ಒಕ್ಕೂಟ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಸತ್ತಿನಲ್ಲಿ ಚರ್ಚಿಸದೇ ಸಚಿವ ಸಂಪುಟದ ಒಪ್ಪಿಗೆ ಪಡೆದು ತರಾತುರಿಯಲ್ಲಿ ಜ್ಯಾರಿಗೆ ತಂದಿದೆ. ಶಿಕ್ಷಣ ಕೇತ್ರದ ಪ್ರಜ್ಞಾವಂತರು ಈಗಾಗಲೇ ವಸ್ತುನಿಷ್ಠ ನೆಲೆಯಲ್ಲಿ ಈ ಶಿಕ್ಷಣ ನೀತಿಯನ್ನು ವಿಮರ್ಶಿಸಿದ್ದಾರೆ; ಈಗಲೂ ವಿಮರ್ಶಿಸುತ್ತಿದ್ದಾರೆ. ನಿನ್ನೆ ಮಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪುರುಷೋತ್ತಮ ಬಿಳಿಮಲೆಯವರು ಭಾಷಾ ಶಾಸ್ತ್ರದ ಹಿನ್ನೆಲೆಯಲ್ಲಿ ಸದರಿ ನೀತಿಯು ಭಾರತೀಯ ಭಾಷೆಗಳಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ವಿಶ್ಲೇ಼ಷಿಸಿದ್ದಾರೆ. ಅವರ ಮಾತುಗಳನ್ನು ಮೂರು ಭಾಗಗಳಲ್ಲಿ ಪೀಪಲ್ ಮೀಡಿಯಾವು ನಿಮಗಾಗಿ ಪ್ರಸ್ತುತ ಪಡಿಸುತ್ತಿದೆ. ಓದಿ.
ಶಿಕ್ಷಣ ನೀತಿಯ ನಿಲುವು:
ಹೊಸ ಶಿಕ್ಷಣ ನೀತಿಯ 22 ನೇ ಅಧ್ಯಾಯದಲ್ಲಿ ( 22.4, 22.5, 22.6, ಮತ್ತು 22.7) ಭಾರತೀಯ ಭಾಷೆಗಳ ಕುರಿತು ಈ ಕೆಳಗಿನ ಮಾತುಗಳನ್ನು ಹೇಳಲಾಗಿದೆ –
‘ಕಲೆ ಮತ್ತು ಸಂಸ್ಕೃತಿಯ ಜೊತೆಗೆ ಭಾಷೆಯದ್ದು ನಿಸ್ಸಂದೇಹವಾಗಿ ಬಿಡಿಸಲಾರದ ನಂಟು. ನಾನಾ ಭಾಷೆಗಳು ಜಗತ್ತನ್ನು ಭಿನ್ನ ರೀತಿಯಲ್ಲಿ ನೋಡುತ್ತವೆ. ಹಾಗಾಗಿ ಒಂದು ಭಾಷೆಯ ಸ್ವರೂಪ ಅದನ್ನು ಮಾತಾಡುವ ಸ್ಥಳೀಯರ ಅನುಭವದ ಗ್ರಹಿಕೆಯನ್ನು ನಿರ್ಧರಿಸುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಆಯಾ ಸಂಸ್ಕೃತಿಗೆ ಸೇರಿದ ಜನರು ತಮ್ಮ ಕುಟುಂಬದ ಸದಸ್ಯರು, ಅಧಿಕಾರಿಗಳು ತಜ್ಞರು ಮತ್ತು ಅಪರಿಚಿತರು ಸೇರಿದಂತೆ, ಇತರರೊಂದಿಗೆ ಮಾತಾಡುವ ರೀತಿಯ ಮೇಲೆ ಭಾಷೆಗಳು ಪ್ರಭಾವ ಬೀರುತ್ತವೆ. ಮತ್ತು ಮಾತಿನ ದಾಟಿಯ ಮೇಲೆಯೂ ಪ್ರಭಾವ ಬೀರುತ್ತವೆ. ಸಮಾನ ಭಾಷೆಯನ್ನು ಮಾತಾಡುವ ಭಾಷಿಕರ ಸಂಭಾಷಣೆಯಲ್ಲಿ ಅಂತರ್ಗತವಾಗಿರುವ ಮಾತಿನ ಧಾಟಿ, ಅನುಭವದ ಗ್ರಹಿಕೆ ಮತ್ತು ಅನ್ಯೋನ್ಯತೆ ಒಂದು ಸಂಸ್ಕೃತಿಯ ಪ್ರತಿಬಿಂಬ. ಅಥವಾ ದಾಖಲೆಯಾಗಿರುತ್ತದೆ. ಹಾಗಾಗಿ ಸಂಸ್ಕೃತಿಯು ನಮ್ಮ ಭಾಷೆಗಳಲ್ಲಿ ಆವರಿಸಿಕೊಂಡಿರುತ್ತದೆ. ಸಾಹಿತ್ಯ, ನಾಟಕ, ಸಂಗೀತ, ಚಲನಚಿತ್ರ, ಇತ್ಯಾದಿ ರೂಪದಲ್ಲಿರುವ ಕಲೆಯನ್ನು ಭಾಷೆಯ ನಂಟು ಇಲ್ಲದೆ ಪೂರ್ಣವಾಗಿ ಪ್ರಶಂಸಿಸಲು ಸಾಧ್ಯವಿಲ್ಲ. ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲು ಒಂದು ಸಂಸ್ಕೃತಿಯ ಭಾಷೆಗಳನ್ನು ಕೂಡಾ ಸಂರಕ್ಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು.
ದುರಾದೃಷ್ಟದ ಸಂಗತಿಯೆಂದರೆ, ಭಾರತೀಯ ಭಾಷೆಗಳಿಗೆ ನಿಜಕ್ಕೂ ಸಿಗಬೇಕಾದ ಮಾನ್ಯತೆ ಮತ್ತು ಕಾಳಜಿ ಸಿಕ್ಕಿಲ್ಲದೇ ಇರುವುದರಿಂದ ಕಳೆದ ಐವತ್ತು ವರ್ಷಗಳಲ್ಲಿ ದೇಶವು ೨೨೦ಕ್ಕೂ ಹೆಚ್ಚು ಭಾಷೆಗಳನ್ನು ಕಳೆದುಕೊಂಡಿದೆ. ಭಾರತದ 197 ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಯೂನೆಸ್ಕೋ ಘೋಷಿಸಿದೆ. ವಿಶೇಷವಾಗಿ ಅನೇಕ ಲಿಪಿ ರಹಿತ ಭಾಷೆಗಳು ವಿನಾಶದ ಅಂಚಿನಲ್ಲಿವೆ. ಇಂಥ ಭಾಷೆಗಳನ್ನಾಡುವ ಒಂದು ಬುಡಕಟ್ಟಿನ ಅಥವಾ ಸಮುದಾಯದ ಹಿರಿಯರೊಬ್ಬರು ಮೃತ ಪಟ್ಟರೆ ಆ ಭಾಷೆಗಳೂ ಅವರೊಂದಿಗೇ ಮರೆಯಾಗುತ್ತವೆ. ಇಂಥ ಶ್ರೀಮಂತ ಭಾಷೆಗಳು/ ಸಂಸ್ಕೃತಿಗಳ ಅಭಿವ್ಯಕ್ತಿಗಳನ್ನು ಸಂರಕ್ಷಿಸಲು ಅಥವಾ ದಾಖಲಿಸಲು ಯೋಜಿತ ಕ್ರಮಗಳನ್ನು ಕೈಗೊಂಡಿಲ್ಲ. ಇವೆಲ್ಲಕ್ಕಿಂತ ಮಿಗಿಲಾಗಿ, ಇಂಥ ಅಪಾಯದ ಪಟ್ಟಿಯಲ್ಲಿ ಅಧಿಕೃತವಾಗಿ ಇಲ್ಲದೇ ಇರುವ, ಉದಾಹರಣೆಗೆ ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ೨೨ ಭಾಷೆಗಳೂ ಕೂಡ ಅನೇಕ ಆಯಾಮಗಳಿಂದ ಗಂಭೀರ ಸಮಸ್ಯೆಗಳನ್ನೆದುರಿಸುತ್ತಿವೆ. ಶಾಲೆ ಮತ್ತು ಉನ್ನತ ಶಿಕ್ಷಣದ ಪ್ರತಿಯೊಂದು ಹಂತದಲ್ಲಿಯೂ ಭಾರತೀಯ ಭಾಷೆಗಳ ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ. ಈ ಭಾಷೆಗಳು ಪ್ರಸ್ತುತ ಮತ್ತು ಚಲನಶೀಲವಾಗಿ ಇರುವಂತೆ ಮಾಡಲು ಪಠ್ಯ ಪುಸ್ತಕಗಳು, ವೀಡಿಯೋಗಳು, ನಾಟಕಗಳು, ಕವಿತೆಗಳು, ಕಾದಂಬರಿ, ನಿಯತಕಾಲಿಕೆಗಳೂ ಸೇರಿದಂತೆ ಈ ಭಾಷೆಗಳಲ್ಲಿರುವ ಉನ್ನತ ಮಟ್ಟದ ಕಲಿಕಾ ಮತ್ತು ಮುದ್ರಣ ಸಾಮಗ್ರಿಗಳು ನಿರಂತರವಾಗಿ ಪ್ರಸಾರವಾಗುವಂತೆ ಮಾಡಬೇಕುʼ.
ಈ ಮಾತುಗಳು ಬಹಳ ಮಹತ್ವದ್ದು. ದೇಸೀ ಭಾಷೆಗಳ ಉಳಿವು ಮತ್ತು ಬಳಕೆಯ ವಿಷಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಹೇಳಿದ ಮಾತುಗಳಲ್ಲಿ ಸತ್ಯ ಇದೆ. ಒಂದು ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲು ಭಾಷೆಗಳನ್ನು ಕೂಡಾ ಸಂರಕ್ಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂಬ ಮಾತು ಗಮನಾರ್ಹ.
ಶಿಕ್ಷಣ ಮಾಧ್ಯಮ ಮತ್ತು ಅದರ ಅಳವಡಿಕೆಯ ಸಮಸ್ಯೆಗಳು:
ಶಿಕ್ಷಣ ನೀತಿಯ ಶಿಫಾರಸುಗಳ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ಗಮನಿಸಬೇಕು.
ದೇಸೀ ಭಾಷೆಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ರಾಜ್ಯ ಸರಕಾರದ್ದು ಎಂದು ಶಿಕ್ಷಣನೀತಿ ಹೇಳುತ್ತದೆ. ಆದರೆ ಹಿಂದಿಯ ವಿಷಯದಲ್ಲಿ ಕೇಂದ್ರ ಸರಕಾರವೇ ಆ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದು ಸಂವಿಧಾನ ಹೇಳಿದ್ದಕ್ಕೆ ಅನುಗುಣವಾಗಿದೆ. ಜೊತೆಗೆ ಹಿಂದೀ ಭಾಷೆಯು ಕೇಂದ್ರದ ಗೃಹ ಇಲಾಖೆಯ ಅಡಿಯಲ್ಲಿ ಬಂದರೆ, ಉಳಿದ ಭಾಷೆಗಳು ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುತ್ತದೆ. ಈ ತಾರತಮ್ಯವು ಇದೀಗ ಸಮಸ್ಯೆಗಳನ್ನು ಬೃಹದಾಕಾರವಾಗಿ ಬೆಳೆಸಿದೆ. ಇದನ್ನು ಇನ್ನಷ್ಟು ವಿವರವಾಗಿ ಗಮನಿಸಬೇಕು.
ಹಿಂದಿಯ ಅಭಿವೃದ್ಧಿ: ೨೦೧೧ರ ಜನಗಣತಿಯ ಪ್ರಕಾರ ಇವತ್ತು ಭಾರತದಲ್ಲಿ ಹಿಂದಿ ಮಾತಾಡುವವರ ಸಂಖ್ಯೆ 66 ಕೋಟಿ ಆಗಿದ್ದು ಇದು ಭಾರತದ 56% ಜನರಿಗೆ ಗೊತ್ತಿರುವ ಭಾಷೆಯಾಗಿದೆ. ಆರ್ಟಿಕಲ್ 120 ರ ಪ್ರಕಾರ ಸಂಸತ್ತಿನ ಕಾರ್ಯಕಲಾಪಗಳು ಹಿಂದಿ ಅಥವಾ ಇಂಗ್ಲಿಷಿನಲ್ಲಿ ನಡೆಯಬೇಕು. ಆದರೆ ಒಬ್ಬ ಸಂಸದನಿಗೆ ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತಾಡಲು ಸಾಧ್ಯ ಆಗದಿದ್ದರೆ ಆತ ತನ್ನ ತಾಯ್ನುಡಿಯಲ್ಲಿ ಮಾತಾಡಬಹುದು. 15 ವರ್ಷಗಳ ಆನಂತರ ಅಲ್ಲಿಂದ ಇಂಗ್ಲಿಷನ್ನು ತೆಗೆಯಬೇಕು. ಇದೇ ಪ್ರಕಾರ ರಾಜ್ಯ ವಿಧಾನ ಸಭೆಗಳಲ್ಲಿ ಆಯಾ ರಾಜ್ಯದ ಅಧಿಕೃತ ಭಾಷೆಯಲ್ಲಿ ಕಲಾಪಗಳು ನಡೆಯಬೇಕು. ಆರ್ಟಿಕಲ್ 342 ರ ಪ್ರಕಾರ ಒಕ್ಕೂಟ ಸರಕಾರವು ದೇವನಾಗರಿ ಲಿಪಿ ಮತ್ತು ಹಿಂದಿಯನ್ನು ಬಳಸಬೇಕು. ನಿಧಾನವಾಗಿ ಇಂಗ್ಲಿಷನ್ನು ಕೈಬಿಡಬೇಕು.
ಆರ್ಟಿಕಲ್ 344 ರ ಪ್ರಕಾರ ರಾಷ್ಟ್ರಪತಿಗಳು ರಚಿಸುವ ಸಮಿತಿಯು ಭಾಷಾ ವಿಷಯಕವಾಗಿ ಸಲಹೆಗಳನ್ನು ಸರಕಾರಕ್ಕೆ ನೀಡಬೇಕು. ಇದನ್ನು ಆಧರಿಸಿ ಕಳೆದ ಎಪ್ರಿಲ್ ತಿಂಗಳಲ್ಲಿ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಭಾಷಾ ಸಮಿತಿಯ 37 ನೇ ಸಭೆಯು ತನ್ನ ಶಿಫಾರಸುಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದೆ. ಈ ವರದಿಯ ಪ್ರತಿಗಳು ಸಾರ್ವಜನಿಕರಿಗೆ ಲಭ್ಯ ಇಲ್ಲದಿದ್ದರೂ ಅದರ ಐದು ಮುಖ್ಯ ಶಿಫಾರಸು ಮತ್ತು ವರದಿಗಳನ್ನು ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋ ಪ್ರಕಟಿಸಿದೆ. ಆ ಪ್ರಕಾರ-
- ಒಂಬತ್ತನೇ ತರಗತಿವರೆಗಣ ವಿದ್ಯಾರ್ಥಿಗಳು ಹಿಂದಿಯ ಕುರಿತು ಪ್ರಾಥಮಿಕ ತಿಳಿವಳಿಕೆಯನ್ನು ಹೊಂದಿರಬೇಕು
- ಹಿಂದಿಯನ್ನು ಒಕ್ಕೂಟ ಸರಕಾರ ಹೆಚ್ಚು ಹೆಚ್ಚು ಬಳಸಬೇಕು
- ಮೂರನೆಯದಾಗಿ ಹಿಂದಿಯು ಇಂಗ್ಲಿಷನ್ನು ಸ್ಥಳಾಂತರಿಸಬೇಕು
- ಭಾರತೀಯರು ರಾಷ್ಟ್ರದ ಏಕತೆಗಾಗಿ ಒಕ್ಕೂಟ ಸರಕಾರದ ಅಧಿಕೃತ ಭಾಷೆಯನ್ನೇ ಹೆಚ್ಚು ಹೆಚ್ಚು ಬಳಸಬೇಕು
- ಐದನೆಯದಾಗಿ ಉತ್ತರ ಪೂರ್ವದ ಒಂಬತ್ತು ಬುಡಕಟ್ಟು ಜನರ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಉತ್ತರ ಪೂರ್ವದ ಏಳು ರಾಜ್ಯಗಳು 10 ನೇ ತರಗತಿಯವರೆಗೆ ಹಿಂದಿಯನ್ನು ಖಡ್ಡಾಯವಾಗಿ ಕಲಿಸಲು ಒಪ್ಪಿಕೊಂಡಿವೆ.
ಈ ಹಿನ್ನೆಲೆಯಲ್ಲಿ ನಾವು ಭಾರತದ ಪ್ರಾದೇಶಿಕ ಭಾಷೆಗಳನ್ನು ಗಮನಿಸೋಣ.
ಆರ್ಟಿಕಲ್ 345 ರ ಪ್ರಕಾರ, ರಾಜ್ಯ ಸರಕಾರಗಳು ತಮ್ಮ ರಾಜ್ಯದ ಒಂದು ಅಥವಾ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ತನ್ನ ಅಧಿಕೃತ ಭಾಷೆಗಳೆಂದು ಘೋಷಿಸಬಹುದು
ಆರ್ಟಿಕಲ್ 347 ರ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರಕಾರಗಳ ಹಾಗೂ ರಾಜ್ಯ ಮತ್ತು ರಾಜ್ಯ ಸರಕಾರಗಳ ನಡುವಣ ಸಂಪರ್ಕ ಭಾಷೆಯು ಯಾವುದೇ ಅಧಿಕೃತ ಭಾಷೆ ಆಗಬಹುದು. ಹೆಚ್ಚು ರಾಜ್ಯಗಳು ಒಪ್ಪಿದರೆ ಹಿಂದಿಯೂ ಅಗಬಹುದು. ಆರ್ಟಿಕಲ್ 347 ರ ಪ್ರಕಾರ ರಾಜ್ಯವೊಂದರ ಬೇರೊಂದು ಅಧಿಕೃತ ಭಾಷೆಯೂ ಸಂಪರ್ಕ ಭಾಷೆಯಾಗಬಹುದು.
ಇಲ್ಲಿ ಮತ್ತೆ ಎರಡು ವಿಷಯಗಳನ್ನು ಗಮನಿಸಬೇಕು.
ನಾನು ಆರಂಭದಲ್ಲಿ ಹೇಳಿರುವಂತೆ, ಹೊಸ ಶಿಕ್ಷಣ ನೀತಿಯು ಕೂಡಾ ಸಂವಿಧಾನದ ಮಾತುಗಳನ್ನು ಪುನರುಚ್ಚರಿಸಿದೆ. ದೇಸೀ ಭಾಷೆಗಳ ಅಭಿವೃದ್ಧಿಯ ಜವಾಬ್ದಾರಿಯು ರಾಜ್ಯ ಸರಕಾರದ್ದು ಎಂದು ಅದೂ ಹೇಳಿದೆ. ಆದರೆ ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರಿಂ ಕೋರ್ಟ್ 2005ರಲ್ಲಿಯೇ ಅದನ್ನು ತಿರಸ್ಕರಿಸಿ, ಈ ತೀರ್ಮಾನವು ಸಂವಿಧಾನದ 19 (1) ಎ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿತು.
ಹೀಗೆ ಇರುವುದರಿಂದಾಗಿ, ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ತಾರದ ಹೊರತು ಕನ್ನಡದಲ್ಲಿ ಬೋಧನೆ ಸಾಧ್ಯವೇ ಇಲ್ಲ.. ಹೀಗಾಗಿ ಶಿಕ್ಷಣ ನೀತಿಯ ಶಿಫಾರಸು ಮತ್ತು ಸುಪ್ರೀಂ ಕೋರ್ಟಿನ ತೀರ್ಮಾನಗಳ ನಡುವೆ ತಾಳಮೇಳ ಇಲ್ಲವಾಗಿದೆ. ಇದಕ್ಕೆ ಪೂರಕವಾಗಿ ಮಾರ್ಚ್ 10, 2022 ರಂದು ಕೇಂದ್ರ ಸರಕಾರವು ಹೊಸ ಶಿಕ್ಷಣ ನೀತಿಯ ಪ್ರಕಾರ ಕನ್ನಡವನ್ನು ಖಡ್ಡಾಯವಾಗಿ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟಿಗೆ ತಿಳಿಸಿದೆ
ಎರಡನೆಯದಾಗಿ, ಸಂವಿಧಾನದ ಆರ್ಟಿಕಲ್ 345 ರ ಪ್ರಕಾರ ರಾಜ್ಯಗಳು ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳನ್ನು ಹೊಂದಬಹುದು. ಇದನ್ನು ಆಧರಿಸಿ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ತೆಲುಗುವಿನ ಜೊತೆಗೆ ಉರ್ದುವನ್ನು ಅಧಿಕೃತ ಭಾಷೆ ಮಾಡಿಕೊಂಡಿದೆ. ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಮೈಥಿಲಿ ಮತ್ತು ಬಾಂಗ್ಲಾವನ್ನು , ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ಅಸ್ಸಾಂ ಸರಕಾರವು ಅಸ್ಸಾಮೀ ಜೊತೆಗೆ ಬಂಗಾಲೀ ಮತ್ತು ಬೋಡೋವನ್ನು, ಮೇಘಾಲಯವು ಇಂಗ್ಲಿಷ್ ಜೊತೆಗೆ ಖಾಸೀ ಮತ್ತು ಗಾರೋವನ್ನು, ದೆಹಲಿ ಸರಕಾರವು ಹಿಂದಿಯ ಜೊತೆಗೆ, ಇಂಗ್ಲಿಷ್, ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಆದರೆ, ಕರ್ನಾಟಕವು ಕನ್ನಡ ಹೊರತು ಪಡಿಸಿದರೆ, ಉಳಿದ ಕೊಡವ, ತುಳು ಮತ್ತಿತರ ತನ್ನದೇ ಆಗಿರುವ ಮುಖ್ಯ ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ತುಳುವನ್ನು ಅಧಿಕೃತ ಭಾಷೆ ಮಾಡಲು ಸರಕಾರ ಒಂದು ಸಮಿತಿಯನ್ನು ರಚಿಸಿದೆ. ಆದರೆ ಇದುವೇ ಸರಕಾರ ಉರ್ದು ಅಕಾಡೆಮಿಯನ್ನು ಮುಚ್ಚಿಸಿದೆ. ಕೊಡವ ಭಾಷೆಯನ್ನು ಉಪೇಕ್ಷಿಸಿದೆ. ಹೀಗೆ ಶಿಕ್ಷಣ ನೀತಿಯು ಏನೇ ಹೇಳಿದರೂ ವಾಸ್ತವದಲ್ಲಿ ನಡೆಯುತ್ತಿರುವುದೇ ಬೇರೆ.
(ಎರಡನೆಯ ಭಾಗ- ತಾಯ್ನುಡಿಗಳ ಸಮಸ್ಯೆ- ನಾಳೆ 7.02.2023)
ಪುರುಷೋತ್ತಮ ಬಿಳಿಮಲೆ
ಹಿರಿಯ ವಿದ್ವಾಂಸರು ಮತ್ತು ಸಂಸ್ಕೃತಿ ಚಿಂತಕರು