ನ್ಯೂಯಾರ್ಕ್:ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಸಂಸದ ಕೋರಿ ಬುಕರ್ ಅಮೆರಿಕಾ ಸಂಸತ್ತಿನಲ್ಲಿ ಸತತ 25 ಗಂಟೆಗಳಿಗೂ ಹೆಚ್ಚು ಕಾಲ ಮಾತನಾಡುವ ಮೂಲಕ ಅಮೆರಿಕ ಸಂಸತ್ತಿನಲ್ಲಿ ಅತಿ ಉದ್ದದ ಭಾಷಣ ಮಾಡಿದ ದಾಖಲೆಯನ್ನು ಸೃಷ್ಟಿಸಿದ್ದಾರೆ.
55 ವರ್ಷದ ಕೋರಿ ಬುಕರ್ ಸೋಮವಾರ ಸಂಜೆ ಪ್ರಾರಂಭಿಸಿದ ತಮ್ಮ ಮ್ಯಾರಥಾನ್ ಭಾಷಣವನ್ನು ಮಂಗಳವಾರ ರಾತ್ರಿ ಮುಗಿಸಿದರು. ಈ ನಡುವೆ ಅವರು ಒಂದೇ ಒಂದು ವಿರಾಮ ತೆಗೆದುಕೊಂಡಿಲ್ಲ, ಕೂತಿಲ್ಲ, ಶೌಚಾಲಯಕ್ಕೂ ಹೋಗಿಲ್ಲ, ಏನನ್ನೂ ತಿಂದಿಲ್ಲ, ಕನಿಷ್ಠ ನೀರನ್ನೂ ಕುಡಿದಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಸದ ಕೋರಿ ಬುಕರ್ ಸತತ 25 ಗಂಟೆಗಳಿಗೂ ಹೆಚ್ಚು ಕಾಲ ಮಾತನಾಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಟ್ರಂಪ್ ವಿರುದ್ಧ ತಮ್ಮ ಪ್ರತಿರೊಧವನ್ನು ದಾಖಲಿಸಲು ಈ ಭಾಷಣ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಮಾತನಾಡಲು ಪ್ರಾರಂಭಿಸಿದ 25 ಗಂಟೆ 5 ನಿಮಿಷಗಳ ನಂತರ ಟ್ರಂಪ್ ಆಡಳಿತವನ್ನು ಖಂಡಿಸಿ ತಮ್ಮ ಭಾಷಣವನ್ನು ಬುಕರ್ ಮುಕ್ತಾಯಗೊಳಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಅವರು ಅಮೆರಿಕನ್ ನಾಗರಿಕ ಹಕ್ಕುಗಳ ಐಕಾನ್ ಜಾನ್ ಲೂಯಿಸ್ ಅವರನ್ನು ನೆನಪಿಸಿಕೊಂಡರು.
ಇಷ್ಟು ದೀರ್ಘ ಭಾಷಣದುದ್ದಕ್ಕೂ ಅವರು ನಿಂತೇ ಇದ್ದರು ಎಂಬುದು ವಿಶೇಷ. ವಿರಾಮವಿಲ್ಲದೆ ನಿಂತುಕೊಂಡೇ ಕೋರಿ ಬುಕರ್ ಭಾಷಣ ಮಾಡಿದರು. ಟ್ರಂಪ್ ಅವರ ನೀತಿಗಳನ್ನು ವಿರೋಧಿಸಲು ಅವರು ಸೆನೆಟ್‌ನ ನಿಯಮವನ್ನು ಬಳಸಿಕೊಂಡರು. ಇದು ಸೆನೆಟರ್‌ಗಳಿಗೆ ಸಮಯ ಮಿತಿಯಿಲ್ಲದೆ ಮಾತನಾಡಲು ಅವಕಾಶ ನೀಡುತ್ತದೆ. ಭಾಷಣಕ್ಕೆ ನಿಂತ ಸೆನೆಟರ್ ಭಾಷಣ ನಿಲ್ಲಿಸದೆ, ಕೂತುಕೊಳ್ಳದೆ ಎಷ್ಟು ಹೊತ್ತು ಬೇಕಾದರೂ ಮಾತಾಡಬಹುದು.
ಟ್ರಂಪ್ ಅವರ ನೀತಿಗಳನ್ನು ವಿರೋಧಿಸುವ ತಮ್ಮ ಈ ಭಾಷಣದ ಉದ್ದಕ್ಕೂ ಅವರು ಸಹಿಷ್ಣುತೆ ಪ್ರದರ್ಶಿಸಿದರು.ಈ ದೀರ್ಘ ಭಾಷಣದೊಂದಿಗೆ ಅವರು 67 ವರ್ಷಗಳ ಹಿಂದಿನ ಸ್ಟ್ರೋಮ್ ಥರ್ಮಂಡ್ ಅವರ ಭಾಷಣದ ದಾಖಲೆ ಮುರಿದಿದ್ದಾರೆ. 1957 ರಲ್ಲಿ ಬಲಪಂಥೀಯ ರಿಪಬ್ಲಿಕನ್ ಸ್ಟ್ರೋಮ್ ಥರ್ಮಂಡ್ ನಾಗರಿಕ ಹಕ್ಕುಗಳ ಕಾಯ್ದೆಯನ್ನು ವಿರೋಧಿಸಿ 24 ಗಂಟೆ 18 ನಿಮಿಷಗಳ ಕಾಲ ಮಾತನಾಡಿದ್ದರು ಎಂದು ಸೆನೆಟ್ ದಾಖಲೆಗಳು ಹೇಳುತ್ತವೆ.
ಕೋರಿ ಬುಕರ್ ನ್ಯೂಜೆರ್ಸಿಯ ಡೆಮೋಕ್ರಾಟ್ ಸಂಸದರಾಗಿದ್ದಾರೆ. ಅವರ ವೆಬ್‌ಸೈಟ್ ಪ್ರಕಾರ, ಕೋರಿ ಉತ್ತರ ನ್ಯೂಜೆರ್ಸಿಯಲ್ಲಿ ಬೆಳೆದರು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅವರಿಗೆ ರೋಡ್ಸ್ ಸ್ಕಾಲರ್ಶಿಪ್ ಸಿಕ್ಕಿತ್ತು̤
2006 ರಿಂದ 2013 ರವರೆಗೆ ಅವರು ನೇವಾರ್ಕ್ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಕ್ಟೋಬರ್ 2013 ರಲ್ಲಿ ಯುಎಸ್ ಸೆನೆಟ್‌ನಲ್ಲಿ ನ್ಯೂಜೆರ್ಸಿಯನ್ನು ಪ್ರತಿನಿಧಿಸಲು ವಿಶೇಷ ಚುನಾವಣೆಯಲ್ಲಿ ಗೆದ್ದರು. ನವೆಂಬರ್ 2014 ರಲ್ಲಿ ಅವರು ಪೂರ್ಣ ಆರು ವರ್ಷಗಳ ಅವಧಿಗೆ ಮರು ಆಯ್ಕೆಯಾದರು.
ಕೋರಿ ಬುಕರ್ ಭಾಷಣದ ಸಾರಾಂಶ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಅಪಾಯಕಾರಿಯಾಗುತ್ತಿದ್ದಾರೆ ಎಂದು ಕೋರಿ ಬುಕರ್ ಆರೋಪಿಸಿದರು. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಸಂವಿಧಾನಬಾಹಿರವಾಗಿ ದಾಳಿ ಮಾಡಲಾಗುತ್ತಿದೆ ಮತ್ತು ಛಿದ್ರಗೊಳಿಸಲಾಗುತ್ತಿದೆ ಎಂದ ಅವರು ಟ್ರಂಪ್ ಸರ್ಕಾರದಲ್ಲಿ ಅಮೆರಿಕದ ಮೂಲಭೂತ ತತ್ವಗಳು ಅಪಾಯದಲ್ಲಿವೆ ಮತ್ತು ರಾಷ್ಟ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಬುಕರ್ ಆರೋಪಿಸಿದ್ದಾರೆ.
ಟ್ರಂಪ್ ಆಡಳಿತದ ಪ್ರಮುಖ ಅಂಶಗಳಾದ ಆರೋಗ್ಯ ರಕ್ಷಣೆ, ಶಿಕ್ಷಣ, ವಲಸೆ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಸಂಬಂಧಿಸಿ ಬುಕರ್ ತಮ್ಮ ಭಾಷಣವನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿದರು. ಟ್ರಂಪ್ ಆಡಳಿತದ ವಿರುದ್ಧದ ಹೋರಾಟವನ್ನು ಬುಕರ್ ಐತಿಹಾಸಿಕ ನಾಗರಿಕ ಹಕ್ಕುಗಳ ಚಳವಳಿ ಮತ್ತು ಮಹಿಳಾ ಮತದಾನದ ಹಕ್ಕಿನ ಹೋರಾಟಕ್ಕೆ ಹೋಲಿಸಿದ್ದಾರೆ.
25 ಗಂಟೆಗಳ ಭಾಷಣದ ನಂತರ ಎಕ್ಸ್ ನಲ್ಲಿ ಬರೆದುಕೊಂಡಿರುವ ಕೋರಿ ಬುಕರ್, ನಾನು ದಣಿದಿರಬಹುದು. ಆದರೆ ನಾನು ಸೆನೆಟ್ ಭಾಷಣದಲ್ಲಿ ಪದೇ ಪದೇ ಹೇಳಿದಂತೆ, ನಾವು ಮಾತನಾಡಬೇಕಾದಾಗ ಮೌನವಾಗಿರಲು ಸಾಧ್ಯವಿಲ್ಲದ ಕ್ಷಣ ಅದು ಎಂದಿದ್ದಾರೆ. ಇದಕ್ಕಾಗಿ ತಾನು ಸಾಕಷ್ಟು ತಯಾರಿ ಮಾಡಿದ್ದೆ, ಉಪವಾಸ ಆಚರಿಸುವುದು, ನೀರು ಕಡಿಮೆ ಕುಡಿಯುವುದು ಇತ್ಯಾದಿಗಳ ಮೂಲಕ ಸಿದ್ಧತೆ ನಡೆಸಿದ್ದೆ ಎಂದು ಬುಕರ್ ಹೇಳಿದ್ದಾರೆ.