Home ದೇಶ ಮಣಿಪುರ: ಚುರಾಚಂದ್‌ಪುರದಲ್ಲಿ 87 ಕುಕಿ-ಜೋ ಶವಗಳ ಅಂತಿಮ ದರ್ಶನ

ಮಣಿಪುರ: ಚುರಾಚಂದ್‌ಪುರದಲ್ಲಿ 87 ಕುಕಿ-ಜೋ ಶವಗಳ ಅಂತಿಮ ದರ್ಶನ

0

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಮಡಿದ ಕುಕಿ-ಜೋ ಸಮುದಾಯದ 87 ಸದಸ್ಯರ ಶವಗಳನ್ನು ಬುಧವಾರ ಚುರಾಚಂದ್‌ಪುರ ಜಿಲ್ಲೆಯಲ್ಲಿ ಸಾಮೂಹಿಕ ಸಮಾಧಿ ಮಾಡಲಾಗಿದೆ.

ಬುಧವಾರ ಮಧ್ಯಾಹ್ನ 2.30 ರ ಸುಮಾರಿಗೆ ಜಿಲ್ಲೆಯ ಸೆಹ್ಕೆನ್ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ರಾಜ್ಯದ ಕುಕಿ-ಜೋ ಸಮುದಾಯವನ್ನು ಪ್ರತಿನಿಧಿಸುವ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ತಿಳಿಸಿದೆ.

ಮುಂಜಾನೆ, ಟುಯುಬಾಂಗ್ ಪ್ರದೇಶದ ಶಾಂತಿ ಮೈದಾನದಲ್ಲಿ ನಿಧನರಾದವರಿಗೆ ಶ್ರದ್ದಾಂಜಲಿ ಸಲ್ಲಿಸಲು ಸಾವಿರಾರು ಜನರು ಭಾಗವಹಿಸಿದ್ದರು.

ನಲವತ್ತೊಂದು ಶವಗಳನ್ನು ಇಂಫಾಲ್‌ನಿಂದ ವಿಮಾನದಲ್ಲಿ ತರಲಾಗಿತ್ತು. ಉಳಿದ 46 ಮೃತದೇಹಗಳನ್ನು ಚುರಾಚಂದ್‌ಪುರ ಸಿವಿಲ್ ಆಸ್ಪತ್ರೆಯ ಶವಾಗಾರದಿಂದ ಸಮಾಧಿ ಸ್ಥಳಕ್ಕೆ ತರಲಾಯಿತು ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ವಕ್ತಾರರು ಹೇಳಿರುವುದನ್ನು ದಿ ಹಿಂದೂ ವರದಿ ಮಾಡಿದೆ.

ಸಾಮೂಹಿಕ ಸಮಾಧಿಯಲ್ಲಿ ದುಃಖತಪ್ತರು ಇಗಮ್ ಹಿಲೌ ಹಾಮ್ [ಇದು ನನ್ನ ಭೂಮಿ ಅಲ್ಲವೇ?] ಗೀತೆಗಳನ್ನು ಹಾಡಿದರು ಮತ್ತು ಮಡಿದವರಿಗೆ ಗನ್ ಸೆಲ್ಯೂಟ್ ನೀಡಿ ಗೌರವಿಸಿದ್ದಾರೆ.

ಡಿಸೆಂಬರ್ 15 ರಂದು, ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಇದೇ ರೀತಿಯ ಸಾಮೂಹಿಕ ಸಮಾಧಿ ನಡೆಯಿತು, ಇದರಲ್ಲಿ ಕುಕಿ-ಜೋ ಸಮುದಾಯದ 19 ಸದಸ್ಯರ ದೇಹಗಳನ್ನು ಅಂತ್ಯಕ್ರಿಯೆ ಮಾಡಲಾಗಿತ್ತು.

ಮಣಿಪುರವು ಮೇ ತಿಂಗಳ ಆರಂಭದಿಂದಲೂ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದ ನಲುಗಿಹೋಗಿತ್ತು. ಪೊಲೀಸ್ ದಾಖಲೆಗಳ ಪ್ರಕಾರ ಸಂಘರ್ಷದಲ್ಲಿ 175 ಜನರು ಸಾವನ್ನಪ್ಪಿದ್ದಾರೆ. ಸುಮಾರು 60,000 ಜನರು ತಮ್ಮ ಮನೆಗಳನ್ನು ತೊರೆದಿದ್ದರು.

ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ನವೆಂಬರ್ 20 ರಂದು ತನ್ನ ವರದಿಯಲ್ಲಿ ಮೂರು ರಾಜ್ಯಗಳ ಶವಾಗಾರಗಳಲ್ಲಿ 94 ದೇಹಗಳಲ್ಲಿ 88 ಅನ್ನು ಗುರುತಿಸಲಾಗಿದೆ ಎಂದು ಹೇಳಿದೆ. ಆದರೂ, ನಾಗರಿಕ ಸಮಾಜ ಸಂಘಟನೆಗಳು ಮೃತದೇಹಗಳನ್ನು ಸ್ವೀಕರಿಸದಂತೆ ಅವರ ಸಂಬಂಧಿಕರ ಮೇಲೆ “ಒತ್ತಡ” ಹೇರುತ್ತಿದೆ ಎಂದು ಸಮಿತಿ ಹೇಳಿದೆ.

ಇದರ ಬೆನ್ನಲ್ಲೇ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಎಲ್ಲರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸುವಂತೆ ನ್ಯಾಯಾಲಯ ಮಣಿಪುರ ಸರ್ಕಾರಕ್ಕೆ ಸೂಚಿಸಿದೆ.

You cannot copy content of this page

Exit mobile version