ಬೇಲೂರು: ತಮ್ಮ ತಂಗಿಯ ಆರತಕ್ಷತೆ ಸಮಾರಂಭಕ್ಕೆ ಮೊಸರು ಖರೀದಿಗೆಂದು ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೇಲೂರು ತಾಲ್ಲೂಕಿನ ಮುತುಗನೆ ಬಳಿ ಬೆಳಗಿನ ಜಾವ ಸಂಭವಿಸಿದೆ.ಬೆಳಗಿನ ಸುಮಾರು 6 ಗಂಟೆಗೆ ಮುತುಗನೆ ಗ್ರಾಮದ ಬಳಿ ಈ ದಾರುಣ ಘಟನೆ ನಡೆದಿದೆ. KA-05 LE-4017 ನಂಬರಿನ ಹೀರೋ ಸ್ಪ್ಪೆಂಡರ್ ಬೈಕ್‌ನಲ್ಲಿ ತೆರಳುತ್ತಿದ್ದ ಲೋಕೇಶ್ (25) ಮತ್ತು ಕಿರಣ್ (32) ಎಂಬವರು ತಮ್ಮ ತಂಗಿಯ ಮದುವೆ ಆರತಕ್ಷತೆಗಾಗಿ ಮೊಸರು ತರಲು ತೆರಳುತ್ತಿದ್ದ ವೇಳೆ ರಸ್ತೆಬದಿ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.ಮೃತರಲ್ಲಿ ಲೋಕೇಶ್ ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದವರೆ ಆಗಿದ್ದು, ಕಿರಣ್ ಚಿಕ್ಕಮಗಳೂರು ಜಿಲ್ಲೆಯ ರಾಮೇನಹಳ್ಳಿ ಮೂಲದವರು ಎಂದು ತಿಳಿದುಬಂದಿದೆ. ಇಬ್ಬರೂ ಅಪಘಾತ ನಡೆದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗ್ಗೆ ದಾರಿ ಹೋದರು ರಸ್ತೆ ಬದಿ ಚರಂಡಿಯಲ್ಲಿ ಮೃತದೇಹಗಳು ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೇಲೂರು ಪೊಲೀಸರ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
