ರಾಯಚೂರು : ಬಣ್ಣ ಬಣ್ಣದ ತೊಗರಿಬೇಳೆ. ಕೆಂಪು ಬಣ್ಣದ ತೊಗರಿ ಬೇಳೆ. ಬಿರಿಯಾನಿ ಎಲೆ ಬದಲು ನೀಲಗಿರಿ ಎಲೆ. ಕರಿಮೆಣಸಿನ ಬದಲಾಗಿ ಪಪ್ಪಾಯಿ ಬೀಜಗಳು. ಚಕ್ಕೆ ಬದಲು ಯಾವುದೋ ಮರದ ಬೇರು. ಬಣ್ಣ ಮಿಶ್ರಿತ ದನಿಯಾ. ಈ ನಕಲಿ ಮಸಾಲಾ ಮಾಯಾಜಾಲ ದೃಶ್ಯ ಕಂಡು ಬಂದಿದ್ದು, ರಾಯಚೂರಿನ ಮಾನ್ವಿ ತಾಲೂಕಿನ ಇಸ್ಲಾಂನಗರದಲ್ಲಿ.
ಸ್ಥಳೀಯರ ಮಾಹಿತಿ ಮೇರೆಗೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಲರ್ ಕಲರ್ ತೊಗರಿಬೇಳೆ, ಧನಿಯಾ, ಚೆಕ್ಕೆ, ಬಿರಿಯಾನಿ ಎಲೆ, ಮೆಣಸು ನೋಡಿ ದಂಗಾಗಿ ಹೋಗಿದ್ದಾರೆ. ಡ್ರಮ್ ನೀರಿನಲ್ಲಿ ಕೆಮಿಕಲ್ ಬೆರೆಸಿ ಪದಾರ್ಥಗಳಿಗೆ ಹಾಕೋದು ಬಯಲಾಗಿದೆ. ಸಾಂಬಾರ್ ಮಸಾಲೆಯಲ್ಲಿ ಕಲಬೆರಕೆ ಕೆಮಿಕಲ್ ಪದಾರ್ಥಗಳು ಪತ್ತೆಯಾಗಿವೆ.
ದಾಳಿ ವೇಳೆ ಒಟ್ಟು 846 ಕೆಜಿ ವಿವಿಧ ನಕಲಿ ಮಸಾಲೆ, 367 ಕೆಜಿ ಬಣ್ಣ ಮಿಶ್ರಿತ ದನಿಯಾ ಕಾಳು, 220 ಕೆಜಿ ಅರಿಶಿನ, 150 ಕೆಜಿ ಕೆಂಪು ಕಡಲೆ, 16 ಕೆಜಿ ಕೆಂಪು ಕೊಬ್ಬರಿ, 42 ಕೆಜಿ ಚಕ್ಕೆ, 500 ಗ್ರಾಂ ಹಳದಿ ಹಾಗೂ ಕೆಂಪು ಬಣ್ಣದ ಕೆಮಿಕಲ್ ಪೌಡರ್ ಜಪ್ತಿ ಮಾಡಿದ್ದಾರೆ. ಸದ್ಯ ಎಲ್ಲ ಪದಾರ್ಥಗಳನ್ನ ಸೀಜ್ ಮಾಡಲಾಗಿದ್ದು, ಕಲೆ ಬೆರೆಕೆ ಮಾಡ್ತಿದ್ದ ಆರೋಪಿಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.