ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರಿಂದ ಹಲ್ಲೆಗೆ ಒಳಗಾಗಿದ್ದೇನೆ ಎಂದು ಆರೋಪಿಸುತ್ತಿರುವ ಸ್ವಾತಿ ಮಾಲಿವಾಲ್ ಅವರಿಂದ ಬಿಜೆಪಿ ಸಂಚು ರೂಪಿಸಲು ಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
ಸ್ವಾತಿ ಮಲಿವಾಲ್ ಅವರು ಈ ಹಿಂದೆಯೇ ಅನಧಿಕೃತ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಕೇಜ್ರಿವಾಲ್ ವಿರುದ್ಧ ಸಂಚು ರೂಪಿಸಲು ಬಿಜೆಪಿ ಅವರಿಗೆ ಸ್ವಾತಿ ಅವರಿಗೆ ಬೆದರಿಕೆ ಹಾಕಿದೆ ಹಾಗಾಗಿ ಸ್ವಾತಿ ಅವರು ಈ ಡ್ರಾಮಾ ಆಡುತ್ತಿದ್ದಾರೆ ಎಂದು ಎಎಪಿ ನಾಯಕಿಯೂ ಆಗಿರುವ ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.
ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಅವರು, ಸಮಯ ನಿಶ್ಚಯ ಮಾಡದೇ ಮಾಲಿವಾಲ್ ಅವರು ಸೋಮವಾರ ಮುಖ್ಯಮಂತ್ರಿಗಳ ಕಚೇರಿಗೆ ಭೇಟಿ ನೀಡಿದ್ದರು.‘ಮುಖ್ಯಮಂತ್ರಿಗಳ ಕಚೇರಿಯ ಒಳಗೆ ನುಗ್ಗಿದ್ದು ಯಾಕೆ? ಮುಖ್ಯಮಂತ್ರಿಗಳ ಕಚೇರಿಗೆ ಸಮಯ ನಿಶ್ಚಯ ಮಾಡದೇ ತೆರಳಿದ್ದೇಕೆ? ಎಂದು ಅತಿಶಿ ಪ್ರಶ್ನಿಸಿದ್ದಾರೆ.
ಕೆಲಸದ ಒತ್ತಡ ಇದ್ದಿದ್ದರಿಂದ ಕೇಜ್ರಿವಾಲ್ ಆದಿನ ಮಾಲಿವಾಲ್ ಅವರನ್ನು ಭೇಟಿ ಮಾಡಿರಲಿಲ್ಲ. ಒಂದು ವೇಳೆ ಭೇಟಿಯಾಗಿದ್ದರೆ, ವಿಭವ್ ಕುಮಾರ್ ವಿರುದ್ಧ ಮಾಡಿರುವ ಆರೋಪ ಕೇಜ್ರಿವಾಲ್ ಮೇಲೆ ಬರುತ್ತಿತ್ತು’ ಎಂದು ಅತಿಶಿ ಹೇಳಿದ್ದಾರೆ.
‘ಬಿಜೆಪಿ ಒಂದು ಮಾದರಿಯನ್ನು ಅನುಸರಿಸುತ್ತದೆ, ಮೊದಲು ನಾಯಕರನ್ನು ಜೈಲಿಗೆ ಕಳಿಸಲು ಪ್ರಕರಣಗಳನ್ನು ದಾಖಲಿಸುತ್ತದೆ. ಸ್ವಾತಿ ಮಾಲಿವಾಲ್ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಕ್ರಮ ನೇಮಕಾತಿ ಪ್ರಕರಣದ ದೂರು ದಾಖಲಿಸಿಕೊಂಡಿದೆ. ಸ್ವಾತಿ ಎಎಪಿ ವಿರುದ್ಧ ಸಂಚು ಮಾಡದಿದ್ದರೆ ಬಂಧನಕ್ಕೆ ಒಳಗಾಗಬೇಕಾಗುತ್ತದೆ, ಬಿಜೆಪಿ ಅವರನ್ನು ಬೆದರಿಸಿ ಸಂಚು ರೂಪಿಸಿದೆ’ ಎಂದು ಅತಿಶಿ ದೂರಿದ್ದಾರೆ.