ರಾಜ್ಯದ ಉಪಚುನಾವಣೆ ಕಣಗಳಾದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾಣೆಯ ಬಹಿರಂಗ ಪ್ರಚಾರ ಇಂದು ಸಂಜೆ 6 ಗಂಟೆಗೆ ಅಂತ್ಯವಾಗಿದೆ. ಇನ್ನೇನಿದ್ದರೂ ಮನೆ ಮನೆ ಪ್ರಚಾರಕ್ಕೆ ಮಾತ್ರ ರಾಜಕೀಯ ಪಕ್ಷಗಳು ರೆಡಿಯಾಗಿವೆ.
ಈಗಾಗಲೇ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದ ಮೂಲಕ ಮತ ಬೇಟೆಗೆ ಮುಂದಾಗಿದೆ. ಶಿಗ್ಗಾಂವಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ ಖಾನ್ ಪಠಾಣ್ ಪರ ಪ್ರಚಾರ ಸಭೆ ನಡೆಸಿದರು. ಆ ನಂತರ ಚನ್ನಪಟ್ಟಣಕ್ಕೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿಯೂ ಪ್ರಚಾರ ನಡೆಸಿದ್ದಾರೆ.
ಶಿಗ್ಗಾಂವ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಇಂದು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತದಾರರಲ್ಲದವರು ಇಂದು ಸಂಜೆ 5.30ರ ನಂತರ ಕ್ಷೇತ್ರ ಬಿಟ್ಟುಹೋಗುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ, ಅದೇ ದಿನ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಕೂಡ ಪ್ರಕಟವಾಗಲಿದೆ.