ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ‘ಮೈಸೂರು ಚಲೋ’ ಪಾದಯಾತ್ರೆಯ ಆರನೇ ದಿನವಾದ ಗುರುವಾರ ಮೈತ್ರಿಕೂಟದ ಪಾಲುದಾರ ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರು ಮತ್ತು ಕಾರ್ಯಕರ್ತರು ಪ್ರತ್ಯೇಕವಾಗಿ ಪಾದಯಾತ್ರೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಪಕ್ಷದ ಮುಖಂಡರಾದ ಸಿ.ಟಿ.ರವಿ, ಇಂಡುವಾಳು ಸಚ್ಚಿದಾನಂದ, ಜಿಲ್ಲಾಧ್ಯಕ್ಷ ಇಂದ್ರೇಶ್ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು.
ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಗಣಂಗೂರಿನಿಂದ ಕೆ ಶೆಟ್ಟಹಳ್ಳಿವರೆಗೆ ಒಂದು ಫರ್ಲಾಂಗ್ ದೂರದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಿಂಬಾಲಿಸಿದರು.
ಬಿಜೆಪಿ ಗುಂಪಿನ ಧ್ವನಿವರ್ಧಕಗಳಲ್ಲಿ ವಿಜಯೇಂದ್ರ ಅವರನ್ನು ಹಾಡಿ ಹೊಗಳುವ ಹಾಡುಗಳು ಬರುತ್ತಿದ್ದರೆ ಅತ್ತ ಜೆಡಿಎಸ್ ಮೆರವಣಿಗೆಯಲ್ಲಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಅವರನ್ನು ಹಾಡಿ ಹೊಗಳಿದ ಹಾಡುಗಳು ಪ್ರಸಾರವಾಗುತ್ತಿದ್ದವು.
ಟಿಎಂ ಹೊಸೂರು ಗೇಟ್ ಬಳಿ ಪಕ್ಷದ ಕಾರ್ಯಕರ್ತರು ನಿಖಿಲ್ ಅವರನ್ನು ಹೆಗಲ ಮೇಲೆ ಹೊತ್ತು ಸುಮಾರು 100 ಮೀಟರ್ ವರೆಗೆ ಮೆರವಣಿಗೆ ನಡೆಸಿ, ಜಯಘೋಷಗಳನ್ನು ಕೂಗಿದರು. ನಿಖಿಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹಲವರು ಹರಸಾಹಸ ಪಟ್ಟರು.
ಬಿಜೆಪಿ ಕಾರ್ಯಕರ್ತರೂ ವಿಜಯೇಂದ್ರ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು.
ಕಲಬುರಗಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ರಾಯಚೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳ ನೂರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.