‘ಅಳೋದು ನಮ್ಮ ಕುಟುಂಬದ ಪರಂಪರೆ, ನಾನು ಅಳುತ್ತೀನಿ, ಕುಮಾರಸ್ವಾಮಿ ಕೂಡ ಅಳ್ತಾರೆ, ಈಗ ಮೊಮ್ಮಗ ನಿಖಿಲ್ ಕೂಡ ಅಳ್ತಾರೆ. ನಾವು ಅಳೋದು ನೊಂದವರ, ನಿರಂತರ ದುಡಿವವರ, ನಿರ್ಗತಿಕರ ನೋಡಿ ಅಳೋದು’ ಎಂದ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಸಿಎಂ ಸಿದ್ದರಾಮಯ್ಯ ತೀವ್ರ ತಿರುಗೇಟು ನೀಡಿದ್ದಾರೆ.
ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಅಳಬೇಕಿರೋದು ಚನ್ನಪಟ್ಟಣದಲ್ಲಿ ಅಲ್ಲ. ಹಾಸನದಲ್ಲಿ ಅಳಬೇಕಿತ್ತು. ನಿಜವಾಗಿಯೂ ನೊಂದವರು ಹಾಸನದಲ್ಲಿ ಇದ್ದಾರೆ. ದೇವೇಗೌಡರ ಮೊಮ್ಮಗ ಮಾಡಿದ ದೌರ್ಜನ್ಯಕ್ಕೆ ಹಾಸನದ ಹೆಣ್ಣು ಮಕ್ಕಳು ನೊಂದಿದ್ದಾರೆ. ಎಷ್ಟೋ ಕುಟುಂಬಗಳು ಒಡೆದಿವೆ. ನೀವು ಅಲ್ಲಿ ಆಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮುಂದುವರೆದು, ಯೋಗೇಶ್ವರ್ ಈಗ ಕಾಂಗ್ರೆಸ್ ಅಭ್ಯರ್ಥಿ. ಎಲ್ಲಾದರೂ ಜೆಡಿಎಸ್ ಅಭ್ಯರ್ಥಿಯೇ ಆಗಿದ್ದರೆ ದೇವೇಗೌಡರು ಇಲ್ಲಿ ಬಂದು ವಾರಗಟ್ಟಲೆ ಪ್ರಚಾರಕ್ಕೆ ನಿಲ್ತಿದ್ರಾ? ದೇವೇಗೌಡರು ಕುಟುಂಬ ರಾಜಕಾರಣಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ. ದೇವೇಗೌಡರಿಂದ ಒಕ್ಕಲಿಗ ಸಮುದಾಯಕ್ಕೂ ಯಾವುದೇ ಪ್ರಯೋಜನ ಇಲ್ಲ. ಅವರು ತಮ್ಮ ಕುಟುಂಬದ ಹಿತಕ್ಕಷ್ಟೇ ಸೀಮಿತ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಾನು ಹಿಂದುಳಿದ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದಕ್ಕೆ ದೇವೇಗೌಡರಿಗೆ ಹೊಟ್ಟೆ ಉರಿ. ಹಿಂದುಳಿದ ಸಮುದಾಯಗಳ ಏಳಿಗೆಯನ್ನು ಅವರು ಸಹಿಸುವುದಿಲ್ಲ. ಈ ಉರಿ ನಿಮ್ಮನ್ನೇ ಸುಡಲಿದೆ. ಎಂದು ಹೇಳಿದ್ದಾರೆ.
ಹಾಗೇ ಉಪಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಬೀಳುತ್ತೆ ಎಂದ ಜೆಡಿಎಸ್ ಬಿಜೆಪಿ ನಾಯಕರ ಹೇಳಿಕೆ ಉಲ್ಲೇಖಿಸಿ, ಈ ಅವಧಿಯಲ್ಲಿ ನಿಮ್ಮಿಂದ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.