ಬಾಬ್ಬಿ ಎನ್ನುವ ಅಮೇರಿಕಾದ ಕಪ್ಪು ಹುಡುಗಿ ತನ್ನ ಬಣ್ಣದ ಕಾರಣದಿಂದ ಅನುಮಾನಕ್ಕೀಡಾಗಿ ಅಪಮಾನಿತಳಾದಳು ಹಾಗೂ ಭಾರತದಲ್ಲಿ ಅರವತ್ತು ಹೆಣ್ಣು ಮಕ್ಕಳು ತಮ್ಮ ಹಾಸ್ಟೆಲ್ ವಾರ್ಡನ್ ಒಬ್ಬರ ಮೇಲೆ ದೂರು ನೀಡಲು ಸುಮಾರು ಸರಿರಾತ್ರಿಯಲ್ಲಿ ಹದಿನೇಳು ಕಿಲೊಮೀಟರ್ ನಡೆಯಬೇಕಾಗಿ ಬಂದಿತು. ಅಮೇರಿಕಾ ಮತ್ತು ಭಾರತದ ನಡುವೆ ದೂರದಲ್ಲಿ ಇರುವ ಅಂತರದಷ್ಟೇ ಅಂತರ ಎರಡೂ ದೇಶಗಳು ನಾಗರಿಕರು ಈ ಘಟನೆ ಸ್ಪಂದಿಸಿದ ರೀತಿಯಲ್ಲೂ ಇತ್ತು. ರಂಜಿತಾ ಜಿ ಎಚ್ ಅವರು ಬರೆದಿರುವ ಈ ಲೇಖನ ನಿಮ್ಮ ಭಾನುವಾರದ ಓದಿಗಾಗಿ
ಕಳೆದ ಅಕ್ಟೋಬರ್ ತಿಂಗಳ ಒಂದು ದಿನ 4ನೇ ತರಗತಿ ವಿದ್ಯಾರ್ಥಿ, ಬಾಬ್ಬಿಯ ಶಾಲೆಯಲ್ಲಿ ಮರಗಳಿಗೆ ಹಾಗೂ ವಾಣಿಜ್ಯ ಬೆಳೆಗಳಿಗೆ ಮುತ್ತಿ ಮಾರಣಾಂತಿಕವಾಗುವ ಮಚ್ಚೆಯುಳ್ಳ ಲ್ಯಾಂಟರ್ನ್‌ಫ್ಲೈ ಎನ್ನುವ ಕೀಟಗಳ ಬಗ್ಗೆ ವಿವರಿಸಲಾಯಿತು. ಹಾಗೂ ನ್ಯೂಜೆರ್ಸಿ ರಾಜ್ಯದ ನಿವಾಸಿಗಳಿಗೆ ಸರ್ಕಾರವು ತನ್ನ ‘ಸ್ಟಾಂಪ್ ಇಟ್ ಔಟ್’ (Stomp it Out) ಅಭಿಯಾನದಲ್ಲಿ ಭಾಗವಹಿಸಿ, ಕೀಟಗಳ ನಿವಾರಣೆಗೆ ಸಹಕರಿಸಲು ಕೋರಿದ್ದರ ಬಗ್ಗೆ ಶಿಕ್ಷಕಿಯು ವಿವರಿಸಿದರು. ಮನೆಗೆ ಬಂದ ಬಾಬ್ಬಿ ಗಂಟೆಗಳ ಕಾಲ ಇಂಟರ್ನೆಟ್ಟಿನಲ್ಲಿ ಕೀಟಗಳ ಕುರಿತು ಅಧ್ಯಯನ ನಡೆಸಿ ಟಿಕ್ ಟಾಕ್ ವಿಡಿಯೋ ಒಂದರಲ್ಲಿ ತೋರಿಸಲಾದ ಕೀಟ ನಾಶಕದ ಸರಳ ಮಾದರಿಯೊಂದನ್ನು ತಯಾರಿಸಿದಳು. ತನ್ನ ಮನೆಯ ಸುತ್ತ ಮುತ್ತಲಿನ ಬೀದಿಗಳ ಮರಗಳ ಮೇಲೆ ಅವಳು ಹಲವು ಲ್ಯಾಂಟರ್ನ್ ಫ್ಲೈಗಳನ್ನು ಕಂಡು, ಅವುಗಳ ಮೇಲೆ ತಾನು ತಯಾರಿಸಿದ ಕೀಟ ನಾಶಕವನ್ನು ಸಿಂಪಡಿಸಿ ಕಿತ್ತು ಪ್ಲಾಸ್ಟಿಕ್ ಬಾಟಲಿಗೆ ತುಂಬಿಸುತ್ತಿದ್ದಳು.
ತಮ್ಮ ಮನೆಯ ಕಿಟಕಿಯಿಂದ ಅವಳನ್ನು ನೋಡಿದ 71 ವರ್ಷದ ಲಾಶೆ, ಬಿಳಿಯರೇ ಹೆಚ್ಚಾಗಿ ವಾಸಿಸುವ ಆ ಬೀದಿಯಲ್ಲಿ ಮರಗಳ ಮೇಲೆ ಏನೋ ಸಂದೇಹಾಸ್ಪದ ಕಾರ್ಯಾಚರಣೆ ನಡೆಸುತ್ತಿರುವ ಒಬ್ಬ ಸಣ್ಣ ಕಪ್ಪು ಹುಡುಗಿಯನ್ನು ನೋಡಿ ಪೊಲೀಸರಿಗೆ ಕರೆ ಮಾಡಿದರು. ಅವರ ಕರೆಗೆ ಪ್ರತಿಕ್ರಿಯಿಸಿ ಸ್ಥಳ ತಲುಪಿದ ಪೊಲೀಸ್ ಅಧಿಕಾರಿ ಕೆವಿನ್‌ರನ್ನು ನೋಡಿ ಬಾಬ್ಬಿ ಬೆದರಿ ಕೇಳಿದಳು “ನನ್ನಿಂದ ಏನಾದರೂ ತಪ್ಪಾಯಿತೇ?“
ಪೊಲೀಸ್ ಅಧಿಕಾರಿಯೊಬ್ಬ ತನ್ನ ಮಗಳ ಬಳಿ ನಡೆಯುತ್ತಿರುವುದನ್ನು ಕಂಡು, ಅಲ್ಲಿಗೆ ಧಾವಿಸಿದ ಬಾಬ್ಬಿಯ ತಾಯಿ ಮೊನಿಕ್ ಜೋಸೆಫ್ ಮತ್ತು ಅಧಿಕಾರಿ ಇಬ್ಬರೂ ಒಕ್ಕೊರಲಿನಿಂದ “ಇಲ್ಲ“ ಎಂದು ಅವಳಿಗೆ ಧೈರ್ಯ ತುಂಬಿದರು. ಮಾಜಿ ಸಿಟಿ ಕೌನ್ಸಿಲ್ ಸದಸ್ಯ ಲಾಶೆ ಮಾಡಿದ ಕರೆಗೆ ತಾನು ಪ್ರತಿಕ್ರಿಯಿಸುತ್ತಿದ್ದೇನೆ ಎಂದು ಅಧಿಕಾರಿ ವಿವರಿಸಿದಾಗ ಜೋಸೆಫ್ ದಿಗ್ಭ್ರಮೆಗೊಳಗಾದರು.

ಕಾನೂನು ಜಾರಿಯ ಸಂಧರ್ಭದಲ್ಲಿ ಅತಿ ಹೆಚ್ಚು ತಾರತಮ್ಯಕ್ಕೊಳಗಾಗುವ ಕಪ್ಪು ವರ್ಣೀಯ ಮಕ್ಕಳ ಹಲವು ಉದಾಹರಣೆಗಳ ಕುರಿತು ತಿಳಿದಿದ್ದ ಜೋಸೆಫ್, ಕೆಲವು ವಾರಗಳ ನಂತರ ಕಾಲ್ಡ್‌ವೆಲ್ ಸಿಟಿ ಕೌನ್ಸಿಲ್ ಸಭೆಯಲ್ಲಿ ಈ ಸಮಸ್ಯೆಯನ್ನು ಚರ್ಚಿಸಿ ಪರಿಹರಿಸಲು ನಿರ್ಧರಿಸಿದರು. ಬಾಬ್ಬಿಯ ಅಕ್ಕ 13 ವರ್ಷದ ಹೇಡನ್ ವಿಲ್ಸನ್, ತನ್ನ ತಂಗಿಯು ಪಟ್ಟಣದ ಸಸ್ಯ ಸಂಪತ್ತಿನ ಕುರಿತು ಕಾಳಜಿ ಮಾಡಿದ ಒಬ್ಬ ಪುಟ್ಟ ಧೀರ ವಿಜ್ಞಾನಿ, ಆದರೆ ಈ ಕೆಟ್ಟ ಅನುಭವ ಜೀವನ ಪರ್ಯಂತ ಅವಳನ್ನು ಕಾಡಲಿದೆ ಎಂದು ಪಟ್ಟಣದ ನಾಗರಿಕರ ಮುಂದೆ ವರ್ಣ ಬೇಧದ ಈ ಆಘಾತಕಾರಿ ಉದಾಹರಣೆಯನ್ನು ವಿವರಿಸಿದಳು.
ಈ ಘಟನೆ ಹಾಗೂ ಬಾಬ್ಬಿಯ ಬೆಂಬಲಕ್ಕೆ ನಿಂತ ನಾಗರೀಕರ – ವಿಜ್ಞಾನಿಗಳ ಕುರಿತು ಓದುವಾಗ ನನಗೆ ಕೆಲ ದಿನಗಳ ಹಿಂದೆ ಝಾರ್ಖಂಡದ ಕಸ್ತೂರ್ ಬಾ ಶಾಲೆಯ 60 ಹೆಣ್ಣು ಮಕ್ಕಳು ತಮ್ಮ ಹಾಸ್ಟೆಲ್ ವಾರ್ಡನ್ ವಿರುದ್ಧ ದೂರು ದಾಖಲಿಸಲು ರಾತ್ರಿಯಲ್ಲಿ 17 ಕಿಲೋ ಮೀಟರು ನಡೆದ ಘಟನೆ ನೆನಪಾಯಿತು. 60 ಹೆಣ್ಣು ಮಕ್ಕಳು ರಾತ್ರೋ ರಾತ್ರಿ ನಡೆದ ಘಟನೆ ಒಂದು ದಿನದ ಮಾಧ್ಯಮ ವರದಿಯಾಗಿ ಉಳಿದು ಹೋಯಿತು.
ಪೋಲಿಸ್ ಬಾಡಿ ಕ್ಯಾಮ್ ನಲ್ಲಿ ದಾಖಲಾದ ಅಕ್ಟೋಬರ್ 22ರ ಈ ಘಟನೆಯು ಅಂತರ್ಜಾಲದಲ್ಲಿ ಬಯಲಾದ ನಂತರ ಬಾಬ್ಬಿ ಮತ್ತು ಅವಳ ವಿಜ್ಞಾನ, ಪರಿಸರ ಪ್ರೀತಿಯ ಕುರಿತು ಜನರ ಹಾಗೂ ವಿಜ್ಞಾನಿಗಳ ಸಮುದಾಯದಿಂದ ಪ್ರೀತಿ – ಬೆಂಬಲದ ಮಹಾಪೂರವೇ ಹರಿದು ಬಂತು. ಪಟ್ಟಣದ ಪರಿಸರವನ್ನು ಸುಧಾರಿಸಲು ನೀಡಿದ ಕೊಡುಗೆಗಾಗಿ ಕಾಲ್ಡ್‌ವೆಲ್ ಪರಿಸರ ಆಯೋಗವು ಬಾಬ್ಬಿಗೆ ಪ್ರಶಸ್ತಿ ನೀಡಿ ಗೌರವಿಸಿದರೆ ಒಬ್ಬ ವೈಜ್ಞಾನಿಕ ಲೇಖಕರು ಅವಳ ಕಲಿಕೆಯ ಉತ್ಸಾಹವನ್ನು ಉತ್ತೇಜಿಸಲು ಪುಸ್ತಕಗಳು ಮತ್ತು ಸ್ಟಿಕ್ಕರ್‌ಗಳ ಸಂಗ್ರಹವನ್ನು ನೀಡಿದ್ದಾರೆ.
ಕಳೆದ ತಿಂಗಳು ಯೇಲ್ ವಿಶ್ವವಿದ್ಯಾನಿಲಯವು ಬಾಬ್ಬಿಯ 27 ಮಚ್ಚೆಯುಳ್ಳ ಲ್ಯಾಂಟರ್ನ್ ಫ್ಲೈಗಳ ಸಂಗ್ರಹವನ್ನು ತನ್ನ ‘ಪೀಬಾಡಿ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಡೇಟಾಬೇಸ್’ ಗೆ ಸೇರಿಸಿದ್ದಲ್ಲದೆ , ಜನವರಿ 20ರಂದು ನಡೆದ ಸಮಾರಂಭದಲ್ಲಿ ಬಾಬ್ಬಿಗೆ “ಡೋನರ್ ಸೈಂಟಿಸ್ಟ್ ” ಎಂಬ ಬಿರುದನ್ನು ನೀಡಲಾಯಿತು. ಈ ಸಮಾರಂಭವನ್ನು ಆಯೋಜಿಸಿದ ಯೇಲ್ ಪ್ರೊಫೆಸರ್ ಒಪಾರಾ “ಯೇಲ್ ಸಾಮಾನ್ಯವಾಗಿ ಇಂತಹ ಸಮಾರಂಭ ಮಾಡುವುದಿಲ್ಲ. ಆದರೆ ಇದನ್ನು ಬಾಬ್ಬಿಗಾಗಿ ವಿಶೇಷವಾಗಿ ಆಯೋಜಿಸಲಾಗಿದೆ” ಎಂದು ಹೇಳಿದರು. ಇದಕ್ಕೂ ಮುಂಚೆ ಅವರು ಯೇಲ್ ಯುನಿವೆರ್ಸಿಟಿಯಲ್ಲಿ ಕೆಲಸ ಮಾಡುವ ಯಶಸ್ವಿ ಕಪ್ಪು ಜನಾಂಗದ ಮಹಿಳಾ ವಿಜ್ಞಾನಿಗಳನ್ನು ಭೇಟಿ ಮಾಡಲು ಬಾಬ್ಬಿ ಮತ್ತು ಅವಳ ಸಹೋದರಿಯನ್ನು ಕ್ಯಾಂಪಸ್‌ಗೆ ಆಹ್ವಾನಿಸಿದ್ದರು.
“ನಾವು ಅವಳ ಶೌರ್ಯವನ್ನು ಮತ್ತು ಅವಳು ಎಷ್ಟು ಸ್ಪೂರ್ತಿದಾಯಕ ವ್ಯಕ್ತಿ ಎನ್ನುವುದನ್ನು ಅವಳಿಗೆ ಹಾಗೂ ಜಗತ್ತಿಗೆ ತೋರಿಸಲು ನಿರ್ಧರಿಸಿದ್ದೇವೆ. ಯೇಲ್ ಸಮುದಾಯದಿಂದ ಅವಳಿಗೆ ನಿರಂತರ ಗೌರವ ಮತ್ತು ಪ್ರೀತಿಯು ಖಚಿತವಾಗಿ ದೊರೆಯುತ್ತದೆ” ಎಂದು ಎಂದು ಒಪಾರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರೊಂದಿಗಿನ ಮುಖಾಮುಖಿಯ ನಂತರ ತನ್ನ 9 ವರ್ಷದ ಮಗಳು ಹಲವು ದಿನಗಳು ಆಘಾತ ಅನುಭವಿಸಿದಳು ಎಂದು ಜೋಸೆಫ್ ಹೇಳಿದರು. ಸಮಾರಂಭದಲ್ಲಿ ಅವರು ತಮ್ಮ ಕುಟುಂಬದ ಬೆಂಬಲಕ್ಕೆ ಒಟ್ಟು ಗೂಡಿ ನಿಂತ ,ವಿಜ್ಞಾನದ ( STEM) ಬಗೆಗಿನ ಅವಳ ಆಸಕ್ತಿ ಕಳೆದುಕೊಳ್ಳಲು ಬಿಡುವುದಿಲ್ಲ ಎಂದ ವಿಜ್ಞಾನಿಗಳ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಘಟನೆ ಹಾಗೂ ಬಾಬ್ಬಿಯ ಬೆಂಬಲಕ್ಕೆ ನಿಂತ ನಾಗರೀಕರ – ವಿಜ್ಞಾನಿಗಳ ಕುರಿತು ಓದುವಾಗ ನನಗೆ ಕೆಲ ದಿನಗಳ ಹಿಂದೆ ಝಾರ್ಖಂಡದ ಕಸ್ತೂರ್ ಬಾ ಶಾಲೆಯ 60 ಹೆಣ್ಣು ಮಕ್ಕಳು ತಮ್ಮ ಹಾಸ್ಟೆಲ್ ವಾರ್ಡನ್ ವಿರುದ್ಧ ದೂರು ದಾಖಲಿಸಲು ರಾತ್ರಿಯಲ್ಲಿ 17 ಕಿಲೋ ಮೀಟರು ನಡೆದ ಘಟನೆ ನೆನಪಾಯಿತು. 60 ಹೆಣ್ಣು ಮಕ್ಕಳು ರಾತ್ರೋ ರಾತ್ರಿ ನಡೆದ ಘಟನೆ ಒಂದು ದಿನದ ಮಾಧ್ಯಮ ವರದಿಯಾಗಿ ಉಳಿದು ಹೋಯಿತು. ಈ ಬಾರಿಯ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಹಲವು ವಿದ್ಯಾರ್ಥಿ ವೇತನಗಳನ್ನು ಕಡಿತಗೊಳಿಸಿ ಅಭಿವೃದ್ಧಿಗಾಗಿ ಅತೀ ಕಡಿಮೆ ಹಣವನ್ನು ಇಲಾಖೆಗೆ ನೀಡಿದ ಸರ್ಕಾರದ ನಡೆಗೆ ನಾಗರೀಕರಿಂದ ಹಾಗೂ ಸಮಾಜದ ಗಣ್ಯರು – ನಾಯಕರೆನಿಸಿಕೊಂಡ ವರ್ಗದಿಂದ ಯಾವುದೇ ರೀತಿಯ ಅಸಮಧಾನ ಅಥವಾ ಪ್ರತಿಭಟನೆ ದಾಖಲಾಗದೇ ಇದ್ದುದು ಕೂಡ ಆಶ್ಚರ್ಯವೆನಿಸಲಿಲ್ಲ.
ಈ ಮಧ್ಯೆ ರಾಜಕೀಯವಾಗಿಯೂ ಅತಿ ಪ್ರಭಾವಶಾಲಿಯಾದ ಭಾರತೀಯ ಉದ್ಯಮಿಯೊಬ್ಬರ ಅಸಹಜ ವ್ಯಾಪಾರದ ಕುರಿತಾದ ಆಪಾದನೆ – ಸಂಶೋಧನಾ ವರದಿಗಳನ್ನು ‘ಭಾರತದ ವಿರುದ್ಧ ಆಕ್ರಮಣ’ ಎಂದು ಬಿಂಬಿಸುವ ಅಭಿಯಾನದಲ್ಲಿ ಮಾತ್ರ ಭಾರತದ ಹೆಚ್ಚಿನ ಮಾಧ್ಯಮಗಳು, ಬಲಿಷ್ಟ ಟ್ರೊಲ್ ಸೇನೆಯ ಜೊತೆಗೆ ಆಡಳಿತ ಪಕ್ಷದ ರಾಜಕಾರಣಿಗಳು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ, ಅಭಿಯಾನವು ಯಶಸ್ವಿಯಾಗುವ ಲಕ್ಷಣಗಳೂ ಕಾಣುತ್ತಿವೆ ಏಕೆಂದರೆ ಇವರ ಪ್ರಯತ್ನಕ್ಕೆ ಭಾರತದ ಇನ್ನೊಬ್ಬ ‘ಹೃದಯವಂತ’ ಬಿಲಿಯನೇರ್ ಉದ್ಯಮಿಯೂ ಜೊತೆಯಾಗಿದ್ದಾರೆ. ಸದ್ಯ ಉದ್ಯಮಿಯೊಬ್ಬರು “ಭಾರತ“ವಾಗಿದ್ದಾರೆ, ಮಕ್ಕಳು ಮಾನಸಿಕವಾಗಿ – ದೈಹಿಕವಾಗಿ ಬಡವಾಗಿದ್ದಾರೆ.