Home ವಿದೇಶ ಎಪ್ಸ್ಟೀನ್‌ ಫೈಲ್ಸ್ ವಿವಾದಕ್ಕೆ ಹೊಸ ತಿರುವು: ‘ವೈಯಕ್ತಿಕ ಸಂಬಂಧಗಳ ಮಾಹಿತಿಯ ಬಳಸಿ ಪರೋಕ್ಷ ಬ್ಲಾಕ್ಮೇಲ್’; ಬಿಲ್...

ಎಪ್ಸ್ಟೀನ್‌ ಫೈಲ್ಸ್ ವಿವಾದಕ್ಕೆ ಹೊಸ ತಿರುವು: ‘ವೈಯಕ್ತಿಕ ಸಂಬಂಧಗಳ ಮಾಹಿತಿಯ ಬಳಸಿ ಪರೋಕ್ಷ ಬ್ಲಾಕ್ಮೇಲ್’; ಬಿಲ್ ಗೇಟ್ಸ್ ಸ್ಪೋಟಕ ಹೇಳಿಕೆ

0

ವಾಷಿಂಗ್ಟನ್: ಅಮೆರಿಕ ಮೂಲದ ಉದ್ಯಮಿ ಹಾಗೂ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಜೆಫ್ರಿ ಎಪ್ಸ್ಟೀನ್‌ ಕುರಿತು ನೀಡಿರುವ ಹೇಳಿಕೆ ಅಮೆರಿಕದ ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಹೌಸ್‌ ಓವರ್‌ಸೈಟ್‌ ಸಮಿತಿಯ ಮುಂದೆ ನೀಡಿದ ಸಾಕ್ಷ್ಯದಲ್ಲಿ, ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಆಧರಿಸಿ ಎಪ್ಸ್ಟೀನ್‌ ತಮ್ಮ ಮೇಲೆ ಒತ್ತಡ ಹೇರಲು ಬ್ಲಾಕ್ಮೇಲ್ ಮಾಡಲು ಪ್ರಯತ್ನಿಸಿದ್ದ ಸಾಧ್ಯತೆಯ ಬಗ್ಗೆ ಗೇಟ್ಸ್‌ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ಸಮಿತಿಯ ವಿಚಾರಣೆಯ ವೇಳೆ ಬಿಲ್ ಗೇಟ್ಸ್‌ ತಮ್ಮ ವೈವಾಹಿಕ ಜೀವನದ ಅವಧಿಯಲ್ಲಿ ಮೂವರು ಮಹಿಳೆಯರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆ ಪೈಕಿ ಇಬ್ಬರು ಮಹಿಳೆಯರು ಎಪ್ಸ್ಟೀನ್‌ ಪರಿಚಯದ ವಲಯದಲ್ಲಿದ್ದ ಕಾರಣ, ತಮ್ಮ ಖಾಸಗಿ ಜೀವನದ ಮಾಹಿತಿಯು ಎಪ್ಸ್ಟೀನ್‌ಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.

ಗೇಟ್ಸ್‌ ಅವರ ಪ್ರಕಾರ, ಎಪ್ಸ್ಟೀನ್‌ ಬಳಿ ಇದ್ದ ಕೆಲವು ಮಾಹಿತಿಗಳು ಮತ್ತು ನಂತರ ನಡೆದ ಇ-ಮೇಲ್‌ ಸಂವಹನಗಳು ತಮ್ಮ ಮೇಲೆ ಪ್ರಭಾವ ಬೀರುವ ಅಥವಾ ಒತ್ತಡ ಹೇರುವ ಉದ್ದೇಶವಿರಬಹುದೆಂಬ ಅನುಮಾನವನ್ನು ಹುಟ್ಟುಹಾಕಿವೆ. ಆದರೆ ತಮಗೆ ನೇರವಾಗಿ ಬ್ಲ್ಯಾಕ್‌ಮೇಲ್‌ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ಎಪ್ಸ್ಟೀನ್‌ ಅವರ ಅಪರಾಧ ಚಟುವಟಿಕೆಗಳೊಂದಿಗೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಗೇಟ್ಸ್‌ ಪುನರುಚ್ಚರಿಸಿದ್ದಾರೆ. ಅವರೊಂದಿಗೆ ಸಂಪರ್ಕ ಮುಂದುವರಿಸುವುದು ಸೂಕ್ತವಲ್ಲ ಎಂಬ ಅರಿವಾದ ಬಳಿಕ ಸಂವಹನವನ್ನು ಸ್ಥಗಿತಗೊಳಿಸಿದ್ದಾಗಿ ತಿಳಿಸಿದ್ದಾರೆ.

ಸಮಿತಿಯ ಪರಿಶೀಲನೆಯ ವೇಳೆ ಗೇಟ್ಸ್‌ ಮತ್ತು ಎಪ್ಸ್ಟೀನ್‌ ನಡುವಿನ ಹಿಂದಿನ ಭೇಟಿಗಳು, ವೀಡಿಯೊ ಕರೆಗಳು ಹಾಗೂ ಗೇಟ್ಸ್‌ ಫೌಂಡೇಶನ್‌ಗೆ ಸಂಬಂಧಿಸಿದ ಕೆಲವು ಇ-ಮೇಲ್‌ ಸಂವಹನಗಳ ವಿಚಾರವೂ ಚರ್ಚೆಗೆ ಬಂದಿದೆ. ಇದರಿಂದ ಎಪ್ಸ್ಟೀನ್‌ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಂಪರ್ಕಗಳ ಕುರಿತು ಮತ್ತಷ್ಟು ಪರಿಶೀಲನೆ ನಡೆಯುವ ಸಾಧ್ಯತೆ ಇದೆ.

ಇದೇ ವೇಳೆ, ಎಪ್ಸ್ಟೀನ್‌ ಫೈಲ್ಸ್‌ ಕುರಿತ ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಹಲವು ಪ್ರಭಾವಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಂಪರ್ಕಗಳ ಕುರಿತು ಹೊಸ ಮಾಹಿತಿಗಳು ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಬಿಲ್‌ ಗೇಟ್ಸ್‌ ಅವರ ಇತ್ತೀಚಿನ ಹೇಳಿಕೆಗಳು ಮತ್ತಷ್ಟು ಕುತೂಹಲ ಮೂಡಿಸಿದೆ.

You cannot copy content of this page

Exit mobile version