೆ ಮರೆಸಿಕೊಂಡಿರೋ ಮಾಹಿತಿ
ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಇಡೀ ರಾಜಧಾನಿಯನ್ನೇ ಬೆಚ್ಚಿಬೀಳಿಸಿತ್ತು. ಜುಲೈ 15ರಂದು ಹಲಸೂರಿನ ಭಾರತಿನಗರದ ಮೀನಿ ಅವೆನ್ಯೂ ರಸ್ತೆಯ ಶಿವನ ಮನೆ ಬಳಿಯೇ 12 ಜನರ ಗುಂಪು ರಕ್ತದೋಕುಳಿ ಹರಿಸಿತ್ತು. ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಕೂಡ ಕಂಬಿ ಎಣಿಸುತ್ತಿದ್ದಾನೆ. ಇದೇ ಕೊಲೆ ಕೇಸ್ನಲ್ಲಿ ಬೈರತಿ ಬಸವರಾಜ್ ಹೆಸರು ಕೂಡ ಕೇಳಿ ಬಂದಿತ್ತು. ಇತ್ತೀಚೆಗೆ ಮಧ್ಯಂತರ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದ ಭೈರತಿ ಬಸವರಾಜ್ ಅರ್ಜಿ ರಿಜೆಕ್ಟ್ ಆಗಿತ್ತು.
