ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ – ಒಂದೇ ವಾರದಲ್ಲಿ 744 ಕೇಸ್
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ನಗರದಲ್ಲಿ (Bengaluru) ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗೆ ಬ್ರೇಕ್ ಹಾಕಲು ಬೆಂಗಳೂರು ಸಂಚಾರ ಪೊಲೀಸರು (Traffic Police) ವಿಶೇಷ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಬರೋಬ್ಬರಿ 744 ಸವಾರರ ವಿರುದ್ಧ ‘ಡ್ರಿಂಕ್ ಆ್ಯಂಡ್ ಡ್ರೈವ್’ (Drunk and Drive) ಪ್ರಕರಣ ದಾಖಲಾಗಿದೆ.
ನವೆಂಬರ್ 16ರಿಂದ 22ರವರೆಗೆ ನಗರದ ಎಲ್ಲಾ ಸಂಚಾರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ವಿಶೇಷ ತಪಾಸಣಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಏಳು ದಿನಗಳಲ್ಲಿ ಪೊಲೀಸರು ಒಟ್ಟು 42,068 ವಾಹನ ಚಾಲಕರನ್ನು ತಪಾಸಣೆಗೆ ಒಳಪಡಿಸಿದ್ದು, ಇದರಲ್ಲಿ 744 ಮಂದಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ತಮ್ಮ ಜೀವದ ಜೊತೆಗೆ ಇತರ ಸವಾರರು ಮತ್ತು ಪಾದಚಾರಿಗಳ ಪ್ರಾಣಕ್ಕೂ ಕುತ್ತು ತರುವ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅತಿವೇಗದ ಸವಾರರಿಗೂ ಬಿಸಿ
ಮದ್ಯಪಾನ ಚಾಲನೆ ಮಾತ್ರವಲ್ಲದೆ, ನಗರದ ರಸ್ತೆಗಳಲ್ಲಿ ಅತಿವೇಗವಾಗಿ (Over-speeding) ವಾಹನ ಚಲಾಯಿಸುವವರ ವಿರುದ್ಧವೂ ಸಂಚಾರ ಪೊಲೀಸರು ಚಾಟಿ ಬೀಸಿದ್ದಾರೆ. ಒಂದು ವಾರದ ಈ ಕಾರ್ಯಾಚರಣೆಯಲ್ಲಿ ಅತಿವೇಗದ ಚಾಲನೆಗಾಗಿ ಒಟ್ಟು 239 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆಯನ್ನು ಮುಂದೆಯೂ ಮುಂದುವರಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಮದ್ಯ ಸೇವಿಸಿದಾಗ ಯಾವುದೇ ಕಾರಣಕ್ಕೂ ವಾಹನದ ಸ್ಟೇರಿಂಗ್ ಅಥವಾ ಹ್ಯಾಂಡಲ್ ಹಿಡಿಯಬಾರದು ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ