ಬೆಂಗಳೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಯನ್ನು ಪ್ರಶ್ನಿಸುತ್ತಿರುವ ಬಿಜೆಪಿಯ ನಿಲುವಿಗೆ ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, “ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕೆ ಕರೆದಿರಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್ತು ಉದ್ಘಾಟನೆಯ ವೇಳೆ ಶಿಷ್ಟಾಚಾರದ ಪ್ರಕಾರ ಯಾರು ಮುಖ್ಯಸ್ಥರಾಗಿರಬೇಕಿತ್ತು? ಆಗ ಶಿಷ್ಟಾಚಾರವನ್ನು ಏಕೆ ಪಾಲಿಸಲಿಲ್ಲ? ಮುರ್ಮು ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಅಥವಾ ವಿಧವೆ ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸಲಾಯಿತೇ ಎಂದು ನೇರವಾಗಿ ಪ್ರಶ್ನಿಸಿದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡುವಾಗ ‘ಮುಸ್ಲಿಂ’ ಎಂಬ ಪದ ಬರಲಿಲ್ಲವೇ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ, ಬಿಜೆಪಿಯವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ಎಷ್ಟು ದೇವಾಲಯಗಳನ್ನು ನಿರ್ಮಿಸಿದ್ದಾರೆ? ನಮ್ಮ ಕಾಲದಲ್ಲಿ 6.66 ಲಕ್ಷ ದೇವಾಲಯಗಳನ್ನು ನಿರ್ಮಿಸಲಾಗಿದೆ. ಬಿಜೆಪಿಯವರು ರಾಮಮಂದಿರವನ್ನು ಜನರ ಹಣದಿಂದ ಕಟ್ಟಿದ್ದಾರೆ ಎಂದು ಲಾಡ್ ಆರೋಪಿಸಿದರು. ಜೊತೆಗೆ, ಬಾನು ಮುಷ್ತಾಕ್ ಆಯ್ಕೆ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಈ ವಿಷಯದಲ್ಲಿ ಯದುವೀರ್ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಸಂತೋಷ್ ಲಾಡ್ ನುಡಿದರು.