ಬೆಂಗಳೂರು: ಧರ್ಮದ ಹೆಸರಿನಲ್ಲಿ ‘ಲೂಟಿ’ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದ ಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಅಯೋಧ್ಯೆಯಲ್ಲಿ ರಾಮ ಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುಮಾರು 5,000 ಕೋಟಿ ರೂ. ದುರುಪಯೋಗವಾಗಿದೆ ಎಂಬ ವರದಿಗಳಿವೆ. ಅರ್ಚಕರು ಹಣವನ್ನು ದೋಚುತ್ತಿದ್ದಾರೆ. ರಾಮನ ಹೆಸರನ್ನು ಜಪಿಸಿ ಬೇರೆಯವರ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ರಾಮನ ಹೆಸರಿನಲ್ಲಿ ಲೂಟಿ ನಡೆದಿದೆ. ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲು ದೇವಾಲಯವನ್ನು ನಿರ್ಮಿಸಲಾಗಿದೆ” ಎಂದು ಅವರು ಆರೋಪಿಸಿದರು.
ದೇವಾಲಯಗಳನ್ನು ಸಾಮಾನ್ಯವಾಗಿ ಸ್ವಾಮೀಜಿಗಳು ಮತ್ತು ಮಠಾಧೀಶರು ಉದ್ಘಾಟಿಸುತ್ತಾರೆ, ಆದರೆ ರಾಮ ಮಂದಿರವನ್ನು ಪ್ರಧಾನಿಯೇ ಉದ್ಘಾಟಿಸಿದ್ದಾರೆ. ದೇವಾಲಯದ ಹುಂಡಿಯಿಂದ ಬರುವ ಹಣ ಎಲ್ಲೋ ಹೋಗುತ್ತಿದೆ. ಅವರ ಸ್ವಂತ ಜನರು ಇದರ ಹಿಂದೆ ಇದ್ದಾರೆಯೇ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ತನಿಖೆ ಮಾಡಬೇಕು” ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ನೀಟ್ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೋದಿ ಸರ್ಕಾರ ದ್ರೋಹ ಮಾಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮೋದಿ ಹಾಗೂ ಟ್ರಂಪ್ ತಮ್ಮನ್ನು ತಾವು ಒಳ್ಳೆಯ ಸ್ನೇಹಿತರು ಎಂದು ಕರೆದುಕೊಳ್ಳುತ್ತಾರೆ. ಆದರೆ, ಮೋದಿ ದೇಶವನ್ನು ನಾಶಪಡಿಸುತ್ತಿದ್ದರೆ, ಟ್ರಂಪ್ ಇಡೀ ಜಗತ್ತನ್ನು ನಾಶಪಡಿಸುತ್ತಿದ್ದಾರೆ. ನಿಮ್ಮಿಬ್ಬರಿಂದ ಜನರು ಬಳಲುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಂಧನ ಬೆಲೆ ಏರಿಕೆಗೆ ಟ್ರಂಪ್ ಅವರನ್ನು ದೂಷಿಸಿದ ಖರ್ಗೆ, ನೆಹರೂ ಕಾಲದಿಂದಲೂ ಭಾರತ ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ ಮತ್ತು ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದೆ. ಆದರೆ ಆ ನೀತಿಯನ್ನು ಕೈಬಿಡಲಾಗಿದೆ. ಮೋದಿ ಎಲ್ಲರನ್ನೂ ತನ್ನ ಸ್ನೇಹಿತರು ಎಂದು ಕರೆಯುವ ಮೂಲಕ ಮತ್ತು ಅವರನ್ನು ಅಪ್ಪಿಕೊಳ್ಳುವ ಮೂಲಕ ನಮ್ಮನ್ನು ಈ ಪರಿಸ್ಥಿತಿಗೆ ತಂದಿದ್ದಾರೆ ಎಂದು ಹೇಳಿದರು.
