ದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನಿಯಮಗಳ ಅಡಿಯಲ್ಲಿ ಕ್ರಮ ಜರಗಿಸುವಂತೆ ಕೋರಿ ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡುವ ವೇಳೆ ರಾಹುಲ್ ಸುಳ್ಳು ಹೇಳಿದ್ದಾರೆ, ನಿಂದನಾತ್ಮಕವಾಗಿ ಮಾತನಾಡಿದ್ದಾರೆ. ವದಂತಿಗಳನ್ನು ಹಬ್ಬಿಸಲು ತಮಗಿರುವ ವಿಶೇಷ ಹಕ್ಕುಗಳನ್ನು ರಾಹುಲ್ ಬಳಸಿಕೊಳ್ಳುತ್ತಿದ್ದಾರೆ, ಆರೋಪಗಳಿಗೆ ಆಧಾರ ಒದಗಿಸುವ ಕೆಲಸವನ್ನು ಅವರು ಮಾಡುತ್ತಿಲ್ಲ ಎಂದು ಸ್ಪೀಕರ್‌ಗೆ ಸಲ್ಲಿಸಿರುವ ನೋಟಿಸ್‌ನಲ್ಲಿ ದುಬೆ ಹೇಳಿದ್ದಾರೆ.
“ವಿಷಯಗಳನ್ನು ಪ್ರಸ್ತಾವಿಸುವಾಗ ರಾಹುಲ್ ಅವರು ಇತಿಹಾಸವನ್ನು ತಿರುಚಿದ್ದಾರೆ, ನಮ್ಮ ದೇಶವನ್ನು ಗೇಲಿ ಮಾಡಲು ಯತ್ನಿಸಿದ್ದಾರೆ, ಗಣರಾಜ್ಯದ ಘನತೆಯನ್ನು ಕುಗ್ಗಿಸಲು ಯತ್ನಿಸಿದ್ದಾರೆ’ ಎಂದು ದುಬೆ ದೂರಿದ್ದಾರೆ.
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ರಾಹುಲ್ ಅವರು ಹಲವು ವಿಷಯಗಳನ್ನು ಪ್ರಸ್ತಾವಿಸಿದ್ದರು. ಚೀನ ದೇಶವು ಭಾರತದ ಭೂಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ, ಮೊಬೈಲ್ ಫೋನ್‌ಗಳು ಭಾರತದಲ್ಲಿ ತಯಾರಾಗುತ್ತಿಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ರಾಹುಲ್ ಮಾಡಿದ್ದಾರೆ.