ಉಡುಪಿ: ಪೂಜೆಯ ನೆಪದಲ್ಲಿ ದೇವಾಲಯಕ್ಕೆ (Temple) ಆಗಮಿಸಿದ ಕಳ್ಳಿಯ ಗ್ಯಾಂಗ್ ವೃದ್ಧೆಯನ್ನು ಟಾರ್ಗೆಟ್ ಮಾಡಿ, ಯಾಮಾರಿಸಿ ಚಿನ್ನದ ಸರವನ್ನು ಕದ್ದಿರುವ (Theft) ಘಟನೆ ಉಡುಪಿ (Udupi) ಜಿಲ್ಲೆಯ ಕಾಪು (Kapu) ತಾಲೂಕಿನಲ್ಲಿ ನಡೆದಿದೆ. ಕಳ್ಳಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ದೆಯ ಚಿನ್ನದ ಸರವನ್ನು ಕಳ್ಳಿಯರು ಎಗರಿಸಿದ್ದಾರೆ. ಮೊದಲಿಗೆ ಪೂಜೆಯ ನೆಪದಲ್ಲಿ ಆಗಮಿಸಿದ್ದ ಕಳ್ಳಿಯರು ಅಲ್ಲೇ ಇದ್ದ ಒಂಟಿ ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಸರಕ್ಕಾಗಿ ಹೊಂಚು ಹಾಕಿದ್ದಾರೆ. ಪೂಜೆ ಪ್ರಾರಂಭವಾಗುತ್ತಿದ್ದಂತೆ ಕುಳಿತಿದ್ದ ವೃದ್ಧೆ ಎದ್ದು ನಿಂತಾಗ ಆಕೆಯನ್ನು ಗೋಡೆ ಬಳಿಗೆ ಕರೆದುಯ್ದು, ಮೂರೂ ಬದಿಯಿಂದ ಆಕೆಯನ್ನು ಸುತ್ತುವರಿದು, ಚಿನ್ನದ ಸರವನ್ನು ಎಗರಿಸಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ವೃದ್ಧೆ ಹೆಜಮಾಡಿ ನಿವಾಸಿ ಕಮಲ ಎಂದು ತಿಳಿದು ಬಂದಿದ್ದು, ಪೂಜೆಯ ಗಂಟೆಯ ಸದ್ದಿನಿಂದಾಗಿ ಆಕೆ ಸಹಾಯಕ್ಕಾಗಿ ಕಿರುಚಾಡಿದರೂ ಯಾರಿಗೂ ಕೇಳಿಸಿಲ್ಲ. ನಂತರ ವೃದ್ಧೆ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ಕಳ್ಳಿಯರನ್ನು ಪತ್ತೆ ಹಚ್ಚಲು ಕೆಲಸ ಮಾಡುತ್ತಿದ್ದಾರೆ. ಕಳ್ಳಿಯರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕದ್ದಿದ್ದಾರೆ ಎನ್ನಲಾಗಿದೆ.
