ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ವರಮಹಾಲಕ್ಷ್ಮಿ ಹಬ್ಬದ ನೆಪದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಜೆಪಿ ಪಕ್ಷ ಸೀರೆ ಹಂಚಲು ಹೊರಟಿದೆ. ಅದರ ಒಂದು ಭಾಗವಾಗಿ ತೀರ್ಥಹಳ್ಳಿಯಲ್ಲಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿ ಸೀರೆ ಹಂಚಿದ್ದಾರೆ.
ಕಳೆದ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿ ನಾಣ್ಯ ಹಂಚಿ ದೊಡ್ಡ ಸುದ್ದಿಯಾಗಿತ್ತು. ಸಧ್ಯ ಈ ಬಾರಿ ಬೆಳ್ಳಿ ನಾಣ್ಯ ಹಂಚಿದ ಬಗ್ಗೆ ವರದಿಯಾಗಿಲ್ಲ. ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಈ ಕಾರ್ಯಕ್ರಮದ ಕೇಂದ್ರಬಿಂದು. ಹಾಗಾಗಿ ಇದೊಂದು ಸ್ಪಷ್ಟವಾಗಿ ಚುನಾವಣಾ ತಯಾರಿ ಎಂದೇ ಸ್ಥಳೀಯ ಜನ ಮಾತಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ನಂತರ ಜಿಲ್ಲೆಯಲ್ಲಿ ಬಿಜೆಪಿ ವರ್ಚಸ್ಸು ಸಂಪೂರ್ಣವಾಗಿ ಕುಸಿದಿದೆ. ಪ್ರಮುಖವಾಗಿ ಬಿಜೆಪಿ ಗ್ಯಾರಂಟಿ ಮತಗಳು ಇರುವ ಕಡೆಗಳಲ್ಲಿ ಪಕ್ಷ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಲು ಹೈಕಮಾಂಡ್ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಇನ್ನಿಲ್ಲದ ಕಸರತ್ತಿಗೆ ಮುಂದಾಗಿದೆ. ವಿಶೇಷವಾಗಿ ಬಿಜೆಪಿ ಭದ್ರಕೋಟೆಯಂತಿದ್ದ ಶಿಕಾರಿಪುರದಲ್ಲೇ ಬಿಜೆಪಿಗೆ ಆತಂಕ ಸೃಷ್ಟಿಯಾಗಿದೆ ಎಂದು ಅಂದಾಜಿಸಲಾಗಿದೆ.
ಬಾಗಿನ ಕೊಡುವ ನೆಪದಲ್ಲಿ ಬಿಜೆಪಿ ಪಕ್ಷ ಚುನಾವಣಾ ತಯಾರಿ ನಡೆಸಿದೆ. ನ್ಯಾಯವಾಗಿ ಕೆಲಸ ಮಾಡಿದ್ದಿದ್ದರೆ, ಈ ರೀತಿ ಸೀರೆ ಹಂಚುವ ಕಾಯಕಕ್ಕೆ ಕೈ ಹಾಕುವ ಅಗತ್ಯ ಇರಲಿಲ್ಲ. ಇದು ಸ್ಪಷ್ಟವಾಗಿ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಆರೋಪಿಸಿದೆ.