Wednesday, July 17, 2024

ಸತ್ಯ | ನ್ಯಾಯ |ಧರ್ಮ

ಜಗನ್ನಾಥ ದೇವರ ಆಶಿರ್ವಾದದಿಂದ ಟ್ರಂಪ್‌ ಜೀವ ಉಳಿದಿದೆ: ಇಸ್ಕಾನ್‌ ಉಪಾಧ್ಯಕ್ಷ

ನವದೆಹಲಿ: ನ್ಯೂಯಾರ್ಕ್‌ನಲ್ಲಿರುವ ಜಗನ್ನಾಥ ದೇವರ ಆಶಿರ್ವಾದದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜೀವ ಉಳಿದಿದೆ ಎಂದು ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಹೇಳಿದ್ದಾರೆ.

ಟ್ರಂಪ್‌ ಮೇಲಿನ ದಾಳಿ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಿಖರವಾಗಿ 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಜಗನ್ನಾಥ ರಥಯಾತ್ರೆ ಆಯೋಜಿಸಲು ದೇವಸ್ಥಾನದ ಕಮೀಟಿಗೆ ಸಹಾಯ ಮಾಡಿದ್ದರು. ಇಂದು ಇಡೀ ಜಗತ್ತು ಮತ್ತೆ ಜಗನ್ನಾಥ ರಥಯಾತ್ರೆ ಉತ್ಸವವನ್ನು ಆಚರಿಸುತ್ತಿರುವಾಗ ಟ್ರಂಪ್ ದಾಳಿಗೆ ಒಳಗಾಗಿದ್ದಾರೆ. ಆದರೆ, ಜಗನ್ನಾಥ ದೇವರ ಕೃಪೆಯಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ದಾಸ್‌ ಹೇಳಿದ್ದಾರೆ.

1976ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಜಗನ್ನಾಥ ದೇವರ ಮೊದಲ ರಥಯಾತ್ರೆ ಸಂದರ್ಭದಲ್ಲಿ ಮೆರವಣಿಗೆಗೆ ಅನುಮತಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಿರುವ ದಾಸ್‌,.‘ಅಧ್ಯಕ್ಷ ಟ್ರಂಪ್‌ಗೆ ದೇವರು ಒಳಿತು ಮಾಡಲಿ’ ಎಂದಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್‌ ಅವರ ಮೇಲೆ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಸಂಜೆ ದಾಳಿ ನಡೆದಿತ್ತು. ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಟ್ರಂಪ್‌ ಅವರತ್ತ ಹಲವು ಬಾರಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಟ್ರಂಪ್‌ ಅವರ ಕಿವಿಗೆ ಗಾಯವಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಬಂದೂಕುಧಾರಿಯನ್ನು 20 ವರ್ಷದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂದು ಗುರುತಿಸಲಾಗಿದೆ. ದಾಳಿ ಬೆನ್ನಲ್ಲೇ ಅಮೆರಿಕದ ಸೀಕ್ರೆಟ್‌ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಆತನನ್ನು ಹತ್ಯೆಗೈದಿದ್ದಾರೆ.

ನವೆಂಬರ್ 5ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬೈಡನ್ ಮತ್ತು ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿಯಾಗಿ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು