Home ಬ್ರೇಕಿಂಗ್ ಸುದ್ದಿ ಧರ್ಮಸ್ಥಳ ಆಣೆ-ಪ್ರಮಾಣಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್; ರಾಜ್ಯ ನಾಯಕರಿಗೆ ಖಡಕ್ ಸಂದೇಶ

ಧರ್ಮಸ್ಥಳ ಆಣೆ-ಪ್ರಮಾಣಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್; ರಾಜ್ಯ ನಾಯಕರಿಗೆ ಖಡಕ್ ಸಂದೇಶ

0

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ವಿವಾದದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ಮೂಲಕ ವಿಚಾರವನ್ನು ಬಗೆಹರಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ದೆಹಲಿ ವರಿಷ್ಠರು ಕಠಿಣ ಸಂದೇಶ ರವಾನಿಸಿರುವುದಾಗಿ ಮೂಲಗಳು ತಿಳಿಸಿವೆ. ಪಕ್ಷದ ಆಂತರಿಕ ರಾಜಕೀಯ ಸಂಘರ್ಷವನ್ನು ಪವಿತ್ರ ಕ್ಷೇತ್ರವಾದ ಧರ್ಮಸ್ಥಳಕ್ಕೆ ಎಳೆದು ತರುವ ಪ್ರಯತ್ನದ ಬಗ್ಗೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನಕ್ಕೆ ರಾಜ್ಯ ನಾಯಕರ ವೈಫಲ್ಯವೇ ಕಾರಣ ಎಂದು ವರಿಷ್ಠರು ನೇರವಾಗಿ ಪ್ರಶ್ನೆ ಎತ್ತಿದ್ದಾರೆ ಎನ್ನಲಾಗಿದೆ. ಶಾಸಕರ ಮೇಲೆ ಸಮರ್ಪಕ ಹಿಡಿತ ಸಾಧಿಸಲು ವಿಫಲವಾದ ಪರಿಣಾಮ ವಿರೋಧ ಪಕ್ಷದ ಆಮಿಷಗಳಿಗೆ ಅವಕಾಶ ಸಿಕ್ಕಿತು ಎಂದು ರಾಜ್ಯ ನಾಯಕರಿಗೆ ತೀವ್ರ ತರಾಟೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವ ಪ್ರಸ್ತಾವನೆಗೂ ಹೈಕಮಾಂಡ್ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ. ಈಗಾಗಲೇ ಪಕ್ಷಕ್ಕೆ ಮುಜುಗರ ಉಂಟುಮಾಡಿರುವ ಬೆಳವಣಿಗೆಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕೇ ಹೊರತು, ಹೊಸ ವಿವಾದಗಳಿಗೆ ಕಾರಣವಾಗುವ ಕ್ರಮಗಳಿಂದ ದೂರವಿರಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಹೈಕಮಾಂಡ್‌ನ ಈ ನಿಲುವಿನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಪ್ರಮಾಣ ಕಾರ್ಯಕ್ರಮ ನಡೆಸುವ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಶಾಸಕರನ್ನು ಒಟ್ಟುಗೂಡಿಸಿ ನಡೆಸಲು ಉದ್ದೇಶಿಸಿದ್ದ ಶಾಸಕಾಂಗ ಪಕ್ಷದ ಸಭೆಯನ್ನೂ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳ ಆಣೆ-ಪ್ರಮಾಣದ ವಿಚಾರಕ್ಕೆ ಪಕ್ಷದ ಕೇಂದ್ರ ನಾಯಕತ್ವದ ಹಸ್ತಕ್ಷೇಪದ ಬಳಿಕ ತಾತ್ಕಾಲಿಕ ತೆರೆ ಬಿದ್ದಂತಾಗಿದೆ. ಆದರೆ ಅಡ್ಡಮತದಾನ ಪ್ರಕರಣದ ಕುರಿತು ಪಕ್ಷದ ಆಂತರಿಕ ಪರಿಶೀಲನೆ ಮತ್ತು ಹೊಣೆಗಾರಿಕೆ ನಿಗದಿ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಇದೆ.

You cannot copy content of this page

Exit mobile version