ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್-19 ಸೋಂಕಿತರಾಗಿದ್ದು, ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಬೊಮ್ಮಾಯಿ "ನಾನು ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್ 19 ಪರೀಕ್ಷೆ ಮಾಡಿಸಿದ್ದು ಪಾಸಿಟಿವ್ ವರದಿ ಬಂದಿದೆ. ಈ ಕಾರಣ ಮನೆಯಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು, ದಯವಿಟ್ಟು ನಿಮ್ಮನ್ನು ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಕೋವಿಡ್ ದೃಢವಾಗಿರುವ ಹಿನ್ನಲೆ ದೆಹಲಿ ಪ್ರವಾಸವನ್ನು ರದ್ದುಗೊಳಿಸಲಾಗಿದೆ," ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ 'ಆಜಾದಿ ಕಾ ಅಮೃತ್ ಮಹೋತ್ಸವ' ರಾಷ್ಟ್ರೀಯ ಸಮಿತಿಯ ಮೂರನೇ ಸಭೆಯಲ್ಲಿ ಮತ್ತು ನಾಳೆ ಬೆಳಗ್ಗೆ ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲು ಬೊಮ್ಮಾಯಿ ಇಂದು ದೆಹಲಿಗೆ ತೆರಳಬೇಕಿತ್ತು. ಬಿಜೆಪಿಯ ರಾಷ್ಟ್ರೀಯ ನಾಯಕತ್ವವನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿದ್ದ ಬೊಮ್ಮಾಯಿ. ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು 2023 ರ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಿದ್ದರು. ಆದರೆ ಕೋವಿಡ್ ಸೋಂಕು ದೃಡವಾದ ಕಾರಣ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ.