ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಿಂದಿ ಭಾಷೆಗೆ ಬೆಂಬಲ ನೀಡುತ್ತಿದ್ದಾರೆ. ಭಾರತವನ್ನು ಒಂದು ದೇಶವಾಗಿ ಒಗ್ಗೂಡಿಸಲು ಹಿಂದಿ ಭಾಷೆ ಬೇಕು ಎಂದು ಹೇಳುತ್ತಿದ್ದಾರೆ.
ಇಂದು ಹೈದರಾಬಾದ್ನಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಹಿಂದಿ ಭಾಷೆಯ ಪರ ಬ್ಯಾಟ್ ಬೀಸಿದರು. ಹಿಂದಿ ಹೆಚ್ಚು ಕಡಿಮೆ ರಾಷ್ಟ್ರೀಯ ಭಾಷೆ ಎಂದರು. ‘ಹಿಂದಿ ಕಲಿಯಲು ಯಾವುದೇ ರೀತಿಯ ಹಿಂಜರಿಕೆ ತೋರಿಸುವುದು ಶುದ್ಧ ಅಜ್ಞಾನ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಜನರು ಸಾಮಾನ್ಯವಾಗಿ ಉರ್ದುವನ್ನು ಸ್ಥಾಪಿತ ಭಾಷೆಯಾಗಿ ಒಪ್ಪಿಕೊಂಡಿದ್ದಾರೆ, ಆದರೆ, ಹಿಂದಿಯ ಬಗ್ಗೆ ಬಂದಾಗಲೆಲ್ಲಾ ಸಮಸ್ಯೆ ಇದೆ’ ಎಂದುಕೊಳ್ಳುತ್ತಾರೆ ಎಂದು ಪವನ್ ಕಲ್ಯಾಣ್ ಹೇಳಿದರು.
‘ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಇದು ನಮ್ಮ ವೃತ್ತಿಜೀವನಕ್ಕೆ ದೊಡ್ಡ ಕೊಡುಗೆ ಕೊಡುತ್ತದೆ.. ತೆಲುಗು ಭಾಷೆಯನ್ನು ನಮ್ಮ ಮಾತೃಭಾಷೆಯಂತೆ ಪರಿಗಣಿಸಬೇಕು. ಆದರೆ ಹಿಂದಿ ದೇಶವನ್ನು ಒಟ್ಟುಗೂಡಿಸುವ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ’ ಎಂದು ಕಲ್ಯಾಣ್ ಹೇಳಿದರು. ‘ತೆಲುಗು ಅಮ್ಮ ಐತೆ, ಹಿಂದಿ ಭಾಷಾ ಪೆದ್ದಮ್ಮ ಲಾಂತಿಡಿ’ ಅಂದ್ರೆ ‘ತೆಲುಗು ಎಂದರೆ ಅಮ್ಮ, ಹಿಂದಿ ಎಂದರೆ ದೊಡ್ಡಮ್ಮ’ ಎಂದು ಪವನ್ ಕಲ್ಯಾಣ್ ತಿಳಿಸಿದರು.