ನಮ್ಮ ಮೆಟ್ರೋದಲ್ಲಿ ಹುಚ್ಚಾಟ ಆಡಿದರೆ ಜೇಬಿಗೆ ಕತ್ತರಿ: ದಂಡದ ಮೊತ್ತ ಭಾರಿ ಹೆಚ್ಚಳ ಮಾಡಿದ ಬಿಎಂಆರ್‌ಸಿಎಲ್

ಬೆಂಗಳೂರು: ರಾಜಧಾನಿಯ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವ ಮತ್ತು ಸುರಕ್ಷತೆಗೆ ಧಕ್ಕೆ ತರುವ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಅನ್ವಯ ಈ ಪರಿಷ್ಕೃತ ದಂಡದ ನಿಯಮಗಳನ್ನು ಜಾರಿಗೆ ತರಲಾಗಿದೆ. ಮೆಟ್ರೋ ಆವರಣದಲ್ಲಿ ಸಾರ್ವಜನಿಕ ಸುರಕ್ಷತೆ ಕಾಪಾಡುವ ಹಾಗೂ ಸಹಪ್ರಯಾಣಿಕರ ನೆಮ್ಮದಿಗೆ ಭಂಗ ತರುವವರಿಗೆ ಕಠಿಣ ಪಾಠ ಕಲಿಸುವ ಉದ್ದೇಶದಿಂದ ಈ ದುಬಾರಿ ದಂಡದ ನಿಯಮಗಳನ್ನು ಜಾರಿಗೆ ತರಲಾಗಿದೆ.

ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ?

  • ಲೌಡ್ ಮ್ಯೂಸಿಕ್ ಹಾಗೂ ರೀಲ್ಸ್ ಹಾವಳಿ: ಮೆಟ್ರೋ ರೈಲು ಅಥವಾ ನಿಲ್ದಾಣದ ಒಳಗೆ ಹೆಡ್‌ಫೋನ್ ಬಳಸದೆ ಜೋರಾಗಿ ಸಂಗೀತ ಆಲಿಸುವುದು, ವಿಡಿಯೋ ನೋಡುವುದು, ಅನುಮತಿಯಿಲ್ಲದೆ ರೀಲ್ಸ್ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು, ಊಟ-ತಿಂಡಿ ಸೇವಿಸುವುದು ಹಾಗೂ ಅನಧಿಕೃತ ವ್ಯಾಪಾರ ಮಾಡುವುದಕ್ಕೆ ಈ ಹಿಂದೆ ಕೇವಲ 500 ರೂಪಾಯಿ ದಂಡವಿತ್ತು. ಇದನ್ನು ಈಗ 2,500 ರೂಪಾಯಿಯಿಂದ 10,000 ರೂಪಾಯಿವರೆಗೆ ಹೆಚ್ಚಿಸಲಾಗಿದೆ.
  • ಗೋಡೆಗಳ ವಿರೂಪ ಹಾಗೂ ಪೋಸ್ಟರ್ ಹಾವಳಿ: ಮೆಟ್ರೋ ನಿಲ್ದಾಣದ ಗೋಡೆಗಳ ಮೇಲೆ ಬರೆಯುವುದು, ಚಿತ್ರ ಬಿಡಿಸುವುದು ಅಥವಾ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಆವರಣವನ್ನು ವಿರೂಪಗೊಳಿಸಿದರೆ ಈ ಹಿಂದೆ 1,000 ರೂಪಾಯಿ ದಂಡವಿತ್ತು. ಇದನ್ನು ಈಗ ನೇರವಾಗಿ 10,000 ರೂಪಾಯಿಗೆ ಏರಿಸಲಾಗಿದೆ.
  • ಮೆಟ್ರೋ ಹಳಿಗೆ ಜಿಗಿಯುವುದು ಮತ್ತು ಟ್ರ್ಯಾಕ್ ಮೇಲೆ ಓಡಾಟ: ಮೆಟ್ರೋ ಸುರಕ್ಷತೆಗೆ ತೀವ್ರ ಧಕ್ಕೆ ತರುವಂತಹ ಹಳಿಗಳ ಮೇಲೆ ಅನಧಿಕೃತವಾಗಿ ಓಡಾಡುವುದು, ಟ್ರ್ಯಾಕ್ ಮೇಲೆ ಜಿಗಿಯುವುದು ಅಥವಾ ಟಿಕೆಟ್ ಮತ್ತು ಪಾಸ್‌ಗಳನ್ನು ದುರ್ಬಳಕೆ ಮಾಡಿಕೊಂಡರೆ ವಿಧಿಸಲಾಗುತ್ತಿದ್ದ ದಂಡವನ್ನು ಭಾರಿ ಪ್ರಮಾಣದಲ್ಲಿ ಅಂದರೆ 5,000 ರೂಪಾಯಿಯಿಂದ 25,000 ರೂಪಾಯಿವರೆಗೆ ಹೆಚ್ಚಳ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇತ್ತೀಚೆಗೆ ಮೆಟ್ರೋ ಹಳಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಕಾರಣ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇಂತಹ ಗಂಭೀರ ಸುರಕ್ಷತಾ ಲೋಪಗಳು ಹಾಗೂ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಹುಚ್ಚಾಟಗಳಿಗೆ ಬ್ರೇಕ್ ಹಾಕಲು ಇನ್ಮುಂದೆ ಈ ಹೊಸ ದುಬಾರಿ ದಂಡದ ಅಸ್ತ್ರವನ್ನು ಬಳಸಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು