Home ಬ್ರೇಕಿಂಗ್ ಸುದ್ದಿ ಭೀಮಾ ಕೋರೆಗಾಂವ್‌ ಪ್ರಕರಣ: ಹಿರಿಯ ಚಿಂತಕ ಆನಂದ್‌ ತೇಲ್ತುಂಬ್ಡೆಯವರಿಗೆ ಜಾಮೀನು

ಭೀಮಾ ಕೋರೆಗಾಂವ್‌ ಪ್ರಕರಣ: ಹಿರಿಯ ಚಿಂತಕ ಆನಂದ್‌ ತೇಲ್ತುಂಬ್ಡೆಯವರಿಗೆ ಜಾಮೀನು

0

2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿತ ಪಾತ್ರಕ್ಕಾಗಿ 2020ರಿಂದ ತಲೋಜಾ ಕೇಂದ್ರ ಕಾರಾಗೃಹದಲ್ಲಿ ಪ್ರಸ್ತುತ ಬಂಧಿತರಾಗಿರುವ ದಲಿತ ಹಕ್ಕುಗಳ ಹೋರಾಟಗಾರ ಮತ್ತು ವಿದ್ವಾಂಸ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರ ಪೀಠದಿಂದ ಅರ್ಜಿಯ ವಿವರವಾದ ವಿಚಾರಣೆಯ ನಂತರ ಇಂದು ತೀರ್ಪು ಪ್ರಕಟಣೆ

ಈ ಹಿಂದೆ NIA ನ್ಯಾಯಲವು ತೇಲ್ತುಂಬ್ಡೆ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಆಧಾರದ ಮೇಲೆ ಅವರಿಗೆ ಜಾಮೀನು ನಿರಾಕರಿಸಿತ್ತು. ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನೀಡಿದ್ದ ಆದೇಶದ ವಿರುದ್ಧ ಆನಂದ್‌ ತೇಲ್ತುಂಬೆ ಕಳೆದ ವರ್ಷ ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರ ಪೀಠವು ಅರ್ಜಿಯನ್ನು ವ್ಯಾಪಕವಾಗಿ ಆಲಿಸಿ ಕಳೆದ ವಾರ ತನ್ನ ಆದೇಶವನ್ನು ಕಾಯ್ದಿರಿಸಿದ ನಂತರ ಇಂದು ತೀರ್ಪು ಪ್ರಕಟಿಸಿತು.

ಸೆಕ್ಷನ್ 38 ಮತ್ತು 39ರ ಅಡಿಯಲ್ಲಿ (ಭಯೋತ್ಪಾದಕ ಸಂಘಟನೆಯಲ್ಲಿ ಸದಸ್ಯತ್ವಕ್ಕೆ ಸಂಬಂಧಿಸಿದ) ಅಪರಾಧಗಳನ್ನು ಮಾತ್ರ ತೇಲ್ತುಂಬ್ಡೆ ವಿರುದ್ಧ ಮಾಡಲಾಗಿದೆ ಎಂದು ಪೀಠ ಹೇಳಿದೆ. ಮತ್ತು ಅಂತಹ ಅಪರಾಧಗಳಲ್ಲಿ ಗರಿಷ್ಠ ಶಿಕ್ಷೆ 10 ವರ್ಷಗಳ ಜೈಲು ಶಿಕ್ಷೆಯಾಗಿತ್ತು ಮತ್ತು ತೇಲ್ತುಂಬ್ಡೆ ಈಗಾಗಲೇ 2 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು NIA ಸಂಸ್ಥೆಗೆ ಅನುವು ಮಾಡಿಕೊಡುವ ಸಲುವಾಗಿ ಮಾನ್ಯ ನ್ಯಾಯಾಲಯವು ತನ್ನ ಆದೇಶಕ್ಕೆ ಒಂದು ವಾರ ತಡೆ ನೀಡಿದೆ ಎಂದು ಬಾರ್‌ ಎಂಡ್‌ ಬೆಂಚ್‌ ಎನ್ನುವ ಕಾನೂನು ಸುದ್ದಿಗಳ ವೆಬ್ಸೈಟ್‌ ವರದಿ ಮಾಡಿದೆ.

2017ರ ಡಿಸೆಂಬರ್ 31ರಂದು ನಗರದಲ್ಲಿ ಎಲ್ಗರ್ ಪರಿಷದ್ ಸಮಾವೇಶ ನಡೆದ ಒಂದು ದಿನದ ನಂತರ ಪುಣೆ ಬಳಿಯ ಕೋರೆಗಾಂವ್ ಭೀಮಾ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಆನಂದ್ ತೇಲ್ತುಂಬ್ಡೆ ಮತ್ತು ಇತರ ಕಾರ್ಯಕರ್ತರ ಮೇಲೆ ಪುಣೆ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಮಾವೇಶವು, ಪಶ್ಚಿಮ ಮಹಾರಾಷ್ಟ್ರ ನಗರದ ಹೊರವಲಯದಲ್ಲಿರುವ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಮರುದಿನ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದರು. ಮಾವೋವಾದಿ ನಂಟು ಹೊಂದಿರುವವರು ಈ ಸಮಾವೇಶವನ್ನು ಆಯೋಜಿಸಿದ್ದರು ಎಂದು ಪೊಲೀಸರು ಪ್ರತಿಪಾದಿಸಿ, ನಂತರ ಈ ಪ್ರಕರಣದ ತನಿಖೆಯನ್ನು NIA ವಹಿಸಿಕೊಂಡಿತು. ರೋನಾ ವಿಲ್ಸನ್, ಆನಂದ್ ತೇಲ್ತುಂಬ್ಡೆ, ವೆರ್ನಾನ್ ಗೊನ್ಸಾಲ್ವಿಸ್, ವರವರ ರಾವ್, ಸುಧಾ ಭಾರದ್ವಾಜ್, ಹನಿ ಬಾಬು ಮತ್ತು ಶೋಮಾ ಸೇನ್ ಈ ಪ್ರಕರಣದ ಏಳು ಆರೋಪಿಗಳಾಗಿದ್ದರು. ಮತ್ತು ಈಗ ಅವರಲ್ಲಿ ಮೂವರಿಗೆ ಜಾಮೀನು ದೊರೆತಂತಾಗಿದೆ.

ಈ ನಡುವೆ ವಾಷಿಂಗ್ಟನ್ ಪೋಸ್ಟ್‌ ಪತ್ರಿಕೆಯ ವರದಿಯು ʼಆರೋಪಿಗಳ ಲ್ಯಾಪ್‌ಟಾಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಕಂಡುಬಂದ ದೋಷಾರೋಪಣೆಯ ದಾಖಲೆಗಳನ್ನು ಕಳ್ಳ ಮಾರ್ಗದಲ್ಲಿ ಇರಿಸಲಾಗಿತ್ತು,ʼ ಎಂದು ವರದಿ ಮಾಡಿತ್ತು. ಇದರ ನಂತರ NIA ಏಳು ಆರೋಪಿಗಳ ಫೋನುಗಳನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಫೆಬ್ರವರಿ 2022ರಲ್ಲಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ಸಲ್ಲಿಸಲು ಅನುಮತಿ ನೀಡಿತು.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ದನಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆಯೆಂದು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕೂಗು ಎದ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೂ ನಿನ್ನೆ RSS ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ “ಸಂಘದ ಅಭಿಪ್ರಾಯಗಳನ್ನು ಜನರು ಒಪ್ಪಿಕೊಂಡಿದ್ದಾರೆ ಮತ್ತು ಸ್ವೀಕರಿಸಿದ್ದರೆ, ಆದರೆ ಮಾವೋವಾದಿಗಳು, ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು, ಇಸ್ಲಾಮಿಸ್ಟ್‌ಗಳು ಮತ್ತು ಜಾಗತಿಕ ಬಂಡವಾಳಶಾಹಿಗಳು ಹಿಂದುತ್ವ ಮತ್ತು ಭಾರತದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಮುಖ್ಯವಾಹಿನಿಯ ಮೇಲೆ ಹೇರಲು ಒಂದು ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ಅಂತಹ ಸಂಕಥನವನ್ನು ಎದುರಿಸಿ ನಿಲ್ಲುವುದು ಮುಖ್ಯ.” ಎಂದು ಹೇಳಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.

You cannot copy content of this page

Exit mobile version