ಭಾವಪುಂಜ – 2 : ಅಜ್ಜನ ಶಾಲು

“..ವರ್ಷಗಳೇ ಕಳೆದು ಮದುವೆಯಾಗಿ ತವರು ಬಿಡುವಾಗ ಬೇರೆಲ್ಲಾ ವಸ್ತುಗಳಿಗಿಂತ ತಾತನ ಶಾಲು ಸೂಟ್ ಕೇಸ್ ನಲ್ಲಿ ಇಟ್ಟುಕೊಂಡೆ. “ಅದ್ಯಾಕಮ್ಮ ಹಳೇದು ಹೊಸದು ಇದೆ ನೋಡು” ಅಂದರೂ ಇಲ್ಲ ನನಗಿದೇ ಬೇಕು ಎಂದು ಒಂದಿಷ್ಟು ದುಃಖದಿಂದ ,ಹಕ್ಕಿನಿಂದ ಹೇಳಿದೆ..” ಲೇಖಕಿ ಅಶ್ವಿನಿ ಎಸ್ ಟಿ ಅವರ ಬರಹದಲ್ಲಿ

ಪಂಜಾಬಿನ ಅಮೃತಸರದಲ್ಲಿ ಈ ಡಿಸೆಂಬರ್ ತಿಂಗಳ ಚಳಿ ಮೈ ನಡುಗಿಸುತ್ತಿದೆ.ಸುತ್ತಲೂ ಮಂಜು ಮುಸುಕಿ ಮನೆಯೇ ಶೀತಲ ಪೆಟ್ಟಿಗೆಯಾದಂತಿದೆ. ಮಕ್ಕಳಿಗೆ winter holidays ಕೊಟ್ಟಿದ್ದಾರೆ. ದಪ್ಪನೆಯ curtain ಗಳ ನಡುವೆಯೂ ಮುಚ್ಚಿದ ಕಿಟಕಿಗಳಿಂದ ಸಣ್ಣನೆಯ ಕುಳಿರ್ಗಾಳಿ ಒಳನುಸುಳಿ ಮತ್ತಿಷ್ಟು ಚಳಿ ಏರಿದಂತೆನಿಸಿತು. Room heater on ಮಾಡಿ ಬಿಸಿ ಕಾಫಿಯಾದರೂ ಮಾಡಿ ಕುಡಿಯುವ ಎಂದು ಅಡುಗೆಮನೆ ಕಡೆ ನಡೆದೆನು. ಕಾಫಿಯ ಜೊತೆ ಜೊತೆಗೆ ಬಿಸಿ ಸಮೋಸಾ (ಅಮೃತಸರ special)ವನ್ನು ಮಾಡಿ ಸೋಫಾದ ಮೇಲೆ ಕೂತು ನಿಧಾನಕ್ಕೆ ಮೆಲ್ಲುತ್ತಾ,ಗುಟುಕರಿಸುತ್ತಾ TV ನೋಡುತ್ತಾ ಕುಳಿತಿದ್ದೆ. ರಾಜ್ ಕುಮಾರ್ ಸಿನಿಮಾ ದ ಸನ್ನಿವೇಶ. ಹೊದ್ದ ಶಾಲು ಬೇರೆಯವರಿಗೆ ಕೊಟ್ಟು ಹಾಕಿದ್ದ ಚಪ್ಪಲಿ ಯನ್ನೂ ಬಿಟ್ಟು ದಿಗಂತದೆಡೆಗೆ ರಾಜ್ ನಡೆದು ಹೋಗುವ ದೃಶ್ಯ. ರಾಜ್ ರ ಅಭಿನಯಕ್ಕೆ, ಹಿನ್ನೆಲೆ ಸಂಗೀತಕ್ಕೆ ತಲೆದೂಗುತ್ತಾ ಅಬ್ಬಾ ಎಂಥಾ ಹೃದಯಂಗಮ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ಇದ್ದೆ.

ಸಿನಿಮಾದ ದೃಶ್ಯ ಮನಸ್ಸಿನಾಳಕ್ಕೆ ಇಳಿದು ,ಮನದ ಮೂಲೆಯಲ್ಲಿದ್ದ ಬೆಚ್ಚನೆಯ ನೆನಪೊಂದನ್ನು ಹೊರಗೆಳೆಯಿತು.

ಬಾಲ್ಯದ ಆ ನೆನಪುಗಳು ವರ್ಣನಾತೀತ. ಪ್ರತಿ ಬಾರಿ ರಜೆಗೆಂದು ಹಳ್ಳಿ ಗೆ ಹೋದಾಗ ಅಜ್ಜಿ,ತಾತ,ಅಂಕಲ್ ,ಅತ್ತೆಯರ ಪ್ರೀತಿಯ ಸವಿ ಉಂಡುಂಡು ಯಾಕಾದರೂ ರಜೆ ಮುಗಿಯುತ್ತದೋ ಎನಿಸುತ್ತಿತ್ತು. ನಮ್ಮೂರಿನ ನಿರ್ಮಲ ವಾತಾವರಣ,ಸ್ವಚ್ಛ ಹವೆ,ಕಲುಷಿತವಲ್ಲದ ಹಾಲು ಹೈನು,ಒಲೆ ಅಡುಗೆ… ಆಹಾ ಸ್ವರ್ಗ.. ಮುಂಜಾನೆ 5 ರಿಂದಲೇ ದಿನಚರಿ ಆರಂಭ.ತಾತ ಮೊದಲೇ ಎದ್ದು ಆ ದೊಡ್ಡ ಮನೆಯ ಬಾಗಿಲುಗಳು ತೆಗೆದು ಹೊಸ ಗಾಳಿ ,ಹೊಸ ದಿನಕ್ಕೆ ಆಹ್ವಾನ ಕೊಡುತ್ತಿದ್ದರು.5.30 ರ ಸುಮಾರಿಗೆ ಮಕ್ಕಳೆಲ್ಲ ಎದ್ದು ಕೆಲಸಗಳಲ್ಲಿ ತೊಡಗಿ ಬೇಕಿತ್ತು.ಮನೆಯ ಪಡಸಾಲೆಯಲ್ಲಿ ದೊಡ್ಡದಾದ ಜಮಖಾನ ಹಾಸಿ ದಿಂಬು ಬೆಡ್ ಶೀಟ್ ಗಳೊಂದಿಗೆ ಪವಡಿಸಿದ್ದ ಹೆಮ್ಮಕ್ಕಳು ಎದ್ದು ಹಿತ್ತಲಿಗೋ ,ಕೊಟ್ಟಿಗೆಗೋ ಹೋಗುತ್ತಿದ್ದರು.ಗಂಡುಮಕ್ಕಳು ಸ್ವಲ್ಪ ದೂರದಲ್ಲೇ ಇದ್ದ ತೋಟದ ಕಡೆ ನಡೆಯುತ್ತಿದ್ದರು. ಮೊಮ್ಮಕ್ಕಳಾದ ನಾವು ಅರ್ಧ ನಿದ್ದೆಯಲ್ಲಿ ಎದ್ದು ಅಳುತ್ತಾ ನಿಂತಿರುತ್ತಿದ್ದೆವು.ತಾತ ನಮ್ಮನ್ನು ಮನೆಯ ಏಕ ಮಾತ್ರ ರೂಮ್ ಗೆ ಕರೆದೊಯ್ದು ದಿವಿನಾದ ಮಂಚದ ಮೇಲೆ ಮಲಗಿಸಿ ಅವರ ಶಾಲನ್ನು ಹೊದಿಸಿ ತಟ್ಟಿ ಮಲಗಿಸುತ್ತಾ ಇದ್ದರು. ಮಂಚಕ್ಕೆ ತಾಗಿ ಇದ್ದ ಕಿಟಕಿಯಲ್ಲಿದ್ದ ರೆಡಿಯೋವನ್ನು ಆನ್ ಮಾಡಿ ಸುಪ್ರಭಾತ ಬರುವಂತೆ ಮಾಡುತ್ತಿದ್ದರು.ಸುಪ್ರಭಾತದ ನಂತರ English news, ತದನಂತರ ಬರುವ ಕೃಷಿರಂಗ ಕೇಳುತ್ತಾ ನಮ್ಮ ತಲೆ ನೇವರಿಸುತ್ತಾ,ಮುದ್ದಿಸುತ್ತಾ ಕುಳಿತಿರುತ್ತಿದ್ದರು.

ಹೊರಗಡೆಯಿಂದ ಪರಕೆಯ ಶಬ್ಧ ಬರಬರ ಕೇಳುತ್ತಾ ಇರುತ್ತಿತ್ತು. ನಿಧಾನಕ್ಕೆ ಎದ್ದು ತಾತ ಹೊರಗೆ ಹೊರಡುತ್ತಿದ್ದರು. ಅವರು ಹೋಗಿ ಸ್ವಲ್ಪ ಸಮಯದ ನಂತರ ಕಳ್ಳ ಬೆಕ್ಕಿನಂತೆ ಹೆಜ್ಜೆ ಇಟ್ಟು ನಾನು ಹೊರಗೆ ಹೊರಡುತ್ತಿದ್ದೆ. ಬಾಗಿಲು ತೆರೆದು ಹೊರಗೆ ನೋಡಿದರೆ ಆಹಾ ಮಂಜು ನಿಧಾನಕ್ಕೆ ಗಾಳಿಯಲ್ಲಿ ತೇಲಿ ಹೋಗುತ್ತಾ ಇರುತ್ತಿತ್ತು. ಸೂರ್ಯನ ಕಿರಣ ಬಂಗಾರದಂತೆ ಹೊಳೆದು ಅದು ಸ್ಪರ್ಶಿಸಿದ ಜಾಗಕ್ಕೆಲ್ಲಾ ಮೆರುಗು ನೀಡುತ್ತಿತ್ತು.ಮನೆಯಾಳು ಬೋರ ಗುಡಿಸುತ್ತಿದ್ದ ಕಸದ ಧೂಳೆಲ್ಲಾ ಗಾಳಿಗೆ ಸೇರಿ ಅದೂ ಬಂಗಾರದ ಹೊಗೆಯಂತೆ ಭಾಸವಾಗುತ್ತಿತ್ತು. ಕೊಟ್ಟಿಗೆಯಿಂದ ಹಾಲನ್ನು ಕರೆಯುತ್ತಿದ್ದ ಶಬ್ಧ, ಆಗಲೇ ಹೊರಗಟ್ಟಿದ್ದ ಕರುವಿನ ಗಂಟೆಯ ಶಬ್ಧ ಕರ್ಣ ಮನೋಹರವಾಗಿ ತೇಲಿ ಬರುತ್ತಿತ್ತು.

ಆ ಬೆಳಗು ನನ್ನನ್ನು ಗಂಧರ್ವ ಲೋಕಕ್ಕೆ ಕರೆದೊಯ್ಯುತ್ತಿತ್ತು. ಮನೆಯ ಮುಂದಿದ್ದ ತೆಂಗಿನ ಮರ,ಮಲ್ಲಿಗೆ ಗಿಡ , ಮೋಸಂಬಿ ಗಿಡಗಳಿಂದ ಹೊರಸೂಸುತ್ತಿದ್ದ ಕಂಪು,ಯಕ್ಷ ಲೋಕದ ಕಿನ್ನರಿಯಂತೆ ಒಂದೊಂದರ ಸೊಬಗನ್ನು ಆಸ್ವಾದಿಸುತ್ತಾ ಇದ್ದೆ.ಕಸಗುಡಿಸುತ್ತಿದ್ದ ಬೋರನಿಗೆ,ತಾತ” ಕಸ ಸರಿಯಾಗಿ ಹೊಡೀಬೇಕೋ ಅವನು ಕಸ ಗುಡಿಸುವುದರಿಂದಲೇ ಅವನ ಜೀವನ ಹೆಂಗಿರುತ್ತೆ ಅಂತ ಹೇಳ್ಬಹುದೋ .ಮೂಲೆ ಮುಡುಕಗಳಿಂದ ಕಸ ಹೊರ ತೆಗೆದು ಗುಡಿಸಿಟ್ಟರೆ ಅವನ ಜೀವನವೂ ಬಂಗಾರನೇ ಕಣೋ” ಎನ್ನುತ್ತಿದ್ದರು. ಆಗ ಅದರ ಅರ್ಥ ಗೊತ್ತಾಗುತ್ತಿರಲಿಲ್ಲಾವಾದರೂ ಈಗ ಅದರಲ್ಲಿ ಅಡಗಿರುವ ಜೀವನ ಸಾರ , ಸ್ವಚ್ಛತೆ ಯ ಪಾಠ ಅರಿವಾಗುತ್ತದೆ.

ಅಲ್ಲಿ ನಿಂತು ಸಾಕಾಗಿ ಮತ್ತೆ ರೂಮ್ ಗೆ ಬಂದರೆ ಮಲಗಲು ನಿದ್ರೆಯೇ ಬರುತ್ತಿರಲಿಲ್ಲ. ಒಳಗೋಗಿ ಮುಖ ತೊಳೆದು ಸಮೀಚ್ಛಿನ್ನ ಹಾಲು ಕುಡಿದು ಸಂತೃಪ್ತಳಾಗಿ ಹೊರಗೋಡುತ್ತಿದ್ದೆ. ಕೊಟ್ಟಿಗೆಯ ದೇಖರಿಕಿ ಮುಗಿಸಿ ಬಂದು ತಾತ ಕಾಫಿ ಕುಡಿಯುತ್ತ’ ಪಾಪ ಪೇಪರ್ ತಗಂಡು ಬರ್ರಮ್ಮ ಅಂತಿದ್ದರು.ಎಲ್ಲರಿಗಿಂತ ಮೊದಲು ಪುಟಪುಟನೇ ಓಡಿ ಪೇಪರ್ ಜೊತೆಗೆ ತಾತಂಗೆ ಚಳಿ ಆಗುತ್ತೆ ಅಂತ ಶಾಲನ್ನು ತಂದು ಕೊಡುತ್ತಿದ್ದೆ. ನನ್ನ ಕಾಳಜಿ ಅವರ ಕಣ್ಣಲ್ಲಿ ಪ್ರೀತಿಯಾಗಿ ಸ್ಪುರಿಸುತ್ತಿತ್ತು.ವೈದ್ಯಕೀಯ ಸಮ್ಮೇಳನಕ್ಕೆ ದೆಹಲಿಗೆ ಹೋದಾಗ ಅಲ್ಲಿಂದ ತಂದ ಶಾಲು ಎಂಬ ಹೆಮ್ಮೆ ಮನೆಯ ಎಲ್ಲರಿಗಿತ್ತು.

ಹೀಗೇ ಕಾಲರಾಯನ ಬಂಡಿ ಸಾಗುತ್ತಾ ವಿಭಿನ್ನ ಅನುಭವಗಳು, ವಿಶೇಷ ಘಟನೆಗಳು ನಡೆದರೂ ತಾತನ ಪ್ರೀತಿ,ಊರಿನ ಸೆಳೆತ ಕ್ಕೆ ಎರವಾಗಿರಲಿಲ್ಲ.ತಾತನ ಕೊನೆಗಾಲದಲ್ಲಿ ಅವರ ಅಸಹಾಯಕ ಸ್ಥಿತಿ ನೋಡಿ ಸುಮ್ಮನೆ ನಿಂತಿರುತ್ತಿದ್ದೆ. ಕೈಸನ್ನೆಯಿಂದ ಹತ್ತಿರಕ್ಕೆ ಕರೆದು ಪಕ್ಕದಲ್ಲೇ ಕೂರಿಸಿಕೊಂಡು ಏನನ್ನೋ ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದರು. ಸುಮ್ಮನಿರಿ ಎಂದರೂ ಬಿಡದೆ ನೋಟ್ ಬುಕ್ ನಲ್ಲಿ ಬರೆದು ‘ಪಾಪ ನಿನಗೇನು ಬೇಕು ‘ ಎಂದರು.ಅವರ ಕಷ್ಟದ ಆ ಸ್ಥಿತಿ ನೋಡಲಾರದೇ ಬಾಯಿಗೆ ಬಂದದ್ದನ್ನು ವದರಿಬಿಟ್ಟೆ watch ಎಂದು ನನಗೆ ಬೇಕಿಲ್ಲ ದಿದ್ದರೂ. ಅದಾಗಿ 15 ದಿನದಲ್ಲೇ ತಾತ ಇನ್ನಿಲ್ಲ ಎನ್ನುವ ಸುದ್ದಿಯೊಂದಿಗೆ ಅಮ್ಮನ ಅಳು,ಅಪ್ಪಾಜಿಯ ಪೆಚ್ಚು ಮುಖದೊಂದಿಗೆ ಊರಿಗೆ ಬಂದಿಳಿದೆವು.

ಅದೇ ಬೆಳಗು ,ಸುರ್ಯೋದಯ. ಆದರೆ ನೀರವ ಮೌನ. ಆ ಮೌನವೂ ನಿಶ್ಯಬ್ಧವಾಗಿ ಅಳುವುದೇನೋ ಎಂಬಂತೆ. ತಾತ ಸುಮ್ಮನೆ ಮಲಗಿದೆ ಎಲ್ಲರೂ ಅಳುತ್ತಿದ್ದಾರೆ. ಈಗಿನಂತೆ ಸಂಪರ್ಕ ಸೌಲಭ್ಯ ಗಳು ಇಲ್ಲದ ಆ ದಿನಗಳಲ್ಲೂ ಅದೆಷ್ಟು ಜನ ಜನ ಜನ.ತಾತನ ಪ್ರೀತಿ ಪಾತ್ರರು,ಉಪಕೃತರು ಅದೆಷ್ಟು ಮಂದಿ. ಇವರಿಂದ ನಮ್ಮ ಮನೆ ಬೆಳಕಾಗಿತ್ತು,ಇವರ ಹೆಸರು ಹೇಳಿ ದೇವರಿಗೆ ಕೈ ಮುಗಿಯುತ್ತೇವೆ ಎಂದು ಹೇಳಿದ ಅನೇಕ ಮಂದಿ. ವೃತ್ತಿ ರಂಗಭೂಮಿ ಕಲಾವಿದರು.. ಆ ದಿನ ನಮ್ಮೂರ ಹೂವಿನ ಅಂಗಡಿಯ ಹೂ ಎಲ್ಲವೂ ಮಾರಾಟ ಗೊಂಡು ತಾತ ನ ಮೇಲೇರಿ ದ್ದವು.ಇಷ್ಟು ಜನರ ಒಡನಾಟ,ಪ್ರೀತಿ ಗಳಿಸಿದ್ದು ಹೇಗೆ?. ಅದ್ಯಾವಾಗ time ಇತ್ತು ತಾತನಿಗೆ. ಮತ್ತೆ ವಾಪಾಸ್ ಬಂದ್ರೆ ಸಾಕಪಾ ತಾತ… ಹೀಗೇ ನನ್ನ ಲಹರಿ ಸಾಗಿತ್ತು. ಕ್ರಿಯೆ ಕರ್ಮಗಳೆಲ್ಲಾ ಮುಗಿದು ಇಡೀ ಮನೆ ಜನರಿಂದ ತುಂಬಿದ್ದರೂ ಖಾಲಿ ಖಾಲಿ ಎನಿಸುತ್ತಿತ್ತು. ತಾತ ನ ರೂಮ್ ಗೆ ಹೋಗಿ ಅಲ್ಲಿ ಆಡೋಣ ಅಂತ ಹೋದ್ರೆ ಯಾವಾಗಲೂ ನೀಟಾಗಿರುತ್ತಿದ್ದ ಮಂಚ ಅಸ್ತವ್ಯಸ್ತಗೊಂಡಿದೆ. ತಾತನ ಶಾಲು ರೂಮಿನ ಮೂಲೆಯಲ್ಲಿ ಬಿದ್ದುಕೊಂಡಿತ್ತು. ನಿಧಾನಕ್ಕೆ ಅದನ್ನು ತಂದು ಮಂಚದ ಮೇಲಿಟ್ಟೆ. ತಾತ ಮತ್ತೆ ಬಂದ್ರೆ ಹೊದಿಸುವ ಎಂದುಕೊಳ್ಳುತ್ತಾ…

ಮತ್ತೆರೆಡು ತಿಂಗಳು ಕಳೆದ ಮೇಲೆ ಅಜ್ಜಿ ನಾವಿದ್ದ ಊರಿಗೆ ಬಂದರು.ಮಧ್ಯಾಹ್ನ ಊಟವಾಗಿ ಅಡ್ಡವಾಗಿದ್ದ ಹೊತ್ತು ಮಲಗಿದ್ದ ಅಜ್ಜಿ ನಿಧಾನಕ್ಕೆ ಎದ್ದು ಬಂದು ‘ಪಾಪ ಕ್ವಳ್ಳೇ . ನಿಮ್ ತಾತ ಆ ಹುಡುಗಿ ವಾಚ್ ಕೇಳಿದ್ಲು ಕೊಡುಸು ಅಂತ ಹೇಳಿ ಹೋಗಿದಾನೆ. ‘ಎಂದು ದುಡ್ಡು ಕೊಟ್ಟಿತು.ಪ್ರತಿಯೊಬ್ಬರ ಸಣ್ಣ ಆಸೆಯನ್ನು ಪೂರೈಸಿ ತನಗಾಗಿ ಏನೂ ಇಟ್ಟುಕೊಳ್ಳದೆ ಪರರ ಹಿತಕ್ಕಾಗೇ ಹಗಲಿರುಳು ದುಡಿದು ಹೋದ ತಾತ ಈ ಮೊಮ್ಮಗಳ ಚಿಕ್ಕ ಆಸೆಯನ್ನೂ ಬಿಡದೆ ಪೂರೈಸಿತ್ತು.

ವರ್ಷಗಳೇ ಕಳೆದು ಮದುವೆಯಾಗಿ ತವರು ಬಿಡುವಾಗ ಬೇರೆಲ್ಲಾ ವಸ್ತುಗಳಿಗಿಂತ ತಾತನ ಶಾಲು ಸೂಟ್ ಕೇಸ್ ನಲ್ಲಿ ಇಟ್ಟುಕೊಂಡೆ. “ಅದ್ಯಾಕಮ್ಮ ಹಳೇದು ಹೊಸದು ಇದೆ ನೋಡು” ಅಂದರೂ ಇಲ್ಲ ನನಗಿದೇ ಬೇಕು ಎಂದು ಒಂದಿಷ್ಟು ದುಃಖದಿಂದ ,ಹಕ್ಕಿನಿಂದ ಹೇಳಿದೆ.

ದೇಶ ಸುತ್ತುವ ಕೆಲಸದ ಗಂಡನ ಕೈ ಹಿಡಿದು ದೇಶಾದ್ಯಂತ ಸುತ್ತಿದಾಗಲೆಲ್ಲಾ ಈ ಶಾಲ್ ನನ್ನ ಜೊತೆಯಲ್ಲೇ ತಿರುಗುತ್ತಿತ್ತು. “ಕಾಯುವ ಕರುಳೊಂದು ಬೆಂಗಾವಲಿರದೆಯೇ ದೇಶಾಂತರದಲ್ಲಿ ಬದುಕಿದೆನೆ ” ಎಂಬ ಕವಿವಾಣಿ ಯ ಸತ್ಯ ನನಗೆ ಗೊತ್ತಾಗಿತ್ತು. ದುರ್ಗಮ ಸನ್ನಿವೇಶ ಗಳನ್ನು ಎದುರಿಸಿ ,ಸಹಿಸಿ,ಉಂಡು ಗಟ್ಟಿಯಾದದ್ದು ಈ ಶಾಲ್ ನ ಇರುವಿಕೆಯಿಂದಲೇ. ಜೀವ ಕಾರುಣ್ಯ, ಮಾನವೀಯತೆ ತಾತನ ಮೂಲಮಂತ್ರ.ಜಗದ ಉರಿಯೊಡಲಿನ ಬಿಸಿ ನನ್ನ ಬಳಿ ತಂಪಾಗಲು ಇದೇ ಕಾರಣಕ್ಕೆ. ಕಾಣದೂರಿನಲ್ಲಿ ಅನಾಥ ಭಾವ ಕಾಡಿದಾಗ ಈ ಶಾಲ್ ಹೊದ್ದರೆ ಬೆಚ್ಚಗೆ ನೊಚ್ಚಗೆ ಬಿಸುಪು ಪ್ರೀತಿ ರಕ್ಷಣೆ ಎಲ್ಲವೂ ದೊರೆತಂತೆನಿಸುತ್ತಿತ್ತು. ನನ್ನ ಮಕ್ಕಳಿಗೂ ಮುತ್ತಜ್ಜನ ಮುದ್ದು ಸಿಗಲಿ ಎಂದು ಅವರಿಗೂ ಹೊದಿಸುತ್ತಿದ್ದೆ. ಪೀಳಿಗೆಯಿಂದ ಪೀಳಿಗೆಗೆ ನಿರಂತರ ಸಾಗುವ ಪ್ರೀತಿ ಝರಿ ಅಮರವಾಗಲಿ.

ಹಳೆಯ ಮಧುರ ನೆನಪೊಂದು ಸುಂದರವಾಗಿ ಸಿತು ಈ ದಿನವನ್ನು. ಇದೇ ಶುಭ ದಿನ.

Related Articles

ಇತ್ತೀಚಿನ ಸುದ್ದಿಗಳು