E20 | ಒಬ್ಬರಲ್ಲ, ಆರು ಮಂದಿ ಸಂತ್ರಸ್ತರನ್ನು ನಿಮ್ಮ ಮುಂದೆ ತರುತ್ತೇವೆ: ನಿತಿನ್ ಗಡ್ಕರಿ ಸವಾಲು ಸ್ವೀಕರಿಸಿದ ಉದ್ಯಮಿ ಪೂನಾವಾಲಾ

ಹೊಸದೆಹಲಿ: ಇ20 (E20) ಪೆಟ್ರೋಲ್ ಬಳಕೆಯಿಂದ ತೊಂದರೆ ಅನುಭವಿಸಿದ ಒಂದೇ ಒಂದು ಕಾರಿನ ಹೆಸರು ಹೇಳಿ ಅಥವಾ ಒಬ್ಬನೇ ಒಬ್ಬ ಸಂತ್ರಸ್ತನನ್ನು ತೋರಿಸಿ ಎಂದು ಟೀಕಾಕಾರರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಕಿದ್ದ ಸವಾಲನ್ನು ಪ್ರಮುಖ ಉದ್ಯಮಿ ಹಾಗೂ ಹಕ್ಕುಗಳ ಹೋರಾಟಗಾರ ತಹಸೀನ್ ಪೂನಾವಾಲಾ ಸ್ವೀಕರಿಸಿದ್ದಾರೆ. ಇಥನಾಲ್ ಮಿಶ್ರಿತ ಇ20 ಇಂಧನ ಬಳಕೆಯಿಂದ ತೊಂದರೆಗೊಳಗಾದ ಒಬ್ಬರಲ್ಲ, ಆರು ಜನ ಸಂತ್ರಸ್ತರನ್ನು ಮಾಧ್ಯಮಗಳ ಸಮ್ಮುಖದಲ್ಲೇ ಗಡ್ಕರಿ ಅವರ ಮುಂದೆ ನಿಲ್ಲಿಸುವುದಾಗಿ ಅವರು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ20 ಇಂಧನದಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿದಿದೆ, ಇಂಜಿನ್ ಸವಕಳಿ ಹೆಚ್ಚಾಗಿದೆ ಮತ್ತು ಪದೇ ಪದೇ ದುರಸ್ತಿಗೆ ಬರುತ್ತಿದೆ ಎಂದು ದೇಶಾದ್ಯಂತ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ, ಸರ್ಕಾರ ಮಾತ್ರ ಎಲ್ಲವೂ ಸರಿಯಾಗಿದೆ ಎಂಬಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ‘ಟೀಮ್ ಭಾರತ್’ ಹೆಸರಿನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ತಹಸೀನ್ ಪೂನಾವಾಲಾ ಮೊದಲು ಪ್ರತಿಭಟನೆ ನಡೆಸಿದ್ದರು.

ಇದೀಗ ಗಡ್ಕರಿ ಸವಾಲಿಗೆ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ಅವರು, ಆರಂಭದಲ್ಲಿ ಸಂತ್ರಸ್ತರನ್ನು ಕರೆದುಕೊಂಡು ಗಡ್ಕರಿ ಅವರ ನಿವಾಸಕ್ಕೆ ಹೋಗಲು ಯೋಜಿಸಿದ್ದಾಗಿ ತಿಳಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಫೋನ್ ಮಾಡಿ ಸಚಿವರ ಮನೆಗೆ ಹೋಗದಂತೆ ಕೋರಿದ್ದರಿಂದ, ಅಲ್ಲಿಗೆ ಹೋದರೆ ತಮ್ಮನ್ನು ಮತ್ತು ಸಂತ್ರಸ್ತರನ್ನು ಬಂಧಿಸುವ ಸಾಧ್ಯತೆ ಇರುವುದರಿಂದ ಆ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಹೇಳಿದ್ದಾರೆ. ಹೀಗಾಗಿಯೇ ಮಾಧ್ಯಮಗಳ ಸಮ್ಮುಖದಲ್ಲಿ ನೇರ ಪ್ರಸಾರದಲ್ಲೇ (ಲೈವ್) ಇ20 ಇಂಧನದಿಂದ ಯಾವ ವಾಹನ ಹೇಗೆ ಹಾಳಾಗಿದೆ ಎಂಬುದನ್ನು ಸಂತ್ರಸ್ತರೇ ವಿವರಿಸಲಿದ್ದಾರೆ ಎಂದು ಪೂನಾವಾಲಾ ಷರತ್ತು ವಿಧಿಸಿದ್ದಾರೆ.

ಇಥನಾಲ್ ವ್ಯವಹಾರದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಕೇವಲ ಶೇ 0.07 ರಷ್ಟು ಮಾತ್ರ ಪಾಲು ಇದೆ ಎಂದು ಗಡ್ಕರಿ ಈ ಹಿಂದೆ ಹೇಳಿದ್ದನ್ನು ಪ್ರಸ್ತಾಪಿಸಿದ ಪೂನಾವಾಲಾ, “ಸಚಿವರೇ.. ವರ್ಷಕ್ಕೆ ಸುಮಾರು 50 ರಿಂದ 100 ಕೋಟಿ ರೂ. ಇಥನಾಲ್ ವ್ಯವಹಾರ ಬೆಳೆಯುತ್ತಲೇ ಇದೆ. ನಿಮ್ಮ ಇಬ್ಬರು ಪುತ್ರರು ಇದೇ ವ್ಯವಹಾರದಲ್ಲಿದ್ದಾರೆ. ಸ್ವಂತ ಹಿತಾಸಕ್ತಿ ಇರುವಾಗ ನಿಮ್ಮಿಂದ ನಿಷ್ಪಕ್ಷಪಾತವಾಗಿ ವರ್ತಿಸಲು ಸಾಧ್ಯವಿಲ್ಲ. ಇದು ಕೇವಲ ಮಕ್ಕಳನ್ನು ಬೆಳೆಸುವ ಯೋಜನೆ” ಎಂದು ಕಟುವಾಗಿ ಟೀಕಿಸಿದ್ದಾರೆ.

ಮೈಲೇಜ್ ಕುಸಿತ ನಿಜ ಎಂದ ಗಡ್ಕರಿ ದೇಶದಲ್ಲಿ ಇ20 ಇಂಧನದ ಬಳಕೆ ಮತ್ತು ಅದರ ಅಡ್ಡಪರಿಣಾಮಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಇಥನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇರುವುದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು