ಹಾಸನ: ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯು 1991 ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ಕೆಲವು ವಾಹನಗಳ ಬಾಕಿ ತೆರಿಗೆ ಪಾವತಿಗೆ ವಿಶೇಷ ರಿಯಾಯಿತಿ ಘೋಷಿಸಿದೆ ಎಂದು ಜೆ.ಪಿ ಪ್ರಕಾಶ್ ಆರ್ ಟಿ ಒ ಅಧಿಕಾರಿ ಅವರು ತಿಳಿಸಿದರು. ಸಾರಿಗೆ ಇಲಾಖೆಯಿಂದ ಪ್ರಕಟಿಸಲಾದ ಮಾಹಿತಿಯ ಪ್ರಕಾರ, 01 ಏಪ್ರಿಲ್ 1991 ರಿಂದ 31 ಮಾರ್ಚ್ 2022ರ ಅವಧಿಯಲ್ಲಿ ನೋಂದಾಯಿಸಲಾದ ವಾಹನಗಳ ತೆರಿಗೆ ಬಾಕಿಗೆ ಶೇ.50ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಈ ಯೋಜನೆಯಡಿ ಬಾಕಿ ಇರುವ ತೆರಿಗೆಯನ್ನು ಪಾವತಿಸುವ ಮೂಲಕ ವಾಹನ ಮಾಲೀಕರು ಕಾನೂನುಬದ್ಧವಾಗಿ ವಾಹನಗಳ ದಾಖಲೆಗಳನ್ನು ನವೀಕರಿಸಿಕೊಳ್ಳಬಹುದಾಗಿದೆ.
ಈ ವಿಶೇಷ ಸೌಲಭ್ಯವು ಜೂನ್ 21, 2026ರಿಂದ ಜುಲೈ 10, 2026ರವರೆಗೆ ಮಾತ್ರ ಜಾರಿಯಲ್ಲಿರಲಿದ್ದು, ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿದ ವಾಹನ ಮಾಲೀಕರಿಗೆ ರಿಯಾಯಿತಿಯ ಪ್ರಯೋಜನ ದೊರೆಯಲಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ವಾಹನ ಮಾಲೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಾಕಿ ತೆರಿಗೆ ಪಾವತಿಸಿ, ಮುಂದಿನ ದಿನಗಳಲ್ಲಿ ಕಾನೂನು ಸಂಬಂಧಿತ ತೊಂದರೆಗಳನ್ನು ತಪ್ಪಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಥವಾ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಯಶವಂತ್ ಕುಮಾರ್, ಆಶಾ ಉಪಸ್ಥಿತರಿದ್ದರು.
