(ಈ ವರೆಗೆ…)
ಲಕ್ಷ್ಮಿಯನ್ನು ಮಣ್ಣು ಮಾಡಿ ಬಂದ ಮೇಲೆ ಯಾರೇನೇ ಹೇಳಿದರೂ ಸಮಾಧಾನಗೊಳ್ಳದ ಅವ್ವ ಹುಚ್ಚಿಯಂತಾಡುತ್ತಾಳೆ. ಮೇಲಿಂದ ಮೇಲೆ ಬಂದೆರಗಿದ ಆಘಾತದಿಂದ ಲಕ್ಷ್ಮಿಯ ಸಾವಿನ ಸುದ್ದಿಯನ್ನು ತಲಪಿಸಬೇಕಾದವರಿಗೆ ತಲಪಿಸಲು ಸಾಧ್ಯವಾಗುವುದಿಲ್ಲ. ಆಗಲೇ ಲಕ್ಷ್ಮಿಯನ್ನು ಮದುವೆಯಾಗಲಿದ್ದ ಹುಡುಗ ಮದುವೆ ಸೀರೆಯೊಂದಿಗೆ ಬರುತ್ತಾನೆ. ಆಘಾತಗೊಂಡ ಆತ ತಂದ ಸೀರೆಯೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಲಕ್ಷ್ಮಿಯ ಮನೆಯಲ್ಲಿ ಮುಂದೇನಾಯ್ತು ? ಮುಂದಿನ ಕಥನಕ್ಕೆ ಓದಿ ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆಯ ಇಪ್ಪತ್ತಮೂರನೆಯ ಕಂತು.
ಸಾಕು ಮಗಳು ಲಕ್ಷ್ಮಿಯ ಹನ್ನೆರಡನೇ ದಿನದ ತಿಥಿ ಕಾರ್ಯಕ್ಕೆ, ಇಡೀ ಊರಿಗೆ ಊರೇ ತಮ್ಮ ಮನೆಯದೇ ಕಾರ್ಯವೆಂಬಂತೆ ತೊಡಗಿಸಿಕೊಂಡಿತ್ತು. ವಾರದ ಮುಂಚೆಯೇ ಊರ ಗಂಡಸರೆಲ್ಲ ಜೇನುಕಲ್ಲು ಬೆಟ್ಟಕ್ಕೆ ಹೋಗಿ ಸೌದೆ ಕಡಿದು ತಂದು ರಾಶಿ ಒಟ್ಟಿದರು. ಇತ್ತ ಹೆಂಗಸರೆಲ್ಲ ಅಡಿಗೆಗೆ ಬೇಕಾದ ಎಲ್ಲಾ ಸಾಮಾನು ಸರಂಜಾಮುಗಳನ್ನು ಹೊಂದಿಸಿ ಕೇರುವ, ಬೀಸುವ, ಕುಟ್ಟುವ, ಅರೆಯುವ ಕಾರ್ಯದಲ್ಲಿ ತೊಡಗಿದರು. ವಯಸ್ಸಿನ ಹುಡುಗರೆಲ್ಲ ಮನೆಯ ಸುಣ್ಣ ಬಣ್ಣ ನೀರು ನಿಡಿಯ ಕೆಲಸಕ್ಕೆ ನಿಂತರು. ಅಪ್ಪನಾದಿಯಾಗಿ ಮನೆಯ ಎಲ್ಲಾ ಗಂಡು ಮಕ್ಕಳು ಊರೂರು ಅಲೆದು ಎಲ್ಲಾ ಬಂಧು ಬಳಗದವರಿಗೂ ಲಕ್ಷ್ಮಿ ತೀರಿಕೊಂಡ ವಿಷಯ ಮುಟ್ಟಿಸಿ, ತಿಥಿ ಕಾರ್ಯಕ್ಕೆ ಕರೆದು ಬಂದರು.
ಲಕ್ಷ್ಮಿ ಕಣ್ಣು ಮುಚ್ಚಿದ ದಿನದಿಂದ ಇಂದಿನ ವರೆಗೂ ಊರಿನ ಪ್ರತೀ ಮನೆಯವರು ನಾ ಮುಂದು ತಾ ಮುಂದು ಎಂಬಂತೆ, ಸರದಿಯ ಮೇಲೆ ಮೂರು ಹೊತ್ತು ಊಟ ತಿಂಡಿಗಳನ್ನು ಮನೆಗೆ ತಂದಿಟ್ಟು ಹೋಗುತ್ತಿದ್ದರು. ಇತ್ತ ಅನ್ನ ನೀರು ನಿದ್ರೆಗಳನ್ನು ಬಿಟ್ಟು, ಮೂರು ಹೊತ್ತು ಲಕ್ಷ್ಮಿ ಯ ಕನವರಿಕೆಯಲ್ಲೇ ಕಳೆದು ಹೋಗಿದ್ದ ಅವ್ವ, ತಾಸುಗಟ್ಟಲೆ ಇಲ್ಲದ ಮಗಳೊಂದಿಗೆ ಸಂಭಾಷಿಸುತ್ತಾ, ನಗುತ್ತಾ, ಹಾಡುತ್ತಾ, ಅಳುತ್ತಾ ಮನೆಯವರನ್ನೆಲ್ಲಾ ಇನ್ನಷ್ಟು ಆತಂಕಕ್ಕೀಡು ಮಾಡಿದ್ದಳು. ಗಟ್ಟಿಗಿತ್ತಿ ಅವ್ವನ ಈ ಅವಸ್ಥೆಯನ್ನು ನೋಡಲಾರದ ಅಪ್ಪ ಸಿಂಗು ಡಾಕ್ಟರರ ಬಳಿ ಹೋಗಿ ಒಂದಷ್ಟು ಮಾತ್ರೆಗಳನ್ನು ತಂದು ನುಂಗಿಸಿದ. ತುಸು ನಿದ್ದೆ ಮಂಪರಿನ ಹೊರತು ಮತ್ತೇನು ಪ್ರಯೋಜನವಾಗಲಿಲ್ಲ. ತಮ್ಮ ಮುತ್ತಣ್ಣ ಮಾತ್ರ ಅಕ್ಕನ ಮಗ್ಗುಲಲ್ಲಿಯೇ ಕುಳಿತು ಅವಳ ಯಾವ ಹಠಮಾರಿತನಕ್ಕೂ ಜಗ್ಗದೆ, ಅವ್ವನ ಗಂಟಲು ಒಣಗದಂತೆ, ಹೊಟ್ಟೆ ಬೆನ್ನಿಗೆ ಸೇರಿದಂತೆ ನೋಡಿಕೊಂಡ.
ತಿಥಿಯ ದಿನ ಹಳೇ ನಾರಿಪುರದ ಉದ್ದಗಲಕ್ಕೂ ಎತ್ತಿನ ಗಾಡಿಗಳು ಸಾಲುಗಟ್ಟಿ ನಿಂತಿದ್ದವು. ತಮ್ಮ ಮನೆಗೆ ಸೊಸೆಯಾಗಿ ಬರಲೆಂದು ಬಯಸಿದ್ದ ಹತ್ತಾರು ಹಳ್ಳಿಗಳ ಅದೆಷ್ಟೋ ಮಂದಿ, ತಮ್ಮೆಲ್ಲರ ಕಣ್ಣು ಮನಸ್ಸುಗಳನ್ನು ಸೂರೆಗೊಂಡಿದ್ದ ಮುಗ್ಧ ಹುಡುಗಿಯ ಸಾವನ್ನು ಅರಗಿಸಿಕೊಳ್ಳಲಾರದೆ ಚಡಪಡಿಸುತ್ತಾ ಮೌನ ಹೊತ್ತು ಕುಳಿತು ಬಿಟ್ಟಿದ್ದರು. ಜೋಗತಿ ಕಟ್ಟೆಯಿಂದ ಒಂದು ಹೆಣ್ಣು ಕರುವಿನೊಂದಿಗೆ ಬಂದಿಳಿದ ಬೀಗರು, ತಾವು ಮರಳಿ ತಂದಿದ್ದ ಧಾರೆ ಸೀರೆಯನ್ನು ಲಕ್ಷ್ಮಿಯ ಕಳಸಕ್ಕೆ ಸುತ್ತಿ ಪೂಜಿಸಿದರು. ಅಪ್ಪನಿಗೆ “ಈ ಸ್ಯಾಲೆ ನಿಮ್ ಮಗ್ಳುಗ್ ಸೇರ್ಬೇಕದ್ದು ಗೌಡ್ರೆ. ಮುಂದೆ ನಿಮ್ಮ್ ಮನಿಗೆ ಬರೋ ಸೊಸಿಗೋ ಇಲ್ಲ ನಿಮ್ ಗಂಗುಗೋ ಇದ್ನುಡ್ಸಿ. ಲಕ್ಷ್ಮಿ ಆತ್ಮುಕ್ಕೆ ಸಂತೋಸಾಯ್ತದೆ”. ಎಂದು ಹೇಳಿ ಕಣ್ಣೀರಿಟ್ಟರು. ತಾವು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಬಂದಿದ್ದ ಕರುವನ್ನು ಅಪ್ಪನ ಕೈಗಿಟ್ಟು ” ಬೀಗ್ರಾಗಿ ನಮ್ ಸಂಬಂಧ ಕಡ್ದೋಗದು ಬ್ಯಾಡ ಗೌಡ್ರೆ. ನಮಗಂತೂ ನಿಮ್ಮ ಮಗ್ಳುನ್ನ ಮನೆ ತುಂಬುಸ್ಕೊಳ್ಳೊ ಅದೃಷ್ಟ ಕೂಡ್ಬರ್ಲಿಲ್ಲ, ನಮ್ಮನೆ ಮಗ್ಳುನ್ನ ನಿಮ್ತವ ಬುಟ್ಟೋಯ್ತಿದ್ದೀವಿ ಇವ್ಳಿಂದ ನಿಮ್ಮನೆ ಇನ್ನೊಷ್ಟು ಸಂವೃದ್ದವಾಗ್ಲಿ” ಎಂದು ಹೇಳಿ ಹೆಚ್ಚು ಹೊತ್ತು ಅಲ್ಲಿರಲಾರದೆ ಸಂಕಟದಿಂದಲೇ ಊಟದ ಶಾಸ್ತ್ರ ಮುಗಿಸಿ ಭಾರದ ಎದೆಹೊತ್ತು ಊರಿನ ದಾರಿ ಹಿಡಿದರು.
ಈ ಲೋಕದಿಂದಲೇ ಸಂಬಂಧ ಕಡಿದು ಕೊಂಡವಳಂತಿದ್ದ ಅವ್ವನನ್ನು ಆಚೆ ಮನೆಯ ಅತ್ತೆಯ ಸುಪರ್ದಿಗೆ ವಹಿಸಿದ್ದರು. ಅವ್ವನ ಸ್ಥಿತಿ ತಿಳಿದ ನೆಂಟರೆಲ್ಲಾ ಹೋಗಿ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡಿ ಸೋತು ವಾಪಸಾದರು. ಹಾಗೆ ಬಂದ ಕೆಲವರು ಅಪ್ಪನ ಬಳಿ ಬಂದು ” ಹಿಂಗೆ ಬುಟ್ರೆ ಸಾಕವ್ವುನ್ನು ಕಳ್ಕೊಬುಡ್ತಿ ಬೋಪಯ್ಯ ಮೊದ್ಲು ಮನೆಗೆ ಸೊಸೆ ತಗಂಬಾ ಅವುಳ್ ಮಖಾ ನೋಡಾದ್ರು ಸಾಕವ್ವ ಸರಿಯಾಗ್ಬೋದೇನೋ” ಎಂದು ಸಲಹೆ ಕೊಟ್ಟರು. ಮುಂದಿನ ದಾರಿಗಾಗಿ ತಡಕಾಡುತ್ತಿದ್ದ ಅಪ್ಪನಿಗೆ ಇವರ ಸಲಹೆ ಯಿಂದ ತುಸು ಜೀವ ಬಂದಂತಾಯ್ತು. ಕೂಡಲೇ ತಿಥಿ ಕಾರ್ಯಕ್ಕೆ ಬಂದ ಕೆಲವರಲ್ಲಿ ಅಪ್ಪ ಈ ವಿಷಯ ಪ್ರಸ್ತಾಪಿಸಿ ” ನಿಮ್ಮ್ ಕಡೆ ನಮ್ಮ ಚಂದ್ರಹಾಸುನ್ಗೊಂದು ಹೆಣ್ಣಿದ್ರೆ ನೊಡ್ರಪ್ಪ ದೊಡ್ ಉಪ್ಕಾರ ಆಯ್ತದೆ” ಎಂದು ವಿನಂತಿಸಿ ಕೊಂಡ.
ತಿಥಿ ಕಾರ್ಯ ಮುಗಿದ ನಂತರ ಅಪ್ಪ ಅವ್ವನನ್ನು ಮಾದಲಾಪುರದ ಗೌರ್ಮೆಂಟ್ ಆಸ್ಪತ್ರೆಗೆ ತೋರಿಸಿದ. ಪುಣ್ಯವೋ ಎಂಬಂತೆ ಆಗಷ್ಟೇ ನೇಮಕವಾಗಿ ಬಂದಿದ್ದ ಚಿನಕುರುಳಿಯಂತಹ ಯುವ ಡಾಕ್ಟರನೊಬ್ಬ, ಬಹಳ ಹುರುಪಿನಿಂದ ಅವ್ವನೊಂದಿಗೆ ಸಮಾಲೋಚಿಸುತ್ತಾ ಔಷಧೋಪಚಾರ ನೀಡತೊಡಗಿದ. ಒಂದು ವಾರ ಅವ್ವನನ್ನು ಅಸ್ಪತ್ರೆಯಲ್ಲಿಯೇ ಇರಿಸಿಕೊಂಡು ಅವಳ ಇಷ್ಟಾನಿಷ್ಟಗಳನ್ನು ಅಭ್ಯಾಸಿಸಿದ.
ಆಸ್ಪತ್ರೆಯ ತನ್ನ ಟೇಬಲ್ಲಿನ ಮೇಲೆ ಸಾಹಿತ್ಯದ ಹತ್ತಾರು ಪುಸ್ತಕಗಳನ್ನು ಹರವಿಕೊಂಡು ಸ್ವಲ್ಪ ಸಮಯ ಸಿಕ್ಕರು ಓದಿಗೆ ಜಾರುತ್ತಿದ್ದ ಆ ಡಾಕ್ಟರ್, ಅವ್ವ ಕಥೆ ಕಟ್ಟಿ ಹೇಳುವುದರಲ್ಲಿ, ಒಡಪು ಹೊಡೆಯುವುದರಲ್ಲಿ ನಿಸ್ಸಿಮಳೆಂದು ಅರಿತುಕೊಂಡ. ಲಕ್ಷ್ಮಿ ಕೂಡ ಅವ್ವ ಹೇಳುತ್ತಿದ್ದ ಕಥೆ ಮತ್ತು ಒಡಪುಗಳಿಗಾಗಿ ಸದಾ ಹಂಬಲಿಸುತ್ತಿದ್ದಳು ಎಂಬುದನ್ನು ಅವ್ವನಿಂದಲೇ ತಿಳಿದುಕೊಂಡ ಆತ, ತಾನು ಕೂಡ ಲಕ್ಷ್ಮಿಯಂತೆ ಅವ್ವನಿಗೆ ದುಂಬಾಲು ಬಿದ್ದು ಕಥೆ ಹೇಳಿಸಲು ತೊಡಗಿದ. ಹೀಗೆ ನಾಲ್ಕು ದಿನ ಕಳೆಯುವುದರಲ್ಲೆ ಅವ್ವನಿಗೆ ಆ ಡಾಕ್ಟರ್ ಮೇಲೆ ಪ್ರೀತಿ ವಿಶ್ವಾಸ ಮೂಡಿತು. ಆತ ಎದುರು ಬಂದರೆ ಸಾಕು ಅವ್ವನಿಗೆ ಮಗಳು ಲಕ್ಷ್ಮಿಯೇ ಕಣ್ಣ ಮುಂದೆ ಬಂದಂತೆನಿಸಿ ಬಿಡುತ್ತಿತ್ತು. ಅವ್ವ, ಆ ಡಾಕ್ಟರರಿಗಾಗಿ ಪ್ರತಿ ಬಾರಿಯೂ ಹೊಸ ಕಥೆಯನ್ನು ಹೆಣೆಯುತ್ತಾ, ಒಡಪುಗಳನ್ನು ಕಟ್ಟತೊಡಗಿದಳು.ಹೀಗೆ ಸತತವಾಗಿ ಮೂರು ತಿಂಗಳ ಕಾಲ ನಡೆದ ಔಷಧೋಪಚಾರದ ನಂತರ ಅವ್ವ ಸಹಜ ಸ್ಥಿತಿಗೆ ಮರಳಲಾರಂಭಿಸಿದಳು.
ತುಸು ನಿಶ್ಚಿಂತನಾದ ಅಪ್ಪ ಚಂದ್ರಹಾಸನಿಗೆ ಹೆಣ್ಣು ನೋಡುವ ಕಾರ್ಯದಲ್ಲಿ ಗಂಭೀರವಾಗಿ ತೊಡಗಿಕೊಂಡ. ತನ್ನ ಸ್ನೇಹಿತರು ಸಂಬಂಧಿಕರು ಹೇಳಿದ ಊರುಗಳಿಗೆಲ್ಲ ಅಲೆದು ಬಂದ. ಚಂದ್ರಹಾಸ ಮಾತ್ರ ಮೊಸರಲ್ಲಿ ಕಲ್ಲು ಹುಡುಕುವಂತೆ ಒಂದೊಂದು ಹೆಣ್ಣಿನಲ್ಲು ಒಂದೊಂದು ಐಬೆತ್ತಿ ತೋರಿಸಿ ಅಪ್ಪನನ್ನು ಹೈರಾಣ ಮಾಡಿದ. ಸಾಕಾದ ಅಪ್ಪ ಅವ್ವನನ್ನು ಕರೆದುಕೊಂಡು ಸೀದಾ ಮಗಳ ಸಮಾಧಿಯ ಬಳಿ ಬಂದು “ನೀನೆ ದಾರಿ ತೋರ್ಸು ಮಗ” ಎಂದು ಬೇಡಿಕೊಂಡು ಮನೆಗೆ ಬಂದ.
ಆ ರಾತ್ರಿ ಕಣ್ಣಿಗೆ ನಿದ್ದೆ ಹತ್ತದೆ ಒದ್ದಾಡುತ್ತಿದ್ದ ಅಪ್ಪನಿಗೆ, ಇದ್ದಕ್ಕಿದ್ದಂತೆ ವರ್ಷದ ಕೆಳಗೆ ತಮ್ಮ ಹೊಲದಲ್ಲಿ ಕೆಲಸ ಕೇಳಿಕೊಂಡು ಬಂದಿದ್ದ ಬೈಲು ಕೊಪ್ಪೆಯ ಬಸವಯ್ಯ ನೆನಪಾದ. ಕಡು ಬಡತನದಲ್ಲಿ ನಲುಗಿ ಹೋಗಿದ್ದ ಆತ ಅಂದು ಮನೆಗೆ ಬಂದಾಗ ನೀರು ಕೊಡಲು ಬಂದ ಲಕ್ಷ್ಮಿಯನ್ನು ಕಂಡು “ನನ್ ಮಗ್ಳು ಥೇಟ್ ನಿನ್ನಂಗೆ ಅವ್ಳೇ ಕನವ್ವ. ನಿನ್ಗಿಂತ ಒಂದೆರಡ್ವರ್ಸಕ್ಕೆ ಸಣ್ಣೋಳಿರ್ಬೋದು” ಎಂದು ಹೇಳಿ ಮುಖಾ ಅರಳಿಸಿದ್ದು ನೆನಪಾಯಿತು.
ಅಪ್ಪ ಬೆಳಗ್ಗೆ ಎದ್ದವನೇ ಮುಖ ತೊಳೆದು, ಬೆನ್ನ ಹಿಂದಕ್ಕೆ ಒಂದು ಕೊಡೆ ಸಿಕ್ಕಿಸಿಕೊಂಡು ಬೆಳಗಿನ ಏಳು ಗಂಟೆಯ ಬಸ್ಸಿಡಿದು ಮೂವತ್ತೈದು ಮೈಲು ದೂರದ ಬೈಲುಕೊಪ್ಪೆ ತಲುಪಿದ. ಸುಡುಗಾಡು ಕೊಂಪೆಯಂತೆ ಬಣಗುಟ್ಟುತ್ತಿದ್ದ ಅಲ್ಲಿ, ಅಲ್ಲೊಂದು ಇಲ್ಲೊಂದು ಜೋಪಡಿಗಳು ತಲೆಯೆತ್ತಿ ನಿಂತು ಆ ಊರಿನ ಬಡತನವನ್ನು ಸಾರಿ ಹೇಳುತ್ತಿದ್ದವು. ಅಪ್ಪ ದಾರಿ ಉದ್ದಕ್ಕೂ ಕಂಡ ಕಂಡವರಲ್ಲಿ ಬಸವಯ್ಯನ ಮನೆ ಕೇಳುತ್ತಾ ರಣಗುಟ್ಟುವ ಬಿಸಿಲಿನಲ್ಲಿ ಕಾಲೆಳೆಯುತ್ತಾ ಹೊರಟ. ಹೀಗೆ ಎಷ್ಟೋ ದೂರ ನಡೆದ ನಂತರ ಅಪ್ಪನಿಗೆ ಬಸವಯ್ಯನ ಜೋಪಡಿ ಸಿಕ್ಕಿತು.
ಗೂರಲು ಬಂದು ಕೆಮ್ಮುತ್ತಾ ಜೋಪಡಿಯ ಒಂದು ಮೂಲೆಯಲ್ಲಿ ನಿತ್ರಾಣನಾಗಿ ಬಿದ್ದುಕೊಂಡಿದ್ದ ಬಸವಯ್ಯ, ಅಪ್ಪನನ್ನು ಕಂಡು ದಿಗ್ಭ್ರಾಂತನಾದ. “ಇದೇನ್ ಬುದ್ಧಿ ಬಡೂರ್ ಮನೆಗೆ ಭಾಗ್ಯಾವ್ ಬಂದಂಗೆ ಬಂದ್ ಬುಟ್ಟ್ರಿ” ಎಂದು ಆಶ್ಚರ್ಯ ವ್ಯಕ್ತಪಡಿಸಿದ. ತುಂಡು ಗೋಡೆಯ ಆಚೆಯಿದ್ದ ಮಗಳಿಗೆ “ಸೌಕರ್ರು ಬಿಸ್ಲಲ್ಲಿ ದಣ್ದು ಬಂದವ್ರೆ ವಸಿ ನೀರು ತಂದು ಕೊಡವ್ವ ಯಶಿ” ಎಂದು ಹೇಳಿದ. ಅಲ್ಲಲ್ಲೇ ತೇಪೆ ಹಾಕಿದ್ದ ಲಂಗ ದಾವಣಿ ತೊಟ್ಟ ಹುಡುಗಿಯೊಬ್ಬಳು ಅಪ್ಪನ ಮುಂದೆ ನೀರಿಡಿದು ನಿಂತಳು. ಅವಳನ್ನು ಕಂಡ ಕೂಡಲೇ ಆಶ್ಚರ್ಯ ಚಕಿತನಾದ ಅಪ್ಪ “ಇದೇನ್ ಬಸವಯ್ಯ ಈ ಹುಡುಗಿ ತೇಟ್ ನಮ್ ಲಕ್ಷ್ಮಿ ಹಂಗೆ ಅವಳೇ” ಎಂದು ರಾಗ ಎಳೆದ “ಹೂಂ ಬುದ್ದಿ ಅವತ್ತು ನಿಮ್ ಮಗ್ಳುನ್ ನೋಡ್ದಾಗ ನಂಗು ಹಿಂಗೆ ಸೊಜ್ಗ ಆಗ್ಬುಡ್ತು” ಎಂದು ಹೇಳಿ ಗುಟ್ಟಿನ ವಿಷಯ ಹೇಳುವವನಂತೆ ” ಈ ಪ್ರಪಂಚದಲ್ಲಿ ಒಂದೇ ತರದೋರು ಏಳು ಜನ ಇರ್ತಾರಂತೆ ಬುದ್ದಿ. ನಿಮ್ಮ ಮಗ್ಳು ಏನಾರ ನನ್ನ ಮಗಳುನ್ನ ನೋಡ್ಬುಟ್ರೆ ದಂಗ್ ಹೊಡ್ದುಬುಡ್ತಳೆ ಅಲ್ವುರ” ಎಂದು ನಕ್ಕ. ಬಸವಯ್ಯನ ಮಾತು ಕೇಳಿ ನಿಟ್ಟುಸಿರು ಬಿಟ್ಟ ಅಪ್ಪ, ಅವನನ್ನು ಹೊರಗೆ ಕರೆದು ಕೊಂಡು ಹೋಗಿ ನಡೆದ ಸಂಗತಿಯನ್ನೆಲ್ಲಾ ತಿಳಿಸಿ, ತಾನು ಬಂದ ಉದ್ದೇಶವನ್ನು ಇಡೇರಿಸಲೇ ಬೇಕೆಂದು ಕೈ ಮುಗಿದು ನಿಂತ.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.