Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 6: ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಬಂಧನಕ್ಕೊಗಾಗಿದ್ದ ಎಕೆಜಿ, ಜನರ ಹಕ್ಕುಗಳ...

ಸಂಸತ್ತಿನ ಪೂರ್ವಸೂರಿಗಳು – 6: ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಬಂಧನಕ್ಕೊಗಾಗಿದ್ದ ಎಕೆಜಿ, ಜನರ ಹಕ್ಕುಗಳ ಹೋರಾಟ ಬಿಟ್ಟಿರಲಿಲ್ಲ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಆರನೇ ಲೇಖನ

ಕಟ್ಟಾ ರಾಷ್ಟ್ರೀಯವಾದಿಯಾಗಿದ್ದ ಗೋಪಾಲನ್‌ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿದ್ದರು. ನಂತರ ಭಾರತೀಯ ಕಮ್ಯುನಿಸ್ಟ್‌ ಪಕ್ಷ ಸೇರಿ, 1952ರಲ್ಲಿ ಮೊದಲ ಲೋಕಸಭೆಗೆ ಆಯ್ಕೆಯಾದ ಕಮ್ಯುನಿಸ್ಟ್‌ ಪಕ್ಷದ 16 ಸದಸ್ಯರಲ್ಲಿ ಒಬ್ಬರಾದರು. ನಂತರದ ಕಾಲದಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ಯ ಸ್ಥಾಪಕ ಸದಸ್ಯರಲ್ಲೊಬ್ಬರಾದರು.

1947 ಆಗಸ್ಟ್‌ 15ರಂದು ಭಾರತವು ಪರಕೀಯರ ಆಳ್ವಿಕೆಯಿಂದ ಸ್ವತಂತ್ರಗೊಳ್ಳುವ ಹೊತ್ತಿನಲ್ಲಿ ಕೇರಳದ ಕಣ್ಣೂರು ಜೈಲಿನಲ್ಲಿ ದೇಶದ್ರೋಹದ ಆರೋಪದ ಮೇಲೆ ಒಬ್ಬ ಆರೋಪಿಯನ್ನು ಬಂಧಿಸಿಡಲಾಗಿತ್ತು. ಆತನ ಅಪರಾಧ ಏನಾಗಿತ್ತು? ಸ್ವಾತಂತ್ರ್ಯ ದಿನವನ್ನು ಆಚರಿಸಲು ಮತ್ತು ಇನ್ನು ಮುಂದೆ ಭಾರತವನ್ನು ತನ್ನ ವಸಾಹತು ಎಂದು ಕರೆಯಲಾಗದ ಇಂಗ್ಲೆಂಡ್‌ ರಾಜನ ವಿರುದ್ಧ ಪ್ರತಿಭಟಿಸಲು ಜನರಿಗೆ ಕರೆ ನೀಡಿದ್ದೇ ಆತನ ಅಪರಾಧಗಳು.

ಅದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್‌ ನಾಯಕ, ಸಂಸದೀಯ ಪಟು ಮತ್ತು ನಾಗರೀಕ ಹಕ್ಕುಗಳ ಪ್ರತಿಪಾದಕ ಏಕೆಜಿ ಎಂದೇ ಜನಪ್ರಿಯರಾದ ಆಯಿಲ್ಯತ್‌ ಕುಟ್ಟಿಯೇರಿ ಗೋಪಾಲನ್‌ ನಂಬಿಯಾರ್ ಎಂಬ ಏ.ಕೆ. ಗೋಪಾಲನ್.‌ ಉತ್ತರ ಮಲಬಾರಿನ ಚಿರಕ್ಕಲ್‌ ತಾಲೂಕಿನ (ಕಣ್ಣೂರು ಜಿಲ್ಲೆ) ಮಾವಿಲಾಯಿ ಎಂಬಲ್ಲಿ ಏಕೆಜಿಯವರ ಜನನ. ತಲಶೇರಿಯಲ್ಲಿ ಶಿಕ್ಷಣ.

“ಇನ್ ದಿ ಕಾಸ್ ಆಫ್ ದಿ ಪೀಪಲ್” ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಏಕೆಜಿ ಬರೆಯುತ್ತಾರೆ. “ದೇಶಾದ್ಯಂತ ಸಂಭ್ರಮ ಎಲ್ಲೆ ಮೀರಿತ್ತು. 1947 ಆಗಸ್ಟ್‌ 14 ರಂದು ನಾನು ಕಣ್ಣೂರಿನ ಆ ದೊಡ್ಡ ಜೈಲಿನೊಳಗೆ ಏಕಾಂತ ಬಂಧನದಲ್ಲಿದ್ದೆ. ಬೇರೆ ಯಾರನ್ನೂ ಅಲ್ಲಿ ಮುಂಜಾಗ್ರತಾ ಬಂಧನದಲ್ಲಿ ಇಟ್ಟಿರಲಿಲ್ಲ. ಕಾವುಂಬಾಯಿ ಮತ್ತು ಕರಿವೆಳ್ಳೂರು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ ಅನೇಕ ಸಂಗಾತಿಗಳು ಅಲ್ಲಿದ್ದರು. ಅವರಲ್ಲಿ ಕೆಲವರು ವಿಚಾರಣಾ ಹಂತದಲ್ಲಿದ್ದರೆ, ಇನ್ನು ಕೆಲವರು ವಿಚಾರಣೆಯನ್ನು ಎದುರು ನೋಡುತ್ತಿದ್ದರು. ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ. ಜೈಲಿನ ನಾಲ್ಕು ಮೂಲೆಗಳಿಂದಲೂ ಜೈಕಾರಗಳು ಮೊಳಗುತ್ತಿದ್ದವು. “ಮಹಾತ್ಮಾ ಗಾಂಧಿ ಕೀ ಜೈ” ಮತ್ತು “ಭಾರತ್‌ ಮಾತಾ ಕೀ ಜೈ” ಘೋಷಣೆಗಳು ಜೈಲಿನಲ್ಲಿ ಪ್ರತಿಧ್ವನಿಸಿದವು. ಸೂರ್ಯೋದಯದ ನಂತರ ಈ ಸಡಗರವನ್ನು ಸಂಭ್ರಮಿಸಲು ಇಡಿಯ ದೇಶವೇ ಕಾಯುತ್ತಿತ್ತು. ಹಾಗೆ ಕಾಯುತ್ತಿರುವ ಅದೆಷ್ಟೋ ಜನರು ವರ್ಷಗಳ ಕಾಲ ಈ ದಿನಕ್ಕಾಗಿ ಕಾಯುತ್ತಿದ್ದರು. ಅದೆಷ್ಟು ಕಾಲ ಹೋರಾಡಿದರು. ಆ ಹೋರಾಟದಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡರು. ನೋವು ಮತ್ತು ಆನಂದದ ಭಾವಗಳು ನನ್ನೊಳಗೆ ಒಟ್ಟಿಗೆ ಹುಟ್ಟಿಕೊಂಡಿದ್ದವು. ಯಾವ ಕಾರಣಕ್ಕಾಗಿ ನಾನು ನನ್ನ ಯೌವ್ವನವನ್ನು ತೇಯ್ದೆನೋ, ಮತ್ತು ಯಾವ ಕಾರಣಕ್ಕಾಗಿ ಈಗಲೂ ಜೈಲಿನೊಳಗೆ ಬಂಧಿಯಾಗಿರುವೆನೋ ಅದು ಇದೋ ಈಗ ಸಾಕಾರಗೊಂಡಿತ್ತು. ಅದಕ್ಕಾಗಿ ನಾನು ಸಂತೋಷಗೊಂಡಿದ್ದೆ. ಆದರೆ, ನಾನು ಈಗಲೂ ಜೈಲಿನಲ್ಲಿದ್ದೇನೆ. ನನ್ನನ್ನು ಈಗ ಬಂಧಿಸಿರುವುದು ಬ್ರಿಟಿಷರಲ್ಲ, ಭಾರತದ ಕಾಂಗ್ರೆಸ್‌ ಸರಕಾರವಾಗಿತ್ತು.”

ಕೇರಳ ಕಾಂಗ್ರೆಸ್‌ನ ಕಾರ್ಯದರ್ಶಿ ಮತ್ತು ಕೆಲ ಕಾಲ ಅದರ ಅಧ್ಯಕ್ಷ ಪದವಿಯಲ್ಲೂ ಇದ್ದ, ದೀರ್ಘಕಾಲ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿದ್ದ ಒಬ್ಬ ವ್ಯಕ್ತಿ ಆಗಸ್ಟ್‌ 15 ರಂದು ಜೈಲಿನಲ್ಲಿ ಸ್ವತಂತ್ರ ದಿನವನ್ನು ಆಚರಿಸುತ್ತಿದ್ದರು.
ಆ ದಿನದ ನೆನಪನ್ನು ಅವರು ಮತ್ತಷ್ಟು ಬರೆಯುತ್ತಾರೆ. “ನನ್ನ ಕೆಲವು ಸಹ ಖೈದಿಗಳು ನನ್ನ ಜೊತೆ ಸೇರಿದರು. ಮೂರನೇ ಬ್ಲಾಕಿನಲ್ಲಿ ಎಲ್ಲ ಖೈದಿಗಳನ್ನು ಒಟ್ಟುಗೂಡಿಸಿ ಅದರ ಛಾವಣಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ನಾನು ನಾಲ್ಕೈದು ನಿಮಿಷ ಮಾತನಾಡಿದೆ. ಜೈಲಾಧಿಕಾರಿಗಳು ಇದರ ಬಗ್ಗೆ ಸಂತುಷ್ಟರಾಗಿರಲಿಲ್ಲ. ಆದರೆ, ಆ ದಿನ ಲಾಠಿ ಚಾರ್ಜ್‌ ಮಾತ್ರ ನಡೆಯಲಿಲ್ಲ. ಆಗಸ್ಟ್‌ 15 ರ ನಂತರ ನನ್ನನ್ನು ಕಲ್ಲಿಕೋಟೆಯ ಎಡಿಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪ, ಇಂಗ್ಲೆಂಡಿನ ಚಕ್ರವರ್ತಿಯ ವಿರುದ್ಧ ಜನರನ್ನು ಪ್ರಚೋದಿಸಿದ್ದೇನೆ ಎಂಬುದು. ಆಗಸ್ಟ್‌ 15 ರಂದು ದೇಶ ಸ್ವತಂತ್ರಗೊಂಡಿತ್ತು. ಆದರೆ, ಅದರ ನಂತರ ಬ್ರಿಟಿಷರೇ ರಚಿಸಿದ್ದ 124A ಎಂಬ ಕಾನೂನಿನ ಅಡಿಯಲ್ಲಿ ನನ್ನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗುತ್ತದೆ. ಜನರು ಆಶ್ಚರ್ಯಗೊಂಡಿದ್ದರು. ಇದೆಂತ ಸರಕಾರ ಎಂದು ಕೇಳುತ್ತಿದ್ದರು. ನಾನು ನ್ಯಾಯಾಲಯದ ಮುಂದೆ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:
“ಕಾನೂನಾತ್ಮಕವಾಗಿ ಬ್ರಿಟಿಷ್‌ ಇಂಡಿಯಾದ ರಾಜನಾಗಿದ್ದ ದೊರೆಯ ವಿರುದ್ಧ ಜನರಲ್ಲಿ ಹಗೆತನ ಹಬ್ಬಿಸಿದ ಆರೋಪದಲ್ಲಿ ನನ್ನನ್ನು ವಿಚಾರಣೆ ನಡೆಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ಭಾರತದ ಎಲ್ಲ ಸ್ವಾತಂತ್ರ್ಯ ಪ್ರೇಮಿಗಳು ಮತ್ತು ನೆಹರೂ, ಗಾಂಧಿ ಸಹಿತದ ಸ್ವಾತಂತ್ರ್ಯ ಹೋರಾಟದ ನಾಯಕರುಗಳು ಅದರ ಹುಟ್ಟಿನಿಂದಲೇ ರಾಜನ ಸರಕಾರದ ವಿರುದ್ಧ ಹಗೆತನ ಹರಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಮೇಲೆಯೂ ಇದೇ ಉದ್ಧೇಶಕ್ಕಾಗಿ ಕೆಲಸ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್‌ 124A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೆಲ್ಲದರ ಪರಿಣಾಮವಾಗಿ, ಆ ರಾಜನ ಸರಕಾರ ಮತ್ತು ಬ್ರಿಟಿಷ್‌ ಇಂಡಿಯಾ ಇಂದು ಅಸ್ತಿತ್ವದಲ್ಲೇ ಇಲ್ಲ. ನನ್ನೊಂದಿಗೆ ಇದೇ ಅಪರಾಧದಲ್ಲಿ ಪಾಲುದಾರರಾಗಿದ್ದ ಹಲವಾರು ಜನರು ಮಂತ್ರಿಗಳು ಮತ್ತು ರಾಜ್ಯಪಾಲರುಗಳಾಗಿ ಬದಲಾಗಿದ್ದಾರೆ. ಸ್ವಾತಂತ್ರ್ಯವನ್ನು ಸಾಧಿಸಿರುವ ಈ ಹೊತ್ತು ನನ್ನನ್ನು ವಿಚಾರಣೆಗೆ ಒಳಪಡಿಸುವುದರಲ್ಲಿಯೇ ಒಂದು ರೀತಿಯ ಅಸಂಗತೆ ಇದೆ. ವಿಷಯ ಈಗ ಈ ಹಂತಕ್ಕೆ ಬಂದಿರುವ ಕುರಿತು ನನಗೆ ವಿಷಾದವಿದೆ.”

ಏಕೆಜಿಯವರೇ ಹೇಳುವಂತೆ, “ವಿದೇಶಿ ಸರ್ಕಾರದ ದೃಷ್ಟಿಯಲ್ಲಿ ನಾನು 1930 ರಿಂದ 1945 ರವರೆಗೆ ರಾಜಕೀಯ ಖೈದಿಯಾಗಿದ್ದೆ. ಆದರೆ, ಇಂದಿನ ಜನಪ್ರಿಯ ಸರ್ಕಾರದ ಅಡಿಯಲ್ಲಿ, ನನ್ನನ್ನು ಅಪರಾಧಿ ಎಂದು ಬ್ರಾಂಡ್ ಮಾಡಲಾಗುತ್ತಿದೆ.”

1947 ಅಕ್ಟೋಬರ್‌ 12 ರಂದು ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಕೆಲವೇ ತಿಂಗಳುಗಳ ಅಂತರದಲ್ಲಿ, ಇದೀಗ ತಾನೇ ಸ್ವತಂತ್ರಗೊಂಡ ದೇಶದಲ್ಲಿ ಇನ್ನೂ ಜಾರಿಯಲ್ಲಿದ್ದ ವಸಾಹತುಶಾಹಿ ಕಾನೂನುಗಳ ಅಡಿಯಲ್ಲಿ ಅವರನ್ನು ಮತ್ತೆ ಬಂಧಿಸಲಾಗುತ್ತದೆ. ಭಾರತವು ಗಣರಾಜ್ಯವಾಗಿ ರೂಪುಗೊಂಡ ನಂತರ ಏಕೆಜಿ ಸಹಿತ ಹಲವು ನಾಯಕರ ಬಂಧನಗಳನ್ನು ಸಕ್ರಮಗೊಳಿಸಲು “ಮುಂಜಾಗ್ರತಾ ಬಂಧನ ಕಾಯ್ದೆ 1950”ನ್ನು ಜಾರಿಗೆ ತರಲಾಗುತ್ತದೆ. ಏಕೆಜಿ ತಮ್ಮ ಬಂಧನದ ವಿರುದ್ಧ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರುತ್ತಾರೆ. ತನ್ನ ಮೂಲಭೂತ ಹಕ್ಕುಗಳಾದ ವಾಕ್‌ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಾರತದಲ್ಲಿ ಸ್ವತಂತ್ರವಾಗಿ ಓಡಾಡುವ ಸ್ವಾತಂತ್ರ್ಯಗಳನ್ನು ಉಲ್ಲಂಘಿಸಿಲಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

1950 ರಲ್ಲಿ ಜಾರಿಗೆ ಬಂದಿದ್ದ ಹೊಸ ಸಂವಿಧಾನದ ಪ್ರಕಾರ ಘೋಷಿಸಲಾಗಿದ್ದ ಸ್ವಾತಂತ್ರ್ಯಗಳ ಕಾರಣದಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಭಾವಿಸಿದ್ದರು. ಸಂವಿಧಾನದ 21ನೇ ವಿಧಿಯು “ಕಾನೂನಿನ ಮೂಲಕ ಸ್ಥಾಪಿಸಲಾದ ನಿಯಮಾವಳಿಗಳ ಪ್ರಕಾರವಲ್ಲದೆ, ಯಾವುದೇ ವ್ಯಕ್ತಿಯ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು” ಎಂದು ಹೇಳುತ್ತದೆ. ಹಾಗಾಗಿ ಮುಂಜಾಗ್ರತಾ ಬಂಧನ ಕಾಯ್ದೆಯು ಸಂವಿಧಾನದ 21 ಮತ್ತು 22 ಹಾಗೂ ಇತರ ವಿಧಿಗಳ ಮೂಲಕ ನೀಡಲಾಗಿರುವ ತನ್ನ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಅವರು ವಾದಿಸುತ್ತಾರೆ.

“ಬಂಧನ ಮತ್ತು ಮುಂಜಾಗ್ರತಾ ಬಂಧನಗಳ ವಿರುದ್ಧ ರಕ್ಷಣೆ”ಯನ್ನು ಒದಗಿಸುವ ಸಂವಿಧಾನದ 22ನೇ ವಿಧಿಯು ತನ್ನ ಆರೋಪಗಳ ಬಗ್ಗೆ ತಿಳಿಸುವ ಹಕ್ಕನ್ನು, ವಕೀಲರನ್ನು ನೇಮಿಸುವ ಹಕ್ಕನ್ನು ಮತ್ತು 24 ಗಂಟೆಗಳ ಒಳಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಹಕ್ಕನ್ನು ಒದಗಿಸುತ್ತದೆ. ಆದರೆ ಬಂಧನವು ಅಂತಹ ಬಂಧನಗಳಿಗಾಗಿಯೇ ಇರುವ ಕಾನೂನಿನ ಅಡಿಯಲ್ಲಿ ನಡೆಯುವುದಾದರೆ, ಈ ಎಲ್ಲ ಹಕ್ಕುಗಳನ್ನು ಅಮಾನತ್ತುಗೊಳಿಸುವ ಅಂಶವೂ ಇದರಲ್ಲಿದೆ. ಆ ಮೂಲಕ, ಏ.ಕೆ. ಗೋಪಾಲನ್‌ vs ಸ್ಟೇಟ್‌ ಆಫ್‌ ಮದರಾಸ್‌ ಪ್ರಕರಣವು ಸಂವಿಧಾನದ ವಿರೋಧಾಭಾಸವನ್ನು ಪ್ರಶ್ನಿಸುವ ಮೊದಲ ಪ್ರಕರಣವಾಗಿ ರೂಪುಗೊಳ್ಳುತ್ತದೆ.

1950 ಮೇ 19 ರಂದು ಸುಪ್ರೀಂ ಕೋರ್ಟಿನ ಆರು ನ್ಯಾಯಾಧೀಶರನ್ನೊಳಗೊಂಡ ಪೀಠವು, ನಾಲ್ವರ ಬಹುಮತದೊಂದಿಗೆ ಏಕೆಜಿಯವರ ಬಂಧನವನ್ನು ಎತ್ತಿ ಹಿಡಿಯುತ್ತದೆ. ಮುಂಜಾಗ್ರತಾ ಬಂಧನ ಕಾಯ್ದೆಯನ್ನೂ ಅದು ಎತ್ತಿ ಹಿಡಿಯಿತು. ಆದರೆ, ಬಂಧನದ ಸಮಯದಲ್ಲಿ ಬಂಧನದ ಅವಧಿಯನ್ನು ತಿಳಿಸಬೇಕು ಮತ್ತು ಅಗತ್ಯಬಿದ್ದರೆ ಆ ಅವಧಿಯನ್ನು ವಿಸ್ತರಿಸಬಹುದು ಎಂಬ ಸಣ್ಣ ಬದಲಾವಣೆಯನ್ನು ಅದು ಸೂಚಿಸಿತು. ಈ ತೀರ್ಪಿನಲ್ಲಿ ಬಂಧನದ ಕಾರಣಗಳನ್ನು ಬಂಧಿತರಿಗೆ ನೀಡಬೇಕಾಗಿಲ್ಲ ಎಂಬ ಕಾಯ್ದೆಯ ಸೆಕ್ಷನ್‌ 14ನ್ನು ರದ್ದುಗೊಳಿಸಲಾಗುತ್ತದೆ. ಆ ಮೂಲಕ, ಪ್ರಕರಣದಲ್ಲಿ ಏಕೆಜಿ ಸೋತರೂ ಕೂಡ, ಅದು ಎತ್ತಿದ ದೂರಗಾಮಿ ಪ್ರಶ್ನೆಯು ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರೂಪಿಸುತ್ತಲೇ ಇದೆ.

ಸುಪ್ರೀಂ ಕೋರ್ಟಿನಲ್ಲಿ ಸೋತ ಏಕೆಜಿ 1951 ರಲ್ಲಿ ಹೊಸದಾಗಿ ಮದ್ರಾಸ್‌ ಹೈಕೋರ್ಟಿನಲ್ಲಿ ಪುನಹ ತಾವೇ ಖುದ್ದು ಪ್ರಕರಣವನ್ನು ವಾದಿಸುತ್ತಾರೆ. ಬಂಧನದ ಆದೇಶವೊಂದರಲ್ಲಿ ಕಾನೂನು ಪ್ರಕಾರ ಕಡ್ಡಾಯವಾಗಿ ತಿಳಿಸಬೇಕಿದ್ದ ಬಂಧನದ ಅವಧಿಯನ್ನು ತಿಳಿಸಿಲ್ಲದ ಕಾರಣ ತೀರ್ಪು ಅವರ ಪರವಾಗಿ ಬರುತ್ತದೆ. ಆದರೆ, ನ್ಯಾಯಾಲಯದಿಂದ ಹೊರ ಬರುತ್ತಿದ್ದಂತೆ ಕೇವಲ 10 ಗಜಗಳ ದೂರದಲ್ಲಿ ಅವರಿಗೆ ಹೊಸ ಬಂಧನದ ಆದೇಶವನ್ನು ನೀಡಲಾಗುತ್ತದೆ.

ನ್ಯಾಯಾಲಯದಲ್ಲಿ ಮತ್ತೊಂದು ಸುತ್ತಿನ ತೀವ್ರ ಹೋರಾಟ ಶುರುವಾಗುತ್ತದೆ. ಏಕೆಜಿ ಎರಡು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಬಿಡುಗಡೆಯಾಗುತ್ತಾರೆ. ಆ ಸಮಯದಲ್ಲಿ ಮದ್ರಾಸ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ವಿ. ರಾಜಮನ್ನಾರ್‌, ನ್ಯಾಯಾಲಯದ ತೀರ್ಪು ಬರುವ ಮೊದಲೇ ಹೊಸ ಆದೇಶವನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾಗಿ ಅಡ್ವಕೇಟ್‌ ಜನರಲ್‌ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಮರುದಿನವೇ ಎಜಿ ರಾಜೀನಾಮೆ ನೀಡುತ್ತಾರೆ. ಅದಾಗಿ ಎರಡು ದಶಕಗಳ ನಂತರ, ಏಕೆಜಿಯ ಮರಣದ ಒಂದು ವರ್ಷ ಕಳೆದು ಅವರ ಹೋರಾಟದ ಬೆಲೆ ಮತ್ತೊಮ್ಮೆ ಸಾಬೀತಾಗುತ್ತದೆ. ಅದು ಸುಪ್ರೀಂ ಕೋರ್ಟ್‌ 1978 ರಲ್ಲಿ ನೀಡಿದ್ದ ಮನೇಕಾ ಗಾಂಧಿ vs ಯೂನಿಯನ್‌ ಆಫ್‌ ಇಂಡಿಯಾ ಪ್ರಕರಣದ ತೀರ್ಪಿನ ಮೂಲಕ.

ಕಟ್ಟಾ ರಾಷ್ಟ್ರೀಯವಾದಿಯಾಗಿದ್ದ ಗೋಪಾಲನ್‌ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿದ್ದರು. ನಂತರ ಭಾರತೀಯ ಕಮ್ಯುನಿಸ್ಟ್‌ ಪಕ್ಷ ಸೇರಿ, 1952 ರಲ್ಲಿ ಮೊದಲ ಲೋಕಸಭೆಗೆ ಆಯ್ಕೆಯಾದ ಕಮ್ಯುನಿಸ್ಟ್‌ ಪಕ್ಷದ 16 ಸದಸ್ಯರಲ್ಲಿ ಒಬ್ಬರಾದರು. ನಂತರದ ಕಾಲದಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ಯ ಸ್ಥಾಪಕ ಸದಸ್ಯರಲ್ಲೊಬ್ಬರಾದರು.
ಮೇಲ್ಜಾತಿಯ ಹಿಂದೂ ನಂಬಿಯಾರ್‌ ಕುಟುಂಬಕ್ಕೆ ಸೇರಿದ್ದ ಅವರು ತಲಶೇರಿಯ ಬಾಸೆಲ್‌ ಇವಾಂಜೆಲಿಕಲ್‌ ಮಿಷನ್‌ ಪಾರ್ಸಿ ಪ್ರೌಢಶಾಲೆ ಮತ್ತು ಸರಕಾರಿ ಬ್ರೆನ್ನನ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ಪದವಿಯ ನಂತರ ಏಳು ವರ್ಷಗಳ ಕಾಲ ಶಾಲಾ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು.

ಅವರು ಶಿಕ್ಷಕರಾಗುವ ಹೊತ್ತಿಗೆ, ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಯು ಜನಪ್ರಿಯತೆಯನ್ನು ಗಳಿಸುತ್ತಿತ್ತು. ರಾಷ್ಟ್ರೀಯತಾವಾದಿ ಚಳವಳಿಯ ಅಲೆಗಳು ಅವರನ್ನು ತರಗತಿಯಿಂದ ಹೊರಗೆಳೆದವು. ಏಕೆಜಿ ಮೊದಲು ಖಿಲಾಫತ್ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಅದು ಅವರ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಆ ಮೂಲಕ ಅವರೊಬ್ಬ ಪೂರ್ಣಕಾಲಿಕ ಮತ್ತು ಬದ್ಧತೆಯ ಸಾಮಾಜಿಕ, ರಾಜಕೀಯ ಕಾರ್ಯಕರ್ತನಾಗಿ ಬದಲಾಗುತ್ತಾರೆ. ನಂತರದಲ್ಲಿ ಅವರು ಮಲಬಾರ್‌ ಕ್ರಾಂತಿಯಲ್ಲೂ ಭಾಗವಹಿಸುತ್ತಾರೆ. ಈ ಕಾಲದಲ್ಲಿಯೇ ಅವರು ತಮ್ಮ ಜಾತಿ ಸೂಚಕ ಉಪನಾಮವಾದ ನಂಬಿಯಾರ್‌ ಅನ್ನು ಕಿತ್ತು ಹಾಕುವುದು.

25 ನೇ ವಯಸ್ಸಿನಲ್ಲಿ ಅವರು ವಿದೇಶಿ ಬಟ್ಟೆ ಮತ್ತು ವಿದೇಶಿ ಮದ್ಯವನ್ನು ಬಹಿಷ್ಕರಿಸುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅದೇ ಕಾಲದಲ್ಲಿ ಕಣ್ಣೂರು ಮತ್ತು ಕಲ್ಲಿಕೋಟೆಯಲ್ಲಿ ಕಾರ್ಮಿಕರ ನಡುವೆಯೂ ಕೆಲಸ ಮಾಡುತ್ತಾರೆ.

1927 ರಲ್ಲಿ, ಏಕೆಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರುತ್ತಾರೆ. ಖಾದಿ ಚಳುವಳಿ ಮತ್ತು ಹರಿಜನರ ಉನ್ನತಿಗಾಗಿ ಸಕ್ರಿಯವಾಗಿ ಕೆಲಸ ಮಾಡಲು ಶುರು ಮಾಡುತ್ತಾರೆ. 1930 ರಲ್ಲಿ, ಅವರು ಪಯ್ಯನ್ನೂರಿನಲ್ಲಿ ನಡೆದ ಉಪ್ಪು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಅವರು ತನ್ನ 28ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಜೈಲು ಶಿಕ್ಷೆ ಅನುಭವಿಸುವುದು. 1930 ರಲ್ಲಿ ಉಪ್ಪು ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗುತ್ತಾರೆ. ನಂತರ, ಅವರು ಗುರುವಾಯೂರ್ ಸತ್ಯಾಗ್ರಹದಲ್ಲಿ (1931-32) ಜೊತೆಯಾಗುತ್ತಾರೆ. ಕೆಪಿಸಿಸಿಯ ಮುಂದಾಳುತ್ವದಲ್ಲಿ ನಡೆದ ಗುರುವಾಯೂರ್ ಜಾಥಾದ ಪ್ರಚಾರ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜೈಲಿನಲ್ಲಿದ್ದಾಗಲೇ, ಅವರು ಕಾರ್ಮಿಕರನ್ನು ಸಂಘಟಿಸಿಕೊಂಡು ಕಾರ್ಮಿಕ ಸಂಘವನ್ನೂ ಪ್ರಾರಂಭಿಸುತ್ತಾರೆ.

ಕಾಂಗ್ರೆಸ್‌ನಲ್ಲಿದ್ದಾಗ, ಅವರು ಕೇರಳ ಕಾಂಗ್ರೆಸ್‌ನ ಅಧ್ಯಕ್ಷರಾಗುತ್ತಾರೆ. ಜೊತೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗುತ್ತಾರೆ. ಆದರೆ ಜೈಲಿನಲ್ಲಿ ಕಮ್ಯುನಿಸ್ಟ್ ನಾಯಕರೊಂದಿಗಿನ ಸಂಪರ್ಕವು ಏಕೆಜಿಯ ರಾಜಕೀಯ ಬದುಕನ್ನು ಬದಲಿಸಿ ಬಿಡುತ್ತದೆ.

1934 ರ ಹೊತ್ತಿಗೆ, ಏಕೆಜಿ ಕಾಂಗ್ರೆಸ್ ಸಮಾಜವಾದಿ ಪಕ್ಷ (ಸಿಎಸ್ಪಿ) ಸೇರಿದ್ದರು. 1939 ರಲ್ಲಿ, ಸಿಎಸ್ಪಿಯ ಒಂದು ವಿಭಾಗವು ಕಮ್ಯುನಿಸ್ಟ್ ಪಕ್ಷದಲ್ಲಿ ವಿಲೀನಗೊಂಡಾಗ, ಪಿ. ಕೃಷ್ಣ ಪಿಳ್ಳೈ ಮತ್ತು ಇಎಂಎಸ್ ನಂಬೂದಿರಿಪಾಡ್ ಅವರುಗಳ ಜೊತೆಗೆ ಕೇರಳದ ಆರಂಭಿಕ ಕಮ್ಯುನಿಸ್ಟ್ ನಾಯಕರಲ್ಲಿ ಒಬ್ಬರಾಗಿ ಮೂಡಿ ಬರುತ್ತಾರೆ.

1936 ರಲ್ಲಿ ಮಲಬಾರ್ ಪ್ರದೇಶದ ಕಣ್ಣೂರಿನಿಂದ ಮದ್ರಾಸ್‌ಗೆ ಉಪವಾಸ ಮೆರವಣಿಗೆಯನ್ನು ಮತ್ತು ತಿರುವಾಂಕೂರಿನಲ್ಲಿ ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆದ ಚಳವಳಿಯನ್ನು ಬೆಂಬಲಿಸಿ “ಮಲಬಾರ್ ಜಾಥಾ”ವನ್ನೂ ಏಕೆಜಿ ಮುನ್ನಡೆಸಿದ್ದರು. ಉತ್ತರ ಕೇರಳದಲ್ಲಿ ಜಾತಿವ್ಯವಸ್ಥೆ ಅತ್ಯಂತ ಪ್ರಬಲವಾಗಿದ್ದ ಪಯ್ಯನ್ನೂರಿನಲ್ಲಿ ಕೆಳಜಾತಿಯವರಿಗೆ ಸಾರ್ವಜನಿಕ ರಸ್ತೆಯಲ್ಲಿ ನಡೆದಾಡಲು ಅವಕಾಶವಿರಲಿಲ್ಲ. ಏಕೆಜಿ ಮತ್ತು ಕೇರಳೀಯರು ಪಯ್ಯನ್ನೂರಿನ ಕಂಡೋತ್‌ ತೀಯ ಜಾತಿಯವರ ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಾರೆ. ಅಲ್ಲಿ ಮಾತನಾಡುತ್ತಾ “ಹರಿಜನರಿಗೆ ಸಾರ್ವಜನಿಕ ರಸ್ತೆಯನ್ನು ಬಳಸಲೂ ಸ್ವಾತಂತ್ರ್ಯ ನೀಡದ ಕಾಲ ಇದು” ಎಂದು ಏಕೆಜಿ ಹೇಳಿದ್ದರು.

1939 ರಲ್ಲಿ ಎರಡನೇ ಮಹಾಯುದ್ಧ ಆರಂಭವಾಗುವ ಹೊತ್ತಿಗೆ ಇತ್ತ ಭಾರತದಲ್ಲೂ ಬ್ರಿಟಿಷ್‌ ವಿರೋಧಿ ಚಟುವಟಿಕೆಗಳು ಹೆಚ್ಚಾಗತೊಡಗಿದ್ದವು. ಏಕೆಜಿ ಮತ್ತೊಮ್ಮೆ ಬಂಧನಕ್ಕೊಳಗಾಗುತ್ತಾರೆ. ಆದರೆ, 1942 ರಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳುವ ಅವರು 1945 ರಲ್ಲಿ ಯುದ್ಧ ಮುಗಿಯುವ ತನಕವೂ ಭೂಗತರಾಗಿದ್ದರು.

ಯುದ್ಧ ಮುಗಿದು ಸ್ವಲ್ಪ ಕಾಲದಲ್ಲಿಯೇ ಏಕೆಜಿಯನ್ನು ಮತ್ತೆ ಬಂಧಿಸಲಾಗುತ್ತದೆ. ಹಾಗೆ ಬಂಧಿತರಾದ ಅವರು 1947 ಆಗಸ್ಟ್‌ 15 ರಂದು ಭಾರತ ಸ್ವತಂತ್ರಗೊಳ್ಳುವಾಗಲೂ ಜೈಲಿನಲ್ಲಿಯೇ ಇದ್ದರು. 45 ವರ್ಷದ ಅವರನ್ನು ಕಣ್ಣೂರಿನ ಜೈಲಿನಲ್ಲಿ ಏಕಾಂತ ಬಂಧನದಲ್ಲಿಡಲಾಗಿತ್ತು.

1951 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಏಕೆಜಿ ಕಣ್ಣೂರಿನಿಂದ ಮೊದಲ ಲೋಕಸಭೆಗೆ ಸಂಯುಕ್ತ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗುತ್ತಾರೆ. 1957 ಮತ್ತು 1962 ರಲ್ಲಿ ಕಾಸರಗೋಡಿನಿಂದ ಕ್ರಮವಾಗಿ ಎರಡನೇ ಮತ್ತು ಮೂರನೇ ಲೋಕಸಭೆಗೂ ಚುನಾಯಿತರಾಗುತ್ತಾರೆ. 1962 ರಲ್ಲಿ ಕಾಸರಗೋಡಿನಿಂದ ಮತ್ತು 1971 ರಲ್ಲಿ ಪಾಲಕ್ಕಾಡ್‌ ಲೋಕಸಭಾ ಕ್ಷೇತ್ರಗಳಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ. 1977 ಮಾರ್ಚ್‌ 22 ರಂದು ನಿಧನರಾಗುವ ತನಕವೂ ಅವರು ಐದು ಬಾರಿ ಸಂಸದರಾಗಿದ್ದರು.

1962 ರಲ್ಲಿ ನಡೆದ ಚೀನಾ–ಭಾರತ ಯುದ್ಧದ ಸಂದರ್ಭದಲ್ಲಿ, ಏಕೆಜಿ ಮತ್ತು ನಂಬೂದಿರಿಪ್ಪಾಡ್‌ ಸಹಿತದ ಕಮ್ಯುನಿಸ್ಟರು ನಿಷ್ಪಕ್ಷಪಾತ ನೀತಿಯನ್ನು ಅನುಸರಿಸುತ್ತಾರೆ. ಎರಡೂ ದೇಶಗಳು ಶಾಂತಿಯುತವಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಆದರೆ, ಆ ಸಮಯದಲ್ಲಿ ಪಕ್ಷದ ನಾಯಕತ್ವವು ಇದನ್ನು ಖಂಡಿಸಿ ಭಾರತ ಸರಕಾರವನ್ನು ಬೆಂಬಲಿಸುತ್ತದೆ. ಇದು 1964 ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದ ವಿಭಜನೆಗೆ ನಾಂದಿ ಹಾಡುತ್ತದೆ.

ಪಕ್ಷದ ನಾಯಕತ್ವದ ಬೆಂಬಲದೊಂದಿಗೇ ಈ ಹೊಸ ಎಡ ಗುಂಪಿನ ಕೆಲವು ನಾಯಕರನ್ನು ಬಂಧಿಸಲಾಗುತ್ತದೆ. ಯುದ್ಧದ ನೆಪದಲ್ಲಿ ಪಕ್ಷದ ಎಡ ಗುಂಪಿನ ನಾಯಕರ ಮೇಲೆ ಸರಕಾರದ ದಾಳಿಯನ್ನು ಖಂಡಿಸಿ ಆಗ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಇಎಂಎಸ್‌ ಬರೆದ ಲೇಖನದ ಪ್ರಕಟಣೆಯನ್ನು ಪಕ್ಷದ ನಾಯಕತ್ವ ತಡೆ ಹಿಡಿದಾಗ, ಸ್ವತಃ ಅವರು ಪಕ್ಷದ ಹುದ್ದೆಯನ್ನು ತ್ಯಜಿಸಿ ಎಡ ಗುಂಪನ್ನು ಬೆಂಬಲಿಸುತ್ತಾರೆ.

ಏಕೆಜಿ ಈ ಎಡ ಗುಂಪಿನ ಭಾಗವಾಗಿದ್ದರು. ಹಾಗಾಗಿಯೇ ಬಲಪಂಥೀಯರ ಪ್ರಾಬಲ್ಯ ತುಂಬಿದ್ದ ಪಕ್ಷದ ನಾಯಕತ್ವದಿಂದ ಶಿಸ್ತು ಕ್ರಮವನ್ನು ಎದುರಿಸುತ್ತಾರೆ. ಈ ಹೊತ್ತಿನಲ್ಲಿ ಬಲ ಗುಂಪಿನ ನಾಯಕ ಎಸ್.ಎ. ಡಾಂಗೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರಿಗೆ ಬರೆದಿದ್ದೆಂದು ಹೇಳಲಾದ ಪತ್ರವೊಂದನ್ನು ಸುದ್ದಿ ಪತ್ರಿಕೆಯೊಂದು ಪ್ರಕಟಿಸುತ್ತದೆ. ಈ ಪತ್ರದಲ್ಲಿ ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಸ್ವಾತಂತ್ರ್ಯ ಹೋರಾಟದಿಂದ ದೂರವುಳಿಯುವ ವಾಗ್ದಾನವನ್ನು ಅವರು ನೀಡಿದ್ದರು. ಈ ಪತ್ರವನ್ನು ಹಿಡಿದುಕೊಂಡು ಎಡಗುಂಪು ಬಲಗುಂಪನ್ನು ಹಿಮ್ಮೆಟ್ಟಿಸಿತು. ಎಸ್‌.ಎ. ಡಾಂಗೆಯವರ ಈ ಪತ್ರದ ಕುರಿತು ಆಂತರಿಕ ತನಿಖೆ ನಡೆಸಬೇಕೆಂಬ ಎಡಪಂಥೀಯರ ಬೇಡಿಕೆಯನ್ನು ಸಿಪಿಐ ರಾಷ್ಟ್ರೀಯ ಮಂಡಳಿ ತಿರಸ್ಕರಿಸಿದಾಗ, ಎಡ ಗುಂಪು ಅದರಿಂದ ಸಂಪೂರ್ಣವಾಗಿ ಹೊರಬರುತ್ತದೆ. ಮತ್ತು ಅವರೆಲ್ಲ ಸೇರಿ ಹೊಸ ಪಕ್ಷವನ್ನು ಸ್ಥಾಪಿಸುತ್ತಾರೆ.

ಹೀಗೆ ಬೇರ್ಪಟ್ಟು ಹುಟ್ಟಿದ ಹೊಸ ಪಕ್ಷದಲ್ಲಿ ಏಕೆಜಿ ಗುರುತಿಸಿಕೊಳ್ಳುತ್ತಾರೆ. ನಂತರ ಆ ಪಕ್ಷದ ಹೆಸರು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸಿಸ್ಟ್‌) ಎಂದಾಗುತ್ತದೆ.

ಏಕೆಜಿ ಬಹಳವೇ ಬರೆದಿದ್ದಾರೆ. ಮಲಯಾಳಂ ಭಾಷೆಯಲ್ಲಿ ಅವರು ಬರೆದ ಆತ್ಮಕಥೆ “ಎಂಡೆ ಜೀವಿದ ಕಧಾ” ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಇತರ ಕೃತಿಗಳಾದ “ಫಾರ್‌ ಲ್ಯಾಂಡ್”‌, “ಅರೌಂಡ್‌ ದಿ ವರ್ಲ್ಡ್”‌, “ವರ್ಕ್ ಇನ್ ಪಾರ್ಲಿಮೆಂಟ್” ಮತ್ತು “ಕಲೆಕ್ಟೆಡ್ ಸ್ಪೀಚಸ್” ಮೊದಲಾದವು ಮಲಯಾಳಂ ಭಾಷೆಯಲ್ಲಿಯೇ ಬರೆದವುಗಳು. “ಏಕೆಜಿ – ಅತಿಜೀವನತ್ತಿಂಡೆ ಕನಲ್‌ವಳಿಗಳ್” ಎಂಬ ಹೆಸರಿನಲ್ಲಿ ಅವರ ಬದುಕನ್ನು ಸಿನಿಮಾ ರಂಗಕ್ಕೆ ತರಲಾಗಿದೆ.

ತನ್ನ 75ನೇ ವಯಸ್ಸಿನಲ್ಲಿ ಏಕೆಜಿ ನಿಧನರಾಗುವ ಹೊತ್ತಿಗೆ ಇಪ್ಪತ್ತು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದರು. ತನ್ನ ಬದುಕಿನ ಹದಿನೇಳು ವರ್ಷಗಳನ್ನು ಅವರು ಜೈಲಿನಲ್ಲಿಯೇ ಕಳೆದಿದ್ದರು.

ಗೋಪಾಲನ್‌ ಎರಡು ಬಾರಿ ವಿವಾಹಿತರಾಗಿದ್ದರು. ಅವರ ಎರಡನೇ ಪತ್ನಿ ಸುಶೀಲಾ ಗೋಪಾಲನ್‌ ಒಬ್ಬ ಪ್ರಮುಖ ಮಾರ್ಕ್ಸ್‌ವಾದಿ ಮತ್ತು ಟ್ರೇಡ್‌ ಯೂನಿಯನ್‌ ಹೋರಾಟಗಾರ್ತಿಯಾಗಿದ್ದರು. ಏಕೆಜಿ ಅವರು ಇಂಡಿಯನ್‌ ಕಾಫಿ ಹೌಸ್‌ ಸ್ಥಾಪನೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದವರು. 1950 ರ ದಶಕದ ಉತ್ತರಾರ್ಧದಲ್ಲಿ ಕಾಫಿ ಬೋರ್ಡ್‌ ತನ್ನ ಕಾಫಿ ಹೌಸ್‌ಗಳಿಂದ ಹೊರ ಹಾಕಿದ ಕಾರ್ಮಿಕರನ್ನು ಒಟ್ಟು ಸೇರಿಸಿ ಅವರು ಇಂಡಿಯನ್‌ ಕಾಫಿ ಹೌಸ್‌ ಕಟ್ಟಿದ್ದರು.

1991 ಅಕ್ಟೋಬರ್‌ 19 ರಂದು ಬಿ.ಟಿ. ರಣದಿವೆ ಅವರು ಸಿಪಿಐ (ಎಂ) ಪಕ್ಷದ ಹೊಸ ಪ್ರಧಾನ ಕಛೇರಿಯನ್ನು ಉದ್ಘಾಟಿಸಿದ್ದರು. ಆ ಕಛೇರಿಯ ಹೆಸರು ಏಕೆಜಿ ಭವನ ಎಂದಾಗಿತ್ತು.

You cannot copy content of this page

Exit mobile version