Home ರಾಜ್ಯ ಅಗ್ಗದ ರಾಜಕಾರಣದ ಮೂಲಕ ಬಿಜೆಪಿ ರಾಜ್ಯದ ಹೆಸರು ಹಾಳು ಮಾಡುತ್ತಿದೆ: ಡಿ ಕೆ ಶಿವಕುಮಾರ್‌

ಅಗ್ಗದ ರಾಜಕಾರಣದ ಮೂಲಕ ಬಿಜೆಪಿ ರಾಜ್ಯದ ಹೆಸರು ಹಾಳು ಮಾಡುತ್ತಿದೆ: ಡಿ ಕೆ ಶಿವಕುಮಾರ್‌

0

ʻರಾಮೇಶ್ವರಂ ಕೆಫೆʻ ಸ್ಫೋಟ ಪ್ರಕರಣ: ಬೆಂಗಳೂರು: ರಾಮೇಶ್ವರಮ್‌ ಕೆಫೆ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಬೆನ್ನಿಂದ ಬೆನ್ನಿಗೆ ನೀಡುತ್ತಿರುವ ಅಸಂಬದ್ಧ ಹೇಳಿಕೆಗಳ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ರಾಜ್ಯದ ಘನತೆ ಹಾಳು ಮಾಡುತ್ತಿದ್ದಾರೆಂದು ಅವರು ಟೀಕಿಸಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಬಿಜೆಪಿ ನಾಯಕರ ಹೇಳಿಕೆ ಕುರಿತು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನಿಖೆ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ. ಬೆಂಗಳೂರಿನ ಗೌರವ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ತನಿಖೆಯ ಮುಗಿಯುವ ಮೊದಲೇ ಬಿಜೆಪಿ ನಾಯಕರು ಈ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಘನತೆಗೆ ಧಕ್ಕೆ ತರುತ್ತಿದ್ದಾರೆ. ಇದರೊಂದಿಗೆ ತಮ್ಮ ಗೌರವವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತಾವು ಅಧಿಕಾರ ನಡೆಸುತ್ತಿದ್ದಾಗ ಏನೆಲ್ಲಾ ಆಗಿದೆ ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆ. ಅವರು ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕಿದೆ. ಈ ವಿಷಯದಲ್ಲಿ ರಾಜಕೀಯ ನನಗಿಷ್ಟವಿಲ್ಲ. ಇಂತಹ ಸಂದರ್ಭದಲ್ಲಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯ ಬಗ್ಗೆ ಅರಿವಿರಬೇಕು ಎಂದು ತಿಳಿಸಿದರು.

ಇದು ಬ್ರಾಂಡ್‌ ಬೆಂಗಳೂರು ಅಲ್ಲ ಬಾಂಬ್‌ ಬೆಂಗಳೂರು ಎನ್ನುವ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್‌ ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಸಮಯ ಪ್ರಜ್ಞೆ, ತಮ್ಮ ಜವಾಬ್ದಾರಿಯ ಅರಿವಿಲ್ಲದವರಷ್ಟೇ ಹೀಗೆ ಮಾತನಾಡಬಲ್ಲರು ಎಂದರು.

You cannot copy content of this page

Exit mobile version