Home ರಾಜಕೀಯ ಡಿಕೆಶಿ ಸಂಪುಟದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ; ಪ್ರತಿ ಸಚಿವರಿಗೆ ಎರಡರಿಂದ ಮೂರು ಜಿಲ್ಲೆ

ಡಿಕೆಶಿ ಸಂಪುಟದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ; ಪ್ರತಿ ಸಚಿವರಿಗೆ ಎರಡರಿಂದ ಮೂರು ಜಿಲ್ಲೆ

0

ಬೆಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಚುರುಕುಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬ ಸಚಿವರಿಗೆ ಎರಡರಿಂದ ಮೂರು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಈ ಹಂಚಿಕೆ ಪ್ರಕಾರ, ಹಿರಿಯ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೆ.ಹೆಚ್. ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳನ್ನು ವಹಿಸಲಾಗಿದೆ. ರಾಮಲಿಂಗರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ, ಎಂ.ಬಿ. ಪಾಟೀಲ್ ಅವರಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಅದೇ ರೀತಿ, ಕೆ.ಜೆ. ಜಾರ್ಜ್ ಅವರಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ; ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರ ಮತ್ತು ಹಾಸನ; ಈಶ್ವರ ಖಂಡ್ರೆ ಅವರಿಗೆ ಬೀದರ್ ಮತ್ತು ಗದಗ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರ್ಗಿ ಮತ್ತು ಯಾದಗಿರಿ; ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರಿಗೆ ರಾಯಚೂರು ಮತ್ತು ಕೋಪ್ಪಳ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ಮತ್ತು ಚಾಮರಾಜನಗರ; ಬೈರತಿ ಸುರೇಶ್ ಅವರಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಯು.ಟಿ. ಖಾದರ್ ಅವರಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ.

ಸದ್ಯದಲ್ಲೇ ಸಂಪುಟ ವಿಸ್ತರಣೆ ನಡೆಯಲಿದ್ದು, ಅದರ ಬಳಿಕ ಈ ಉಸ್ತುವಾರಿ ಜಿಲ್ಲೆಗಳ ಹಂಚಿಕೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಯಾವ ಸಚಿವರು ತಮ್ಮ ಯಾವ ಜಿಲ್ಲೆ ಉಳಿಸಿಕೊಳ್ಳಲು ಇಚ್ಛಿಸುತ್ತಾರೆ ಮತ್ತು ಯಾವುದನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.

You cannot copy content of this page

Exit mobile version