Saturday, July 6, 2024

ಸತ್ಯ | ನ್ಯಾಯ |ಧರ್ಮ

ಜಾಮೀನಿಗೆ ತಡೆ: ಕೇಜ್ರಿವಾಲ್‌ ಬೆನ್ನಿಗೆ ನಿಂತ 150 ವಕೀಲರಿಂದ ಸಿಜೆಐಗೆ ಪತ್ರ

ನವದೆಹಲಿ: ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರು ಆದೇಶವನ್ನು ಓದದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನನ್ನು ರದ್ದುಗೊಳಿಸಿರುವ ರೀತಿಯ ಕುರಿತು ದೆಹಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ 150 ವಕೀಲರ ನಿಯೋಗವು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.

ದಿ ಹಿಂದೂ ವರದಿಯ ಪ್ರಕಾರ, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ಸಹೋದರ ಜಾರಿ ನಿರ್ದೇಶನಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕೇಜ್ರಿವಾಲ್‌ ವಿರುದ್ಧ ಆದೇಶ ಬಂದಿರಬಹುದು ಎಂಬ ಅನುಮಾನುವನ್ನು ವಕೀಲರು ಪತ್ರದಲ್ಲಿ ಹೊರ ಹಾಕಿದ್ದಾರೆ.

ಇದು ಆಪಾದಿತ ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಪ್ರಕರಣವಾಗಿದ್ದು, ಬಂಧನಕ್ಕೊಳಗಾಗಿರುವ ಕೇಜ್ರಿವಾಲ್ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಆರ್ಥಿಕ ಅಪರಾಧಗಳ ಸಂಸ್ಥೆಯಾದ ಇಡಿ ಕೇಜ್ರಿವಾಲ್ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಬಂಧಿಸಿತ್ತು. ಕಳೆದ ತಿಂಗಳ ಕೊನೆಯಲ್ಲಿ, ಕೇಜ್ರಿವಾಲ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಜಾಮೀನು ನೀಡಿತ್ತು. ಈ ಬೆನ್ನಲ್ಲೇ ಮತ್ತೊಂದು ತನಿಖಾ ಸಂಸ್ಥೆ ಸಿಬಿಐ ಕೇಜ್ರಿವಾಲ್ ಅವರನ್ನು ಮತ್ತೆ ಬಂಧಿಸಿದೆ.

ಜೂ.20ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯವು, ಇಡಿ ಕೇಜ್ರಿವಾಲ್ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಹೇಳಿತ್ತು. ಇಡಿ ಮುಖ್ಯಮಂತ್ರಿಗಳ ಬಂಧನಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ನ್ಯಾ. ನ್ಯಾಯಬಿಂದು ಹೇಳಿದ್ದರು.

ನ್ಯಾ.ಜೈನ್ ಅವರ ಖಾಸಾ ಸೋದರ ಇಡಿ ವಕೀಲರಾಗಿರುವುದರಿಂದ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿಯಬೇಕಾಗಿತ್ತು. ಈ ಸ್ಪಷ್ಟ ಹಿತಾಸಕ್ತಿ ಸಂಘರ್ಷವನ್ನು ನ್ಯಾ.ಜೈನ್ ಎಂದಿಗೂ ಪ್ರಕಟಿಸಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಅಪರೂಪದ ಬೆಳವಣಿಗೆಯಲ್ಲಿ” ಜಾಮೀನು ಆದೇಶವು ಅಧಿಕೃತವಾಗಿ ಅಪ್ಲೋಡ್ ಆಗುವ ಮುನ್ನವೇ ನ್ಯಾ.ಜೈನ್ ಅವರು ಕೇಜ್ರಿವಾಲ್‌ರ ಜಾಮೀನನ್ನು ಪ್ರಶ್ನಿಸಲು ಇಡಿ ವಕೀಲರಿಗೆ ಅನುಮತಿ ನೀಡಿದ್ದರು ಮತ್ತು ಜಾಮೀನು ಆದೇಶಕ್ಕೆ ತಡೆ ವಿಧಿಸಿದ್ದರು. ಈ ರೀತಿ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ವಕೀಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು