ಗದಗ/ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದಿದ್ದರೂ ರಾಜಕೀಯ ವಲಸೆಗಳ ಪರ್ವ ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ ಚುನಾವಣೆಯ ಹೊತ್ತಿನಲ್ಲಿ ಆರಂಭವಾಗಿದ್ದ ರಾಜಕೀಯ ವಲಸೆ ಇನ್ನೂ ಮುಂದುವರೆಯುತ್ತಲೇ ಇದೆ.
ಅದರಲ್ಲಿ ದೇಶದ ಅತಿ ದೊಡ್ಡ ಪಕ್ಷ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ಬಿಜೆಪಿ ರಾಜ್ಯದಲ್ಲಿ ಚೂರು ಚೂರಾಗಿದ್ದು, ಅದರ ನಾಯಕರು ದಿಕ್ಕಾಪಾಲಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅತ್ತ ರಾಷ್ಟ್ರೀಯ ನಾಯಕು ರಾಜ್ಯ ಬಿಜೆಪಿ ನಾಯಕರನ್ನು ಸವತಿ ಮಕ್ಕಳಂತೆ ನೋಡಿಕೊಳ್ಳುತ್ತಾ ಅವರ ಜೊತೆ ಸಮಾಲೋಚನೆಯನ್ನೇ ನಡೆಸದೆ ಜೆಡಿಎಸ್ ಜೊತೆ ಕೈಜೋಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡೂ ಪಕ್ಷಗಳಲ್ಲಿ ಅಪಸ್ವರ ಕೇಳಿ ಬರುತ್ತಿದ್ದು, ಸ್ಥಳೀಯ ನಾಯಕರು ಸಹಿಸಲಾಗದ ಮುಜುಗರ ಮತ್ತು ಮುಖಭಂಗ ಎದುರಿಸುತ್ತಿದ್ದಾರೆ.
ಮುಂದುವರೆದ ರಾಜಕೀಯ ವಲಸೆಯ ಭಾಗವಾಗಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇಂದು ಅವರು ಕಾಂಗ್ರೆಸ್ಸಿನ ಬೆಂಗಳೂರು ಮುಖ್ಯ ಕಚೇರಿಯಲ್ಲಿ ಡಿಕೆ ಶಿವಕುಮಾರು ಮುಂತಾದ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಅವರೊಂದಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಮ್ ಪಿ ಕುಮಾರಸ್ವಾಮಿ ಕಳೆದ ಸಲ ಬಿಜೆಪಿ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿದ್ದರು. ಆದರೆ ಈಗ ಬಿಜೆಪಿ ಜೆಡಿಎಸ್ ಹೆಗಲ ಮೇಲೆ ಕೈಯಿಟ್ಟಿದ್ದು, ಕ್ಷೇತ್ರದಲ್ಲಿ ಅವರಿಗೆ ಮುಖಭಂಗವಾಗಿದೆ. ಹೀಗಾಗಿ ಅವರು ಇದೇ ತಿಂಗಳ 20ರಂದು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆ ಮುಗಿಸಿದ್ದು ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ.