ಬೆಂಗಳೂರು: ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕದಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ನಡೆಸಲು ಉದ್ದೇಶಿಸಿರುವ ಪಥಸಂಚಲನಗಳಿಗೆ ಸಂಬಂಧಿಸಿದಂತೆ, ಕೇವಲ ಗೃಹ ಇಲಾಖೆಗೆ “ಮಾಹಿತಿ ನೀಡುವುದು” ಅಥವಾ “ವ್ಯವಸ್ಥೆ ಮಾಡುವಂತೆ ತಿಳಿಸುವುದು” ಅನುಮತಿ ಪಡೆದಂತಾಗುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಸಂಘ-ಸಂಸ್ಥೆಗಳಿಗೆ ಅನ್ವಯವಾಗುವಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ನೇರ ಎಚ್ಚರಿಕೆ ರವಾನಿಸಿದ್ದಾರೆ.
ಆರೆಸ್ಸೆಸ್ನ ಸ್ವಯಂಸೇವಕರನ್ನು ಉದ್ದೇಶಿಸಿ ವ್ಯಂಗ್ಯ ಹಾಗೂ ಗಂಭೀರ ಧಾಟಿಯಲ್ಲಿ ಸಂದೇಶ ಬರೆದಿರುವ ಸಚಿವರು, ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025–26ರ ವಾರ್ಷಿಕ ವರದಿಯನ್ನೇ ಉಲ್ಲೇಖಿಸಿದ್ದಾರೆ. ಆ ವರದಿಯ ಪ್ರಕಾರ, ಕರ್ನಾಟಕದಾದ್ಯಂತ 2,21,963 ಸಮವಸ್ತ್ರಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದ ಬರೋಬ್ಬರಿ 562 ಪಥಸಂಚಲನಗಳನ್ನು ಆರೆಸ್ಸೆಸ್ ನಡೆಸಿದೆ. ಹೀಗೆ ಒಂದೇ ದಿನ ಲಕ್ಷಾಂತರ ಮಂದಿ ಏಕಕಾಲದಲ್ಲಿ ಬೀದಿಗಿಳಿದು ಪಥಸಂಚಲನ ನಡೆಸುವಾಗ ಪೊಲೀಸ್ ಇಲಾಖೆಯ ಮೇಲೆ ಭಾರಿ ಭದ್ರತಾ ಜವಾಬ್ದಾರಿ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಿಬ್ಬಂದಿ ನಿಯೋಜನೆ, ಸಾರಿಗೆ, ಆಹಾರ, ಸಂಚಾರ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವ್ಯಾಪಕ ಸಿದ್ಧತೆಗಳಿಗಾಗಿ ಸಾರ್ವಜನಿಕ ಸಂಪನ್ಮೂಲ ಮತ್ತು ಅಪಾರ ಮಾನವಶಕ್ತಿ ವ್ಯಯವಾಗುತ್ತದೆ. ಆದ್ದರಿಂದ ಕೇವಲ ಗೃಹ ಇಲಾಖೆಗೆ ಸಹಕರಿಸುವಂತೆ ಪತ್ರ ಬರೆಯುವ ಬದಲು, ನಿಗದಿತ ನಿಯಮಾವಳಿಗಳ ಪ್ರಕಾರ ಅಗತ್ಯ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಿ, ಸರ್ಕಾರದ ಅಧಿಕೃತ ಅನುಮತಿ ಬರುವವರೆಗೆ ಕಾಯಬೇಕು ಎಂದು ಅವರು ತಿಳಿಸಿದ್ದಾರೆ.
