ಉಡುಪಿ, ಎಪ್ರಿಲ್ 6: ಐ.ಎಂ. ಜಯರಾಮ ಶೆಟ್ಟಿ, ಲಕ್ಷ್ಮೀನಾರಾಯಣ, ಪಾಲೇಮಾರ್ ಮತ್ತಿತರ ಕುಬೇರರನ್ನು ಹುಡುಕಿ ಹುಡುಕಿ ಟಿಕೆಟ್ ಕೊಡುವ ಸಂಪ್ರದಾಯವನ್ನು ಕರಾವಳಿಯಲ್ಲಿ ಆರಂಭಿಸಿದ್ದು ಜಿಜೆಪಿ. ಈಗ ಉಡುಪಿ ಕ್ಷೇತ್ರದ ಮಟ್ಟಿಗೆ ಪಕ್ಷದ ಎರಡನೇ ಹಂತದ ನಾಯಕರನ್ನು ಬದಿಗಿಟ್ಟು ಪ್ರಸಾದ್ ರಾಜ್ ಕಾಂಚನ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿರುವುದು ಬಿಜೆಪಿಯ ‘ಧನಾಢ್ಯ’ ನಾಯಕರನ್ನು ಎದುರಿಸಲು ‘ಕಾಂಚಾಣ’ ಅನಿವಾರ್ಯ ಎಂಬ ಲೆಕ್ಕಾಚಾರದಲ್ಲಿ ಇರಬಹುದು. ಜಾತಿ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್‌ಗೆ ಉಡುಪಿಯಲ್ಲಿ ಮೊಗವೀರರರಿಗೇ ಟಿಕೆಟ್ ನೀಡುವುದು ಅನಿವಾರ್ಯವಾಗಿತ್ತು.
ಚುನಾವಣೆಯಲ್ಲಿ ಸಹಜವಾಗಿ ಹಣ ಹರಿಸಬೇಕಿರುವುದರಿಂದ, ಪ್ರಸಾದ್ ರಾಜ್ ಕಾಂಚನ್, ಮೊಗವೀರರೂ, ಸಿರಿವಂತರೂ ಆಗಿರುವುದರಿಂದ ಸಹಜವಾಗಿಯೇ ಉಡುಪಿಯ ಟಿಕೆಟ್ ಅವರಿಗೊಲಿದಿದೆ. ಇನ್ನುಳಿದದ್ದು, ಕಾಂಚನ್ ಅವರ ಪಕ್ಷ ನಿಷ್ಠೆ. ಪ್ರಸಾದ್ ರಾಜ್ ಕಾಂಚನ್ ಉಡುಪಿಯ ಮಹಿಳಾ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್ ಅವರ ಪುತ್ರ. ಸರಳಾ ಕಾಂಚನ್ ಅವರು ಮಾಜಿ ಸಚಿವೆ ಮೋಟಮ್ಮ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡವರು. ಅಮ್ಮನ ಒತ್ತಾಸೆಗೆ ಒಳಗಾಗಿ ಹಿಂದಿನ ಕೆಲ ಚುನಾವಣೆಗಳಲ್ಲಿ ಪ್ರಸಾದ್ ರಾಜ್ ಕಾಂಚನ್ ತಮ್ಮ ಊರಲ್ಲಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಉಡುಪಿ, ಮಂಗಳೂರು, ಕಾರವಾರಗಳಲ್ಲಿ ಕಾಂಚನಾ ಹ್ಯೂಂಡೈ ಶೋರೂಮ್ ಮಾಲಕರಾಗಿರುವ ಪ್ರಸಾದ್ ರಾಜ್‌ಗೆ ಅವರೇ ಹೇಳಿಕೊಳ್ಳುವಂತೆ ರಾಜಕೀಯ ಎನ್ನುವುದು ಒಂದು ‘ಪ್ಯಾಷನ್’ ಅಷ್ಟೇ!
ಈ ಬಾರಿ ಉಡುಪಿಯಲ್ಲಿ ಟಿಕೇಟ್ ಪಡೆದೇ ಸಿದ್ಧ ಎಂದು ಜಿದ್ದಿಗೆ ಬಿದ್ದಿದ್ದ ಕಾಂಚನ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಹೇಗೆ ಸಂಪರ್ಕಿಸಬೇಕೋ ಹಾಗೆಯೇ ಸಂಪರ್ಕಿಸಿ ಟಿಕೆಟ್‌ನ ಆಶ್ವಾಸನೆ ಪಡೆದಿದ್ದರು. ಅದರ ಬೆನ್ನಿಗೇ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ್ ಹೇರೂರು ಅವರ ಜೊತೆಯಾಗಿ ಬ್ರಹ್ಮಾವರ ವಲಯದಲ್ಲಿ ಪಕ್ಷ ಸಂಘಟನೆ ಹಾಗೂ ಕಳೆದೊಂದು ತಿಂಗಳಿಂದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವ ನೆಪದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು.
ಇನ್ನು, ಉಡುಪಿಯಲ್ಲಿ ಬಲಾಢ್ಯ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾರ್ಪೋರೇಟ್ ಶೈಲಿಯ ಪ್ರಸಾದ್‌ರಾಜ್ ಕಾಂಚನ್‌ಗೆ ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಬಿಜೆಪಿಯ ಬಲಿಷ್ಠ ಸಂಘಟನೆ, ಧನಬಲ ಹಾಗೂ ಪಳಗಿದ ಅಭ್ಯರ್ಥಿ ಆಕಾಂಕ್ಷಿಗಳೆದುರು ಪ್ರಸಾದ್ ರಾಜ್ ಸಧ್ಯದ ಮಟ್ಟಿಗೆ ದುರ್ಬಲ ಅಭ್ಯರ್ಥಿ ಎಂದೇ ಕಂಡು ಬರುತ್ತಾರೆ. ಆದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಬಾರಿ ತಮ್ಮ ಪಕ್ಷದ ಶಾಸಕರು ಗೆದ್ದು ಬರಬೇಕೆಂಬ ತುಡಿತ ಇದೆ. ಜನರಲ್ಲಿ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಇದೆ. ಕರಾವಳಿಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಟಿಕೆಟ್ ಆಕಾಂಕ್ಷಿಗಳಾಗಿದ್ದ ಏಳೆಂಟು ನಾಯಕರು, ಪಕ್ಷದ ಕಾರ್ಯಕರ್ತರನ್ನು ಪ್ರಸಾದ್ ರಾಜ್ ಅದು ಹೇಗೆ ಬಡಿದೆಬ್ಬಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡುವಾಗ ಅದು ಯಾವ ಎಡವಟ್ಟು ಮಾಡಿಕೊಳ್ಳಲಿದೆ ಎಂಬುದರ ಮೇಲೆ ಪ್ರಸಾದ್ ಕಾಂಚನ್ ಅವರ ಭವಿಷ್ಯ ನಿರ್ಧಾರವಾಗಲಿದೆ.
ಈ ಮಧ್ಯೆ ಕಾಂಗ್ರೆಸ್ ಟಿಕೆಟ್ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ದ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದು, ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್‌ಗೆ ತಲೆ ನೋವಾಗಿ ಪರಿಣಮಿಸಲಿದೆ.
ದಿನೇಶ್ ಕಿಣಿ
ಪತ್ರಕರ್ತರು