ದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ, ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿರುವ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಹೈಕೋರ್ಟ್ ಮುಂಭಾಗವೇ ಪ್ರತಿಭಟನೆ ನಡೆಯಿತು. “ಸೆಂಗಾರ್‌ನ ಜಾಮೀನು ರದ್ದುಗೊಳಿಸಿ, ಅವನಿಗೆ ಮರಣದಂಡನೆ ನೀಡಬೇಕು” ಎಂದು ಸಂತ್ರಸ್ತೆಯ ತಾಯಿ ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ.
ಹೈಕೋರ್ಟ್ ನಿರ್ಧಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದಿರುವ ಸಂತ್ರಸ್ತೆಯ ತಾಯಿ, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಘೋಷಿಸಿದ್ದಾರೆ. “ನನ್ನ ಮಗಳಿಗೆ ನಡೆದ ಅನ್ಯಾಯಕ್ಕೆ ಸುಪ್ರೀಂ ಕೋರ್ಟ್‌ನಲ್ಲೂ ನ್ಯಾಯ ಸಿಗದಿದ್ದರೆ, ನಾವು ಬೇರೆ ದೇಶಕ್ಕೆ ಹೋಗುತ್ತೇವೆ. ನನ್ನ ಪತಿಯ ಕೊಲೆಗೆ ಕಾರಣನಾದ ವ್ಯಕ್ತಿಯನ್ನು ತಕ್ಷಣವೇ ಗಲ್ಲಿಗೇರಿಸಬೇಕು” ಎಂದು ಎಎನ್ಐ (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಅಳಲು ತೋಡಿಕೊಂಡಿದ್ದಾರೆ.
ಹೈಕೋರ್ಟ್ ಮುಂಭಾಗದ ಪ್ರತಿಭಟನೆಯು ಕಾನೂನುಬಾಹಿರ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಪ್ರತಿಭಟನಾಕಾರರನ್ನು ಜಂತರ್ ಮಂತರ್‌ಗೆ ತೆರಳುವಂತೆ ಸೂಚಿಸಿದರು. ಮಹಿಳಾ ಪರ ಹೋರಾಟಗಾರ್ತಿ ಯೋಗಿತಾ ಭಯಾನ ಮಾತನಾಡಿ, “ನಾವು ಶಾಂತಿಯುತವಾಗಿಯೇ ನ್ಯಾಯ ಕೇಳುತ್ತಿದ್ದೇವೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು” ಎಂದರು. ಇದಕ್ಕೂ ಮೊದಲು ಡಿಸೆಂಬರ್ 23 ರಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಇಂಡಿಯಾ ಗೇಟ್ ಬಳಿಯೂ ಪ್ರತಿಭಟನೆ ನಡೆಸಿದ್ದರು.
2017ರಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 2019ರಲ್ಲಿ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಕಳೆದ ಮಂಗಳವಾರ ದೆಹಲಿ ಹೈಕೋರ್ಟ್ ಆತನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪೋಕ್ಸೋ (POCSO) ಕಾಯ್ದೆಯಡಿ ಗರಿಷ್ಠ ಶಿಕ್ಷೆಯನ್ನು ಆತ ಈಗಾಗಲೇ ಅನುಭವಿಸಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಸಂತ್ರಸ್ತೆಯ ತಂದೆಯ ಕಸ್ಟಡಿಯಲ್ ಸಾವಿನ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಸೆನಗರ್ ಸದ್ಯಕ್ಕೆ ಜೈಲಿನಲ್ಲೇ ಇರಲಿದ್ದಾನೆ.
ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್ ಈ ನಿರ್ಧಾರವನ್ನು ಟೀಕಿಸಿದ್ದು, “ತಾಂತ್ರಿಕ ಕಾರಣಗಳನ್ನು ಒಡ್ಡಿ ಸೆನಗರ್ ರೀತಿಯ ಅಪರಾಧಿಗೆ ಜಾಮೀನು ನೀಡಿರುವುದು ದೇಶದ ಮಹಿಳೆಯರ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದೆ. ಇದು ತಪ್ಪು ಮಾದರಿಯನ್ನು ಸೃಷ್ಟಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
