ಶಿಕ್ಷಕರ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಬಿಹಾರದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡನೊಬ್ಬ ಮೃತಪಟ್ಟಿದ್ದಾರೆ. ಪ್ರತಿಭಟನಾ ನಿರತರ ಮೇಲೆ ಪಾಟ್ನಾ ಪೊಲೀಸರು ಲಾಠಿಚಾರ್ಜ್ ನಡೆಸಿದಾಗ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಟ್ವಿಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಶಿಕ್ಷಕರ ನೇಮಕಾತಿಗಾಗಿ ಬಿಜೆಪಿ ಪಕ್ಷ ‘ವಿಧಾನಸಭಾ ಮಾರ್ಚ್’ ಹೆಸರಿನಲ್ಲಿ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆ ಕ್ರಮೇಣ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ, ಪೊಲೀಸರು ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ. ಪ್ರತಿಭಟನೆಗಳ ನಡುವೆ ನಗರದ ದಕ್ಬಂಗ್ಲಾ ಚೌರಾಹಾದಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ ಬಿಜೆಪಿ ಮುಖಂಡನೊಬ್ಬ ಸಿಲುಕಿದ್ದು ತೀವ್ರತರವಾದ ಹೊಡೆತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ವಿಜಯ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಲಾಠಿಚಾರ್ಜ್‌ನಲ್ಲಿ ಗಾಯಗೊಂಡಿದ್ದ ವಿಜಯ್ ಕುಮಾರ್ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಾಹಿತಿಯನ್ನು ರಾಜ್ಯಸಭಾ ಸಂಸದ ಸುಶೀಲ್ ಮೋದಿ ದೃಢಪಡಿಸಿದ್ದು, ಟ್ವಿಟರ್‌ನಲ್ಲಿ ಬಿಜೆಪಿ ನಾಯಕ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಹಾಗೆಯೇ ಲಾಠಿಚಾರ್ಜ್ ಕೂಡಾ ನಡೆಸಿದ್ದಾರೆ.
ಲಾಠಿಚಾರ್ಜ್ ನಲ್ಲಿ ಬಿಜೆಪಿ ಮುಖಂಡ ವಿಜಯ್ ಕುಮಾರ್ ಸಿಂಗ್ ಮೃತಪಟ್ಟ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು “ಬಿಹಾರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ರಾಜ್ಯ ಸರ್ಕಾರದ ವೈಫಲ್ಯ ಮತ್ತು ಅದಕ್ಷತೆಯ ಪರಿಣಾಮವಾಗಿದೆ. ಮಹಾಘಟಬಂಧನದ ಸರ್ಕಾರ ಭ್ರಷ್ಟಾಚಾರ ಮರೆಮಾಚಲು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದೆ. ಬಿಹಾರದ ಮುಖ್ಯಮಂತ್ರಿ, ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಸ್ವಂತ ನೈತಿಕತೆಯನ್ನು ಮರೆತಿದ್ದಾರೆ” ಎಂದು ಜೆಪಿ ನಡ್ಡಾ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಬಿಹಾರ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಮುಂದಿನ ವಾರದವರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ರಜೆಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ರಜೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಶೇಷ ಸಂದರ್ಭಗಳಲ್ಲಿ ರಜೆ ಪಡೆಯಲು ಉಪ ಕಾರ್ಯದರ್ಶಿ ಕೆಕೆ ಪಾಠಕ್ ಅವರಿಂದ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.