ಹಾಸನ : ಕೇಂದ್ರ ಸರ್ಕಾರ ಪ್ರಕಟಿಸಿರುವ ಶ್ರಮ ಶಕ್ತಿ ನೀತಿ-೨೦೨೫ ಕರಡು ಪ್ರತಿಯು ಭಾರತೀಯ ಕಾರ್ಮಿಕರ ಹಕ್ಕು, ಸುರಕ್ಷತೆ, ಸಾಮಾಜಿಕ ಭದ್ರತೆಗಳ ಮೇಲೆ ಅತ್ಯಂತ ಗಂಭೀರ ದಾಳಿ ನಡೆಸುವಂತಿದೆ ಎಂದು ಸಿಐಟಿಯು ಜಿಲ್ಲಾ ಘಟಕ ಆರೋಪಿಸಿ, ಸಂವಿಧಾನ ದಿನದಂದು ಈ ಕರಡು ನೀತಿಯನ್ನು ದಹಿಸಿ, ಕಾರ್ಮಿಕರು ಒಗ್ಗಟ್ಟಿನ ಶಕ್ತಿಯಿಂದ ತಮ್ಮ ತೀವ್ರ ಪ್ರತಿರೋಧವನ್ನು ಘೋಷಿಸಿ ಪ್ರತಿಭಟಿಸಿದರು.ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಈ ಹೊಸ ನೀತಿ ಸುಮ್ಮನೇ ಶ್ರಮ ಸುಧಾರಣೆ ಎಂಬ ಹೆಸರಿನಲ್ಲಿ ಬಂದಿರುವುದಿಲ್ಲ. ಇದು ನೇರವಾಗಿ ಕಾನೂನು ಬದ್ಧ ಕಾರ್ಮಿಕ ರಕ್ಷಣೆಗಳನ್ನು ಕಿತ್ತುಹಾಕುವ, ನಾಲ್ಕು ಕಾರ್ಮಿಕ ಸಂಹಿತೆಗಳಿಗಿಂತಲೂ ಮುಂದೆ ಹೋಗಿ ಕಾರ್ಮಿಕರನ್ನು ನವ-ಉದಾರವಾದಿ ಕಾರ್ಪೊರೇಟ್ ಆಳ್ವಿಕೆಗೆ ಒಪ್ಪಿಸುವ ಸಂಘಟಿತ ವರ್ಗ ದಾಳಿ.
ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಭಾರತೀಯ ಕಾರ್ಮಿಕ ಸಮ್ಮೇಳನ ನಡೆಸದೇ ಇದ್ದರೂ, ಈ ಮಹತ್ವದ ಕರಡು ನೀತಿಯನ್ನು ಯಾವುದೇ ತ್ರಿಪಕ್ಷೀಯ ಸಮಾಲೋಚನೆ ಇಲ್ಲದೆ ಸಾರ್ವಜನಿಕ ಡೊಮೇನ್‌ಗೆ ಬಿಡಲಾಗಿದೆ. ಇದು ಕಾರ್ಮಿಕರನ್ನು ನೀತಿ ತಯಾರಿಕೆಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗಿಡುವ, ಪ್ರಜಾಸತ್ತಾತ್ಮಕ ಮೂಲತತ್ತ್ವಗಳಿಗೆ ವಿರೋಧವಾದ ಕ್ರಮ ಎಂದು ದೂರಿದರು. ಸಾರ್ವತ್ರಿಕ ಸಮಾಜ ಭದ್ರತೆ ಅಂತರ್ಗತ ಕೆಲಸದ ಪ್ರಪಂಚ ಎಂಬ ಮೋಸಕಾರಿ ಶಬ್ದಗಳನ್ನು ಬಳಸಿದರೂ, ನೈಜ ನೀತಿ ಅದಕ್ಕೆ ನಿಖರವಾಗಿ ವಿರುದ್ಧವಾಗಿವೆ ಎಂದು ಕಾರ್ಮಿಕರು ಆರೋಪಿಸಿದರು. ನೀತಿಯ ಕಾರ್ಯಚಟುವಟಿಕೆಗಳು ಆತಂಕಕಾರಿ ಮಟ್ಟದಲ್ಲಿ ಕಾರ್ಮಿಕ ವಿರೋಧಿಯಾಗಿದ್ದು, ಎಲ್ಲಾ ಶಾಸನಬದ್ಧ ರಕ್ಷಣೆಗಳನ್ನು ನಾಶಮಾಡುವ ಮೂಲಕ ಮಾಲೀಕರಿಗೆ ನಿರ್ಬಂಧರಹಿತ ಅಧಿಕಾರ ನೀಡುತ್ತದೆ ಎಂದರು. ಶೇಕಡ ೯೦ ಕ್ಕಿಂತ ಹೆಚ್ಚಿನ ಕಾರ್ಖಾನೆಗಳಿಗೆ ಸರ್ಕಾರದ ಅನುಮತಿ ಅಗತ್ಯವಿಲ್ಲ. ಇದರಿಂದ ಲಕ್ಷಾಂತರ ಕಾರ್ಮಿಕರು ಕಾನೂನು ರಕ್ಷಣೆ ಕಳೆದುಕೊಳ್ಳುತ್ತಾರೆ. ಅಂದಾಜು ಶೇಕಡ ೬೦ ರಷ್ಟು ಕಾರ್ಖಾನೆಗಳು ಕಡ್ಡಾಯ ತಪಾಸಣೆಯಿಂದ ಹೊರಗುಳಿದು, ಅಪಾಯಕಾರಿ ಕೆಲಸದ ಪರಿಸ್ಥಿತಿಗಳು ಸಾಮಾನ್ಯಗೊಳ್ಳುವ ಅಪಾಯ.
ಸ್ವಯಂ-ಪ್ರಮಾಣೀಕರಣದ ಹೆಸರಿನಲ್ಲಿ ಜಾರಿ ವ್ಯವಸ್ಥೆ ಧ್ವಂಸವಾಗಲಿದೆ. ಈ ನೀತಿ ಆಧುನಿಕ ಪ್ರಜಾಪ್ರಭುತ್ವ ಮತ್ತು ಕಾರ್ಮಿಕ ನ್ಯಾಯಧೋರಣೆಯಿಂದ ದೂರ ಸರಿದು ಮನುಸ್ಮೃತಿ, ನಾರದಸ್ಮೃತಿ, ಅರ್ಥಶಾಸ್ತ್ರಗಳಂತಹ ಪುರಾತನ ಸ್ಮೃತಿ ಗ್ರಂಥಗಳಿಂದ “ಶ್ರಮ ಧರ್ಮ” ಪಡೆಯಲು ಯತ್ನಿಸುತ್ತದೆ. ಇದು ಮಹಿಳಾ ಹಕ್ಕುಗಳು, ಜಾತಿ ಆಧಾರಿತ ಉದ್ಯೋಗ, ಬಲವಂತದ ದುಡಿಮೆ ಇವುಗಳನ್ನು ಸಮರ್ಥಿಸಿದ ಪುರಾತನ ಪರಿಕಲ್ಪನೆಗಳನ್ನು ಇಂದಿನ ಕಾರ್ಮಿಕ ಆಡಳಿತಕ್ಕೆ ಆಧಾರವಾಗಿಸಲು ಮಾಡಿದ ಅಪಾಯಕಾರಿ ಪ್ರಯತ್ನವೆಂದು ಅವರು ಹೇಳಿದರು.
ಶ್ರಮ ಶಕ್ತಿ ನೀತಿ-೨೦೨೫ ಸಂಪೂರ್ಣವಾಗಿ ಗುಲಾಮಗಿರಿಯನ್ನು ಕಾನೂನು ಬದ್ಧಗೊಳಿಸುವ ಸಂಚು. ಇದನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ದೇಶಾದ್ಯಂತ ವಿಶಾಲ ಹೋರಾಟ ನಡೆಯಲಿದೆ ಎಂದು ಮುಖಂಡರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಖಜಾಂಚಿ ಅರವಿಂದ್, ಬ್ಯಾಂಕ್ ನೌಕರರ ನಾಯಕ ಎಚ್.ಎನ್. ಪರಮಶಿವಯ್ಯ, ಕೆಪಿಆರ್‌ಎಸ್ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಡಿವೈಎಫ್‌ಐ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಸೌಮ್ಯ ಸೇರಿದಂತೆ ವಿವಿಧ ಕಾರ್ಮಿಕ ಸಂಘಗಳ ನಾಯಕರು ಸದಸ್ಯರು ಭಾಗವಹಿಸಿದ್ದರು.
