ನವದೆಹಲಿ: ತನ್ನ ತಂದೆ ವಿರುದ್ಧ ಬಿಜೆಪಿ ನಾಯಕ ರಮೇಶ್ ಬಿಧುರಿ ಅವರು ಹೇಳಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದೆಹಲಿ ಮುಖ್ಯಮಂತ್ರಿ ಅತಿಶಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರುಗರೆದರು.
“ವಯಸ್ಸಾದ, ನಡೆಯಲು ಇನ್ನೊಬ್ಬರ ಆಸರೆ ಬೇಕಿರುವ ನನ್ನ ತಂದೆಯನ್ನು ರಾಜಕೀಯ ಲಾಭಕ್ಕಾಗಿ ಅವರು ಬಳಸಿಕೊಳ್ಳುತ್ತಿದ್ದಾರೆ” ಎಂದು ಅತಿಶಿ ಕಣ್ಣೀರಿಟ್ಟಿದ್ದಾರೆ. ಬಿಜೆಪಿ ನಾಯಕ ಬಿಧುರಿಯ ಟೀಕೆಗಳ ಬಗ್ಗೆ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿ, ಇಂತಹ ತಂತ್ರಗಳು ತೀವ್ರ ನೋವುಂಟುಮಾಡುತ್ತವೆ ಎಂದರು.
ಪಕ್ಷದ ಕೆಲಸ ಮತ್ತು ಜನಸೇವೆಯ ಮೂಲಕ ಮತಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು. ಅದು ಬಿಟ್ಟು ರಾಜಕೀಯ ಪ್ರಚಾರದಲ್ಲಿ ವೈಯಕ್ತಿಕ ದಾಳಿ ಅಥವಾ ಕುಟುಂಬ ಸದಸ್ಯರನ್ನು ಬಳಸಿ ಶೋಷಣೆ ಮಾಡುವುದು ಸರಿಯಲ್ಲ, “ನೀವು ನಿಮ್ಮ ಕೆಲಸದ ವಿಚಾರಗಳಿಂದ ಮಾತ್ರ ಪ್ರಚಾರ ಮಾಡಿ ಎಂದು ಅವರು ತಿರುಗೇಟು ನೀಡಿದರು.
ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ರಮೇಶ್ ಬಿಧುರಿ, ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ವಿರುದ್ಧ ವಾಗ್ದಾಳಿ ನಡೆಸುತ್ತಾ, ಮರ್ಲೆನಾ ತನ್ನ ತಂದೆಯನ್ನೆ ಬದಲಾಯಿಸಿದರು. ಮೊದಲು ಅವಳು ಮರ್ಲೆನಾ ಆಗಿದ್ದರು. ಈಗ ಅವಳು ಸಿಂಗ್ ಆಗಿದ್ದಾರೆ. ಇದು ಅವರ ಚಾರಿತ್ರ್ಯ” ಎಂದು ವ್ಯಂಗ್ಯವಾಡಿದ್ದರು.
“ಅವರು ನಾಚಿಕೆಯ ಎಲ್ಲ ಮಿತಿಗಳನ್ನು ದಾಟಿದ್ದು, ಮಹಿಳಾ ಮುಖ್ಯಮಂತ್ರಿಯನ್ನು ಅವಮಾನ ಮಾಡಿರುವುದನ್ನು ದೆಹಲಿಯ ಜನರು ಸಹಿಸುವುದಿಲ್ಲ. ಇದರ ವಿರುದ್ಧ ದೆಹಲಿಯ ಎಲ್ಲಾ ಮಹಿಳೆಯರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ” ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.
ಬಿಧುರಿ ಅವರು ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಕೂಡಾ ಅಶ್ಲೀಲ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳು ಬಿಜೆಪಿಯ “ಮಹಿಳಾ ವಿರೋಧಿ” ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಕಾಂಗ್ರೆಸ್ ಸಹ ಆರೋಪಿಸಿದೆ.
“ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಯಂತೆ ಮಾಡುವುದಾಗಿ ಹೇಳಿದ್ದರು. ಆದರೆ ಅವರು ಸುಳ್ಳು ಹೇಳಿದ್ದು, ಅವರಿಗೆ ಅದನ್ನು ಮಾಡಲು ಸಾಧ್ಯವಾಗಿಲ್ಲ. ಆದರೆ, ನಾವು ಕಲ್ಕಾಜಿಯ ಎಲ್ಲಾ ರಸ್ತೆಗಳನ್ನು ಪ್ರಿಯಾಂಕ ಗಾಂಧಿ ಅವರ ಕೆನ್ನೆಗಳಂತೆ ಮಾಡುತ್ತೇವೆ ಎಂದು ಬಿದುರಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು, “ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಅಷ್ಟೆ ಅಲ್ಲದೆ, ಅವರ ಹೇಳಿಕೆ ಅವರ ಕೊಳಕು ಮಹಿಳಾ ವಿರೋಧಿ ಚಿಂತನೆಯನ್ನು ಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
“