ಕಾಸರಗೋಡು ಮನೆಯ ಮೇಲೆ ಬೋರ್‌ವೆಲ್ ಲಾರಿ ಉರುಳಿ ಬಿದ್ದು – ಇಬ್ಬರು ಕಾರ್ಮಿಕರ ದುರ್ಮರಣ

ಕಾಸರಗೋಡು: ಕಾಸರಗೋಡು (Kasaragod) ಸಮೀಪದ ಪಶ್ಚಿಮ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ನಿಯಂತ್ರಣ ತಪ್ಪಿದ ಬೋರ್‌ವೆಲ್ ಲಾರಿಯೊಂದು ರಸ್ತೆಬದಿಯ ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.ಮೃತರನ್ನು ಮಧ್ಯಪ್ರದೇಶ ಮೂಲದ ದೇವೇಂದ್ರನ್ ಮತ್ತು ಛತ್ತೀಸ್‌ಗಢದ ಮಾನಸಿರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಕೆಲಸ ಮುಗಿಸಿ ವಾಪಸಾಗುತ್ತಿದ್ದ ಬೋರ್‌ವೆಲ್ ಲಾರಿಯು ವರಕ್ಕಾಡ್ ಜಂಕ್ಷನ್ ಸಮೀಪದ ಕಡಿದಾದ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಪಕ್ಕದಲ್ಲೇ ಇದ್ದ ಜೇಸನ್ ಎಂಬುವವರ ಮನೆಯ ಮೇಲೆ ಲಾರಿ ಪಲ್ಟಿಯಾಗಿದೆ. ಈ ಭೀಕರ ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.ಅಪಘಾತದ ತೀವ್ರತೆಗೆ ಮನೆಯ ಛಾವಣಿಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆದರೆ, ಆ ಸಮಯದಲ್ಲಿ ಮನೆಯೊಳಗಿದ್ದ ಜೇಸನ್ ಹಾಗೂ ಅವರ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಭಾರವಾದ ಕ್ರೇನ್ ಭಾಗವು ತಾರಸಿಯ ಗೋಡೆಗೆ ಸಿಲುಕಿಕೊಂಡ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಲಾರಿಯನ್ನು ತೆರವುಗೊಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು