ಬೆಂಗಳೂರು: ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ಕುತೂಹಲದ ಒಂದೊಂದೇ ಹಂತವನ್ನು ದಾಟುತ್ತಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಲೋಕಾಯುಕ್ತ FIR ದಾಖಲಿಸಿತ್ತು
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ದೊಡ್ಡ ದನಿಯಲ್ಲಿ ಸಿದ್ಧರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಲು ಸಿದ್ಧವಾಗುತ್ತಿರುವಾಗಲೇ ಅದರ ಉತ್ಸಾಹದ ಪುಗ್ಗೆಗೆ ರಾಜ್ಯ ಜನಪ್ರತಿನಿಧಿಗಳ ನ್ಯಾಯಾಲಾಯ ಗುಂಡು ಸೂಜಿ ಚುಚ್ಚಿ ಡಮ್ ಎನ್ನಿಸಿದೆ.
ಹೌದು ಕೇಂದ್ರ ಸಚಿವೆ ಹಾಗೂ ಕರ್ನಾಟದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಮನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಇದೀಗ ನೈತಿಕತೆಯ ಆಧಾರದಲ್ಲಿ ಮುಖ್ಯಮಂತ್ರಿಯ ರಾಜೀನಾಮೆ ಕೇಳುತ್ತಿದ್ದ ಬಿಜೆಪಿ ತಾನೇ ಆ ಬಲೆಯಲ್ಲಿ ಸಿಕ್ಕಿಕೊಂಡಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ “ನಿರ್ಮಲಾ ಸೀತಾರಾಮನ್ ಮೇಲೆ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ?” ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನ ಕೆಡಿಪಿ ಸಭೆ ಬಳಿಕ ಮಾತನಾಡಿದ ಅವರು, “ಹೆಚ್.ಡಿ ಕುಮಾರಸ್ವಾಮಿ ಮೊದಲು ನಿರ್ಮಲಾ ಸೀತಾರಾಮನ್ ಅವರನ್ನು ಕೆಳಗಿಳಿಸಲಿ, ಬಳಿಕ ನನ್ನ ರಾಜೀನಾಮೆ ಕೇಳಲಿ. ಚುನಾವಣಾ ಬಾಂಡ್ ದುರುಪಯೋಗ ಮಾಡಿರುವುದರಿಂದ ಪ್ರಧಾನಿ ಮೋದಿ ಕೂಡ ರಾಜೀನಾಮೆ ಕೊಡಬೇಕು” ಎಂದರು.
ಒಟ್ಟಾರೆ ನ್ಯಾಯಾಲಯದ ಈ ಆದೇಶದೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಸಿದ್ಧರಾಮಯ್ಯನವರಿಗೆ ಕಾಲವೇ ಇನ್ನೊಂದು ಅವಕಾಶವನ್ನು ತಂದುಕೊಟ್ಟಂತಿದೆ. ಇದನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳಲಿದೆ ಎನ್ನುವುದೇ ಮುಂದಿನ ಕುತೂಹಲ.