ಹುಬ್ಬಳ್ಳಿ : ಇಂದಿನ ರಾಜಕೀಯ, ಸದನದಲ್ಲಿನ ಬೆಳವಣಿಗೆಗಳಿಂದ ಮನಸ್ಸಿಗೆ ತೀವ್ರ ನೋವು ಆಗುತ್ತಿದೆ ಎಂದು ಇಂದಷ್ಟೇ ಹೇಳುವ ಮೂಲಕ ರಾಜೀನಾಮೆಯ ಸುಳಿವು ನೀಡಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದೀಗ ದಿಢೀರ್ ಬೆಳವಣಿಗೆ ಎಂಬಂತೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿಯ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದು ಸರಿಯಲ್ಲ ಎಂದಿದ್ದರು. ಇನ್ನು ಬಿಜೆಪಿಯ 18 ಶಾಸಕರ ಅಮಾನತ್ತನ್ನೂ ಪ್ರಸ್ತಾಪಿಸಿದ ಅವರು, ಯಾವ ರಾಜಕಾರಣಿಗಳು ಸದನ ಹಾಗೂ ಸಭಾಧ್ಯಕ್ಷರನ್ನು ಗೌರವಿಸುತ್ತಿಲ್ಲ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಹೊರಟ್ಟಿ ಅವರು ರಾಜೀನಾಮೆಯನ್ನು ಸ್ವೀಕರಿಸಿ ಎಂದು ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ಪತ್ರ ಬರೆದಿದ್ದಾರೆನ್ನಲಾದ ಪತ್ರವೊಂದು ಹರಿದಾಡುತ್ತಿದೆ. ವೈಯಕ್ತಿಕ ಕಾರಣದಿಂದ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದಿರುವ ಅವರು, ರಾಜೀನಾಮೆಯನ್ನು ಇದೇ ಮಾ. 31ರೊಳಗೆ ಸ್ವೀಕರಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಇಂದಿನ ರಾಜಕೀಯ ನೋಡಿದರೆ ತಾವು ತಮ್ಮ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಇತ್ತೀಚೆಗೆ ರಾಜಕಾರಣಿಗಳನ್ನು ನಿಭಾಯಿಸುವುದು ಕಷ್ಟ ಎಂದು ಭಾವುಕ ಮಾತನ್ನು ಹೊರಟ್ಟಿ ಅವರು ಆಡಿದ್ದಾರೆ.