ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು: ವೃದ್ಧಾಪ್ಯದಲ್ಲಿ ಪೋಷಕರನ್ನು ನಿರ್ಲಕ್ಷಿಸಿದರೆ ಮಕ್ಕಳಿಗೆ ನೀಡಿದ ಆಸ್ತಿ ವಾಪಸ್ ಪಡೆದುಕೊಳ್ಳಲು ಅವಕಾಶ

ಮುಂಬೈ: ಪೋಷಕರಿಂದ ಆಸ್ತಿ ಪಡೆದು ಅವರ ಸಂರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ವರ್ತಿಸುವ ಮಕ್ಕಳಿಗೆ ಕಣ್ಣು ತೆರೆಸುವಂತಹ ಮಹತ್ವದ ತೀರ್ಪನ್ನು ಬಾಂಬೆ ಹೈಕೋರ್ಟ್ ನೀಡಿದೆ.

ವೃದ್ಧಾಪ್ಯದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಷರತ್ತಿನೊಂದಿಗೆ ಪೋಷಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡಿದ್ದರೆ, ಆ ಷರತ್ತನ್ನು ಮಕ್ಕಳು ಈಡೇರಿಸದಿದ್ದಲ್ಲಿ ಪೋಷಕರು ತಮ್ಮ ಆಸ್ತಿಯನ್ನು ಮರಳಿ ಪಡೆದುಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಪೋಷಕರು ಆರ್ಥಿಕವಾಗಿ ಸದೃಢರಾಗಿದ್ದರೂ ಸಹ ಈ ನಿಯಮ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಲೋಯರ್ ಪರೇಲ್‌ನಲ್ಲಿರುವ ಫ್ಲ್ಯಾಟ್ ಅನ್ನು ಅವರ 68 ವರ್ಷದ ತಂದೆಗೆ ಹಸ್ತಾಂತರಿಸಬೇಕು ಎಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಸವಾಲು ಮಾಡಿ 42 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿ ರವೀಂದ್ರ ಚುಗೆ ಮತ್ತು ನ್ಯಾಯಮೂರ್ತಿ ಗೌತಮ್ ಆಂಖಡ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸಿತು.

ವಯಸ್ಸಾದ ಪೋಷಕರಿಗೆ ಮೂಲಭೂತ ಸೌಕರ್ಯಗಳು ಮತ್ತು ದೈಹಿಕ ಅಗತ್ಯಗಳನ್ನು ಒದಗಿಸುವ ಷರತ್ತಿನ ಮೇಲೆ ಆಸ್ತಿ ವರ್ಗಾವಣೆ ನಡೆದು, ಹಾಗೆ ಮಾಡುವಲ್ಲಿ ಮಕ್ಕಳು ವಿಫಲವಾದರೆ, ಆ ವರ್ಗಾವಣೆಯನ್ನು ರದ್ದುಗೊಳಿಸುವ ಅಧಿಕಾರ ಟ್ರಿಬ್ಯುನಲ್‌ಗೆ ಇದೆ ಎಂದು ಹಿರಿಯ ನಾಗರಿಕರ ಕಾಯ್ದೆ 2007 ರ ಸೆಕ್ಷನ್ 23 ಹೇಳುತ್ತದೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ. ಈ ಮೂಲಕ ಟ್ರಿಬ್ಯುನಲ್ ತೀರ್ಪನ್ನು ಎತ್ತಿಹಿಡಿದ ನ್ಯಾಯಾಲಯ, ಅರ್ಜಿದಾರನ ವಾದವನ್ನು ತಿರಸ್ಕರಿಸಿದೆ.

Related Articles

ಇತ್ತೀಚಿನ ಸುದ್ದಿಗಳು