Tuesday, July 16, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 24 : ಬ್ರಾಹ್ಮಣ ವಿರೋಧಿ ರಾಜಕಾರಣ ಮತ್ತು ಹಿಂದೂ ಜನಾಂಗೀಯ ರಾಜಕಾರಣಗಳ ವಿರುದ್ಧೋದಯಗಳು

ಸರಳವಾಗಿ ಹೇಳುವುದಾದರೆ ಒಂದು ಹಿಂದೂ ಜನಾಂಗೀಯ ಸಂಘಟನೆಯಾಗಿ ಹಿಂದೂಗಳನ್ನು ರೂಪಾಂತರಗೊಳಿಸುವುದು ರತ್ನಗಿರಿ ಹಿಂದೂ ಸಭಾದ ಗುರಿಯಾಗಿತ್ತು. ಅಂದರೆ, ಸ್ಮೃತಿ-ಶೃತಿ-ಪುರಾಣೋಕ್ತಗಳಲ್ಲಿ ನೆಲೆ ಕಂಡುಕೊಂಡಿದ್ದ ಬ್ರಾಹ್ಮಣಿಸಮ್ಮನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹಿಂದೂ ಜನಾಂಗೀಯತೆಯನ್ನು ಮುನ್ನಡೆಸುವ ಶಕ್ತಿಯಾಗಿ ಬದಲಾಯಿಸುವುದು.

೧೯೨೪ರಲ್ಲಿ ರತ್ನಗಿರಿಯಲ್ಲಿ ಜಿಲ್ಲಾಬಂಧನದಲ್ಲಿ ಬದುಕುತ್ತಿದ್ದ ಹೊತ್ತಿನಲ್ಲಿಯೇ ಸಾವರ್ಕರ್‌ ತಾನು ಮುಂದಿಟ್ಟಿದ್ದ ಹಿಂದುತ್ವ ರಾಜಕಾರಣದ ಜನಾಂಗೀಯ ಪ್ರಯೋಗಗಳನ್ನು ಶುರು ಮಾಡುತ್ತಾರೆ. ಬಹುಸಂಖ್ಯಾತರಾಗಿದ್ದ ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ಬ್ರಾಹ್ಮಣ ಜನಾಂಗೀಯವಾದದ ಭಾಗವಾಗಿಸುವ ದೊಡ್ಡ ಗುರಿಯನ್ನು ಕಾರ್ಯಗತಗೊಳಿಸುವ ಕೆಲಸಕ್ಕೆ ಸಾವರ್ಕರ್‌ ಹೊರಡುತ್ತಾರೆ. ಬ್ರಿಟಿಷ್‌ ವಿರೋಧಿ ನಿಲುವನ್ನು ಅಮರಣಾಂತ ಮುಂದೂಡಿದ್ದರಿಂದ ಇದರ ಕೇಂದ್ರವಾಗಿ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ವಿರೋಧಿ ಧೋರಣೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಾಮಾಜಿಕ ಸುಧಾರಣೆಗಳ ಹಲವು ಅಂಶಗಳನ್ನು ಬಳಸಿಕೊಂಡು ಇದು ನಡೆಯುತ್ತಿದ್ದ ಕಾರಣದಿಂದ ಬ್ರಿಟಿಷ್‌ ಸರಕಾರದ ಸಹಕಾರವೂ ಈ ಚಟುವಟಿಕೆಗಳಿಗೆ ಲಭಿಸಿತ್ತು. ಜೊತೆಗೆ, ಒಡೆದಾಳುವ ಬ್ರಿಟಿಷ್‌ ನೀತಿಗೆ ಸಹಕಾರಿಯಾಗುವಂತಹ ಚಟುವಟಿಕೆಗಳು ಸಾವರ್ಕರ್‌ ಕಡೆಯಿಂದ ಬ್ರಿಟಿಷರಿಗೆ ಧಾರಾಳವಾಗಿ ದೊರೆಯುತ್ತಿತ್ತು.

ರತ್ನಿಗಿರಿ ತಲುಪಿದ ಕೂಡಲೇ ಸಾವರ್ಕರ್‌ ಒಂದು ಹಿಂದೂ ಸಭಾ ಕಟ್ಟುವ ಕೆಲಸವನ್ನು ಮಾಡುತ್ತಾರೆ. ೧೯೨೪ ಜನವರಿ ೨೩ರಂದು ನಡೆದ ರೂಪೀಕರಣ ಸಭೆಯಲ್ಲಿ ಸಾವರ್ಕರ್‌ ನೇರವಾಗಿ ಭಾಗವಹಿಸುವುದಿಲ್ಲ. ಆದರೆ ಬಾಬಾರಾವ್‌ ಸಹಿತ ಹಲವರು ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಈ ಕೆಳಗಿನ ಸಂಗತಿಗಳನ್ನು ರತ್ನಗಿರಿ ಹಿಂದೂ ಸಭಾ ತನ್ನ ಗುರಿಗಳನ್ನಾಗಿ ಅಂಗೀಕರಿಸುತ್ತದೆ.

೧. ಭಾರತದಾದ್ಯಂತ ಹಿಂದೂಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಹಿಂದೂ ಸಭಾಗಳು ಮತ್ತು ಇತರ ಸಂಘಟನೆಗಳೊಂದಿಗೆ ಅತ್ಯಂತ ಆಪ್ತ ಸಂಬಂಧವನ್ನು ಹೊಂದುವುದು ಮತ್ತು ಆ ಸಂಬಂಧವನ್ನು ನೆಲೆನಿಲ್ಲಿಸುವುದು.

೨. ಹಿಂದೂ ಸಮುದಾಯದ ವಿಭಿನ್ನ ಜಾತಿಗಳ ನಡುವೆ ಏಕತೆ ಮತ್ತು ಲಯಬದ್ಧತೆಯ ಕೊಂಡಿಗಳನ್ನು ನಿರ್ಮಿಸುವುದು.

೩. ಹಿಂದೂ ರಾಷ್ಟ್ರಕ್ಕಾಗಿ ಬಲಿದಾನಗೈದ ಹುತಾತ್ಮರನ್ನು ಸ್ಮರಿಸುವುದು.

೪. ಗುಡಿ ಕೈಗಾರಿಕೆ ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವುದು.

೫. ವ್ಯಾಯಾಮ ಶಾಲೆಗಳು ಮತ್ತು ಇತರ ಚಟುವಟಿಕೆಗಳ ಮೂಲಕ ಹಿಂದೂ ಸಮುದಾಯದಲ್ಲಿ ದೈಹಿಕ ಶಿಕ್ಷಣವನ್ನು ಚುರುಕುಗೊಳಿಸುವುದು.

೬. ಹಿಂದೂ ಸಮುದಾಯದಿಂದ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಮತ್ತು ಇದಕ್ಕಾಗಿ ತಮ್ಮ ಶಕ್ತಿಮೀರಿ ಕೆಲಸ ಮಾಡುವುದು.

೭. ಹಿಂದೂ ಸಮುದಾಯಕ್ಕೆ ಮರಳಿ ಬರಲು ಬಯಸುವವರಿಗೆ ಅದನ್ನು ಸಾಧ್ಯವಾಗಿಸಲು ಶುದ್ಧಿ ಪ್ರಕ್ರಿಯೆಯನ್ನು ಪ್ರಚಾರ ಪಡಿಸುವುದು.

೮. ಹಿಂದೂ ಸಮಾಜದ ಸಂರಕ್ಷಣೆ ಮತ್ತು ಭೌತಿಕ ಸಂಪತ್ತನ್ನು ನಾಶಗೊಳಿಸಲು ಪ್ರಯತ್ನಿಸುವ ಎಲ್ಲ ಶಕ್ತಿಗಳ ವಿರುದ್ಧ ಮೌಲಿಕವೂ ಶಕ್ತವೂ ಆದ ವಿರೋಧಿ ಬಣವಾಗಿ ಕೆಲಸ ಮಾಡುವುದು.

ಸರಳವಾಗಿ ಹೇಳುವುದಾದರೆ ಒಂದು ಹಿಂದೂ ಜನಾಂಗೀಯ ಸಂಘಟನೆಯಾಗಿ ಹಿಂದೂಗಳನ್ನು ರೂಪಾಂತರಗೊಳಿಸುವುದು ರತ್ನಗಿರಿ ಹಿಂದೂ ಸಭಾದ ಗುರಿಯಾಗಿತ್ತು. ಅಂದರೆ, ಸ್ಮೃತಿ-ಶೃತಿ-ಪುರಾಣೋಕ್ತಗಳಲ್ಲಿ ನೆಲೆ ಕಂಡುಕೊಂಡಿದ್ದ ಬ್ರಾಹ್ಮಣಿಸಮ್ಮನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹಿಂದೂ ಜನಾಂಗೀಯತೆಯನ್ನು ಮುನ್ನಡೆಸುವ ಶಕ್ತಿಯಾಗಿ ಬದಲಾಯಿಸುವುದು. ಹಿಂದೂಯಿಸಮ್ಮಲ್ಲಿ ಅವರು ಹೊಂದಿದ್ದ ಮೇಲುಗೈಯನ್ನು ಹಿಂದುತ್ವದಲ್ಲಿ ರಾಜಕೀಯ ಅಧಿಕಾರವಾಗಿ ಮಾರ್ಪಡಿಸುವುದು. ಅದಕ್ಕಾಗಿ ಒಳಗೂ ಹೊರಗೂ ಸೈನ್ಯಸ್ವರೂಪಿ ಪುನರ್‌ ಸಂಘಟನೆಯ ಮೂಲಕ ಹಿಂದೂ ಸಮುದಾಯವನ್ನು ಜನಾಂಗೀಯಗೊಳಿಸುವುದು. ೧,೩,೫,೭,೮ ಇವುಗಳು ಇತರ ಸಮುದಾಯಗಳನ್ನು ಎದುರಿಸಲು ಬೇಕಾದ ಸೈನಿಕಶಕ್ತಿಯ ಬಗ್ಗೆ ಹೇಳುತ್ತವೆ. ೪ ನೇ ಅಂಶ ತನ್ನದೇ ಆದ ಒಂದು ಆರ್ಥಿಕ ವ್ಯವಸ್ಥೆಯನ್ನು ಮುಂದಿಡುತ್ತದೆ. ತಿಲಕರ ಮುಂದುವರಿಕೆಯಂತೆ ಇದು ಕಾಣಿಸುತ್ತದೆ. ೨ ಮತ್ತು ೬ನೇ ಗುರಿಗಳು ಒಂದು ಜನಾಂಗೀಯ ಸಮಾಜಕ್ಕೆ ಅಗತ್ಯವಾಗಿ ಬೇಕಾದ ಸುಧಾರಣೆಗಳನ್ನು ಮುಂದಿಡುತ್ತವೆ.

ಸಾವರ್ಕರ್ ತನ್ನ ಹಿಂದುತ್ವದಲ್ಲಿ ಮುಂದಿಟ್ಟಿದ್ದ ಎರಡು ವಿಚಾರಗಳನ್ನು ಹಿಂದೂ ಸಭಾ ತನ್ನ ಕಾರ್ಯಕ್ರಮಗಳ ಮಾರ್ಗದರ್ಶಕ ತತ್ವಗಳಾಗಿ ಸ್ವೀಕರಿಸುತ್ತದೆ. ಒಂದು, ಸಿಂಧೂ (ನದಿ)ಯಿಂದ ಹಿಡಿದು ಸಿಂಧೂ (ಸಮುದ್ರ)ದವರೆಗಿನ ಭೂಪ್ರದೇಶವೇ ಹಿಂದೂರಾಷ್ಟ್ರ. ಎರಡು, ಈ ಭೂಪ್ರದೇಶವನ್ನು ತಮ್ಮ ಪಿತೃಭೂಮಿ ಮತ್ತು ಪುಣ್ಯಭೂಮಿಗಳಾಗಿ ಸ್ವೀಕರಿಸುವವರು ಮಾತ್ರ ಇಲ್ಲಿನ ಪೌರರು. ಸಾವರ್ಕರ್ ತಾನೇ ಬರೆದ ಒಂದು ಸಂಸ್ಕೃತ ಶ್ಲೋಕದಲ್ಲಿ ಇದನ್ನು ಒಳಗೊಳ್ಳಿಸಲಾಗಿದೆ.

ಆಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ

ಪಿತೃಭೂ ಪುಣ್ಯಭೂಶ್ಚೈವ ಸಾ ವೈ ಹಿಂದುಋತಿ ಸ್ಮೃತಾ

ಈ ನಿರ್ವಚನವನ್ನು ಸಂಸ್ಕೃತದಲ್ಲಿ ನೀಡಲು ಕಾರಣ ಅದಕ್ಕೊಂದು ಕ್ಲಾಸಿಕಲ್ ರುಚಿ ಸೇರಿಸಲೆಂಬುದು ಬಹಳ ಸ್ಪಷ್ಟ. ಒಂದು ಜ್ಞಾನಭಾಷೆ ಎಂಬ ನೆಲೆಯಲ್ಲಿ ಸಂಸ್ಕೃತವನ್ನು ಬಳಸಿಕೊಂಡರೆ ಅದಕ್ಕೆ ಅಂಗೀಕಾರ ಸಿಗಬಹುದೆಂದು ಸಾವರ್ಕರ್ ಭಾವಿಸಿರಬಹುದು. ಆ ದಿನಗಳಲ್ಲಿ ಇಂತಹದ್ದೊಂದು ಭೂಪಟವಾಗಲೀ, ಪೌರತ್ವ ನಿಬಂಧನೆಯಾಗಲೀ ಅಸಾಧ್ಯವೇ ಆಗಿತ್ತು. ಹಾಗಿರುವಾಗ ಇದೊಂದು ಪುರಾತನ ಚಿಂತನೆಯೆಂಬಂತೆ ಬಿಂಬಿಸಬೇಕಾಗಿರುವುದು ಬ್ರಾಹ್ಮಣ್ಯದ ಜರೂರಿಯಾಗಿತ್ತು.

ಈ ವ್ಯಾಖ್ಯಾನದಲ್ಲಿ ಪಿತೃಭೂಮಿ ಮತ್ತು ಪುಣ್ಯಭೂಮಿಗಳು ಮಾತ್ರವೇ ಇರುವುದೆಂದು ನಾವು ಈಗಾಗಲೇ ಗಮನಿಸಿದೆವು. ಪೌರತ್ವಕ್ಕೆ ಸಂಬಂಧಿಸಿದಂತೆ ಕರ್ಮಭೂಮಿ ಎಂಬ ಪ್ರಮುಖ ಕಲ್ಪನೆಯನ್ನು ಸಾವರ್ಕರ್ ಅದಾಗಲೇ ಕೈಬಿಟ್ಟಿದ್ದರು. ಸಾವಿರಾರು ಮುಸ್ಲಿಮರು, ಹಿಂದೂಗಳು, ಸಿಕ್ಖರು, ಜೈನರು, ಆದಿವಾಸಿಗಳು, ದಲಿತರು, ಪಾರ್ಸಿಗಳು ಒಟ್ಟಲ್ಲಿ ಭಾರತದ ಬಹುಜನರು ಭಾರತವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟವನ್ನು ಮುನ್ನಡೆಸುತ್ತಿದ್ದ ಹೊತ್ತಲ್ಲಿ ಈ ಉಲ್ಲೇಖ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಆ ಕರ್ಮಭೂಮಿಯಿಂದ ಅಗಲಿಕೆ ಕಾಯ್ರದುಕೊಂಡು ದೂರ ನಿಂತ ಒಂದೇ ಒಂದು ಸಮುದಾಯವೆಂದರೆ, ಅದು ಸಾವರ್ಕರ್ ತರಹದ ಹಿಂದೂ ಜನಾಂಗೀಯವಾದಿ ರಾಜಕಾರಣದ ಗುರಿ ಹೊಂದಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣರು ಎಂಬುದನ್ನೂ ಮರೆಯಬಾರದು. ಹಾಗೆ ನೋಡುವಾಗ ಇದು ಅಗಲಿ ನಿಲ್ಲುವ ಪೌರತ್ವ ಸಿದ್ಧಾಂತವಾಗಿತ್ತು ಎಂಬುದೂ ಸ್ಪಷ್ಟವಾಗುತ್ತದೆ. ಹೀಗೆ ಬ್ರಾಹ್ಮಣಿಸಂ ಸಿಂಧೂವಿನಿಂದ ಹಿಡಿದು ಸಿಂಧೂತನಕದ ಭೂಪ್ರದೇಶದ ಸ್ವಾತಂತ್ರ್ಯ ಹೋರಾಟವೆಂಬ ಕರ್ಮದಲ್ಲಿ ಚೂರೇಚೂರು ಪಾಲ್ಗೊಳ್ಳದೆ ದೂರವಿದ್ದುಕೊಂಡು ಆ ಭೂಪ್ರದೇಶದ ಪೌರತ್ವವನ್ನು, ಕರ್ಮ ರಹಿತ ಪೌರತ್ವವನ್ನು ನಿರ್ಮಿಸುತ್ತಿತ್ತು. ಅಡ್ವಕೇಟ್ ಬಾಬಾರಾವ್ ನಾನಲ್ ಅಧ್ಯಕ್ಷ ಮತ್ತು ಜಿ.ಪಿ ಪಟವರ್ಧನ್ ಕಾರ್ಯದರ್ಶಿಯೂ ಆಗಿ ಹಿಂದೂ ಸಭಾ ರೂಪುಗೊಳ್ಳುತ್ತದೆ. ಅಖಿಲ ಭಾರತ ಹಿಂದೂ ಮಹಾಸಭಾದೊಂದಿಗೆ ಸೇರಿಕೊಂಡು ಕೆಲಸ ಮಾಡಲು ರತ್ನಗಿರಿ ಹಿಂದುಸಭಾ ತೀರ್ಮಾನಿಸುತ್ತದೆ.

ಬ್ರಾಹ್ಮಣ ರಾಜಕಾರಣದ ಭಾಗವಾಗಿ ಈ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದರ ಹಿಂದಿನ ಸಾಮಾಜಿಕ ಹಿನ್ನೆಲೆಯನ್ನೂ ನಾವಿಲ್ಲಿ ನೋಡಬೇಕು. ಈ ಕಾಲಘಟ್ಟದಲ್ಲಿ ಬ್ರಾಹ್ಮಣ ವಿರೋಧಿ ರಾಜಕಾರಣದ ವಿಭಿನ್ನ ಕವಲುಗಳು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಅಂಬೇಡ್ಕರ್ ಅವರ ಬಹಿಷ್ಕೃತ್ ಹಿತಕರಿಣಿ ಸಭಾ ಆಗಿತ್ತು. ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರತ್ನಗಿರಿ ಜಿಲ್ಲೆಯಲ್ಲಿಯೇ ದಲಿತರು ಹಲವು ದೊಡ್ಡ ಮಟ್ಟದ ಹೋರಾಟಗಳನ್ನು ಕಟ್ಟಿದ್ದರು. ಅದರಲ್ಲೂ ವಿಶೇಷವಾಗಿ ಮಹಾಡ್ ಪುರಸಭೆಯಲ್ಲಿ. ಅದರ ಹಿನ್ನೆಲೆ ಈ ಕೆಳಗಿದೆ.

೧೯೨೪ ಆಗಸ್ಟ್‌ ೪ ರಂದು ಬಾಂಬೆ ಕೌನ್ಸಿಲ್‌ನಲ್ಲಿ ರಾವ್‌ ಬಹಾದ್ದೂರ್‌ ಸಿ.ಕೆ. ಬೋಲೆ ಒಂದು ಬಿಲ್‌ ಮಂಡಿಸುತ್ತಾರೆ. ಸಾರ್ವಜನಿಕ ಬಾವಿ, ಕೊಳ, ಕೆರೆ ಮೊದಲಾದ ನೀರಿನ ಕೇಂದ್ರಗಳನ್ನು ʼಅಸ್ಪೃಶ್ಯ ಜನರಿಗೆʼ ಬಳಸಲು ಅನುಮತಿ ನೀಡುವ ಬಿಲ್‌ ಆಗಿತ್ತದು. ೧೯೨೪ ಸೆಪ್ಟೆಂಬರ್‌ ೧೧ ರಂದು ಬಾಂಬೆ ಸರಕಾರ ಅದನ್ನು ಅಂಗೀಕರಿಸಿ ಆಜ್ಞೆ ಹೊರಡಿಸಿತು. ಆದರೆ, ಎಲ್ಲೂ ಅದು ಕಾರ್ಯಗತಗೊಳ್ಳಲಿಲ್ಲ. ಸಾಮಾಜಿಕ ಬಹಿಷ್ಕಾರ ಕಾನೂನಿಗಿಂತಲೂ ಬಲಿಷ್ಠವಾಗಿತ್ತು. ಅಂಬೇಡ್ಕರ್‌ ತನ್ನ ಓದು ಮುಗಿಸಿ ಭಾರತಕ್ಕೆ ಮರಳಿದ ಸಮಯವಾಗಿತ್ತದು. ೧೯೨೪ ಆಗಸ್ಟ್‌ ೯ರಂದು ಅಂಬೇಡ್ಕರ್‌ ನೇತೃತ್ವದಲ್ಲಿ ಬಹಿಷ್ಕೃತ ಹಿತಕರಿಣಿ ಸಭಾ ರೂಪುಗೊಂಡಿತ್ತು. ೧೯೨೪ ಜುಲೈ ೨೦ರಂದು ಸಭೆ ಸೇರಿದ ಹಿತಕರಿಣಿ ಸಭಾ ಈ ಕೆಳಗಿನ ನಿರ್ಣಯಗಳನ್ನು ಕೈಗೊಂಡಿತು.

೧. ಹಾಸ್ಟೆಲ್‌ಗಳನ್ನು ತೆರೆದು ದಲಿತರ ನಡುವೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವುದು.

೨. ಗ್ರಂಥಾಲಯ, ಸಾಮಾಜಿಕ ಕೇಂದ್ರಗಳು ಮತ್ತು ಶಾಲೆಗಳನ್ನು ತೆರೆಯುವ ಮೂಲಕ ದಲಿತರ ನಡುವೆ ಶಿಸ್ತು ಹಬ್ಬಿಸುವ ಕೆಲಸಗಳನ್ನು ಪ್ರೋತ್ಸಾಹಿಸುವುದು.

೩. ಕೈಗಾರಿಕಾ ಮತ್ತು ಕೃಷಿ ವಿದ್ಯಾಕೇಂದ್ರಗಳನ್ನು ತೆರೆಯುವ ಮೂಲಕ ದಲಿತರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ಅವರನ್ನು ಮುಂದಕ್ಕೊಯ್ಯುವ ಕೆಲಸವನ್ನು ಮಾಡುವುದು.

೪. ದಲಿತರ ಸಮಸ್ಯೆಗಳನ್ನು ಪ್ರತಿನಿಧಿಸುವುದು.

ದಲಿತರ ಸರ್ವತೋಮುಖ ಸಾಮಾಜಿಕ ಅಭಿವೃದ್ಧಿಗೆ ಬೇಕಾದ ಕಾರ್ಯಕರ್ಮಗಳನ್ನು ಸಭಾ ತನ್ನ ಗುರಿಯಾಗಿಸಿಕೊಂಡಿತ್ತು ಎಂಬುದು ಇಲ್ಲಿ ಒಂದೇ ನೋಟಕ್ಕೆ ಸ್ಪಷ್ಟವಾಗುತ್ತದೆ.

ಈ ಕಾಲದಲ್ಲಿ ದಲಿತರ ಏಳಿಗೆಗಾಗಿ ಅಂಬೇಡ್ಕರ್‌ ಪ್ರಯತ್ನಿಸುತ್ತಿದ್ದಾಗ ಅವರು ಸ್ವೀಕರಿಸಿದ್ದ ಮಾರ್ಗದರ್ಶಕ ತತ್ವಗಳ ಕುರಿತು ರಂಜಿತ್‌ ಕುಮಾರ್‌ ಡೇ ಭಾರತದ ಮತಾಂತರಿಗಳು: ನವಬುದ್ಧಿಸಂ ಕುರಿತ ಸಮಾಜೋ ರಾಜಕೀಯ ಅಧ್ಯಯನ ಎಂಬ ಪುಸ್ತಕದಲ್ಲಿ ವಿವರಿಸುತ್ತಾರೆ.

ʼತನ್ನ ಗುರಿಯಾದ, ತನ್ನ ಜನರ ಸಾಮಾಜಿಕವೂ ರಾಜಕೀಯವೂ ಆದ ಸಮಾನತೆಯನ್ನು ಗಳಿಸಲು ಅಂಬೇಡ್ಕರ್‌ ಇಲ್ಲಿಯ ತನಕ ನಡೆಸಿದ ವಿಭಿನ್ನ ಪ್ರಯತ್ನಗಳನ್ನು ಗಮನಿಸಿದರೆ ಆಯಾ ಸಂದರ್ಭಗಳು ಬೇಡುವ ನೀತಿಗಳನ್ನು ಸ್ವೀಕರಿಸಿರುವುದಾಗಿ ನಮಗೆ ಕಾಣಬಹುದು. ೧೯೨೦ರ ಆರಂಭದಲ್ಲಿ ಅವರು ʼಅಸ್ಪೃಶ್ಯರʼ ʼಕೆಟ್ಟ ಗುಣಗಳನ್ನುʼ ತೊರೆಯಲು ಕರೆ ನೀಡುತ್ತಾರೆ. ಮದ್ಯ ಮತ್ತು ಬೀಫ್‌ ಸೇವಿಸುವ ತಮ್ಮ ಬದುಕಿನ ಶೈಲಿಯನ್ನು ಕೈ ಬಿಡಬೇಕು ಎಂದು ಹೇಳುತ್ತಾರೆ. ತನ್ನ ಚಳುವಳಿಯ ಆರಂಭ ಕಾಲದಲ್ಲಿ ʼಸಂಸ್ಕೃತೀಕರಣʼದ ಪ್ರಯತ್ನದ ಭಾಗವಾಗಿ ʼಅಸ್ಪೃಶ್ಯರʼ ಬಳಿ ಉನ್ನತ ಜಾತಿಗಳ ಆಚರಣೆಗಳನ್ನೂ ಅನುಷ್ಠಾನಗಳನ್ನೂ ಅನುಕರಿಸಲು ಕರೆ ನೀಡುತ್ತಾರೆ. ವೈದಿಕ ರೀತಿಯ ಮದುವೆಗಳು, ಜನಿವಾರ ಧಾರಣೆ ಮೊದಲಾದ ಸಂಗತಿಗಳಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದರು. ಆದರೆ ಉನ್ನತ ಜಾತಿಗಳ ಆಚರಣೆಗಳನ್ನು ಅನುಕರಿಸುವುದರಿಂದ ಉಳಿದವರ ಮೇಲೆ ಯಾವ ರೀತಿಯ ಪ್ರಭಾವವನ್ನೂ ಬೀರಲಾಗದು ಎಂದು ಅವರು ಬಹಳ ಬೇಗನೆ ಕಂಡುಕೊಂಡರು.ʼ

ಈ ಕಂಡುಕೊಳ್ಳುವಿಕೆಗೆ ಅಂಬೇಡ್ಕರರನ್ನು ಮುನ್ನಡೆಸಿದ ಅತ್ಯಂತ ಪ್ರಮುಖ ಘಟನೆ ಮಹಾಡ್‌ ಸತ್ಯಾಗ್ರಹ. ೧೯೨೪ ಜನವರಿ ೫ರಂದು ಮಹಾಡ್‌ ಮುನಿಸಿಪಾಲಿಟಿ ಅಲ್ಲಿನ ಅತ್ಯಂತ ದೊಡ್ಡ ಜಲಾಶಯವಾಗಿದ್ದ ಚೌಡಾರ್ ಕೆರೆಯನ್ನು ಎಲ್ಲ ಜಾತಿಗಳ ಜನರಿಗೆ ಮುಕ್ತವಾಗಿ ತೆರೆದು ಕೊಡುವ ಘೋಷಣೆ ಹೊರಡಿಸಿತು. ಅಂದಿನ ತನಕ ಆ ಕೆರೆಯ ಬಳಕೆಯನ್ನು ದಲಿತರಿಗೆ ನಿರಾಕರಿಸಲ್ಪಡಲಾಗಿತ್ತು. ಈ ಘೋಷಣೆಯ ನಂತರವೂ ಅದು ಸಾಮಾಜಿಕವಾಗಿ ಯಾವ ಬದಲಾವಣೆಯನ್ನೂ ಉಂಟು ಮಾಡಲಿಲ್ಲ. ದಲಿತರು ಯಾರೂ ಕೂಡ ಚೌಡಾರ್‌ ಕೆರೆಯಿಂದ ನೀರೆತ್ತಲು ಮುಂದೆ ಬರಲಿಲ್ಲ. ಅಷ್ಟೊಂದು ಆಳದಲ್ಲಿ ಜಾತಿ ವ್ಯವಸ್ಥೆ ಬೇರೂರಿತ್ತು. ೧೯೨೭ರ ತನಕ ಈ ಪತಿಸ್ಥಿತಿ ಮುಂದುವರಿಯಿತು.

೧೯೨೭ ಮಾರ್ಚ್‌ ೧೯ ಮತ್ತು ೨೦ ದಿನಾಂಕಗಳಂದು ಮಹಾಡನ್ನು ಒಳಗೊಳ್ಳುವ ಕೊಲಾಬ ಜಿಲ್ಲೆಯ (ಈಗಿನ ರಾಯ್‌ಘರ್)‌ ಬಹಿಷ್ಕೃತ ಹಿತಕರಿಣಿ ಸಭಾದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮಾರ್ಚ್‌ ೧೬ರಂದು ಅಂಬೇಡ್ಕರ್‌ ಬಾಂಬೆಯಿಂದ ಬೋಟ್‌ ಹತ್ತುತ್ತಾರೆ. ಈ ಸಮ್ಮೇಳನ ಬಹಿಷ್ಕೃತ ಹಿತಕರಿಣಿ ಸಭಾದ ಅಲ್ಲಿಯ ತನಕ ನಡೆದ ಸಮ್ಮೇಳನಗಳಲ್ಲಿಯೇ ದೊಡ್ಡ ಸಮ್ಮೇಳನವಾಗಿತ್ತು. ಈ ಸಭಾ ದಲಿತ ಸಮುದಾಯ ಸಂಘಟನೆ ಆಗಿರಲಿಲ್ಲ. ಬದಲಿಗೆ ದಲಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಭಿನ್ನ ಜಾತಿಗಳ ಜನರು ಸೇರಿಕೊಂಡು ಕಟ್ಟಿದ ಸಂಘಟನೆಯಾಗಿತ್ತು. ಗೇಯ್ಲ್‌ ಓಮ್ವೆತ್‌ ಬರೆದ ದಲಿತರು ಮತ್ತು ಪ್ರಜಾಪ್ರಭುತ್ವ ಕ್ರಾಂತಿ – ಡಾ. ಅಂಬೇಡ್ಕರ್‌ ಮತ್ತು ಸಾಮ್ರಾಜ್ಯಶಾಹಿ ಭಾರತದಲ್ಲಿ ದಲಿತ ಚಳುವಳಿ ಎಂಬ ಪುಸ್ತಕದಲ್ಲಿ ಇವರುಗಳ ಬಗ್ಗೆ ಬರೆದಿದ್ದಾರೆ. ಕಾಯಸ್ಥನಾದ ಎ.ವಿ ಚಿತ್ರೇ, ಬ್ರಾಹ್ಮಣನಾದ ಜಿ.ಎನ್ ಸಹಸ್ರಬುದ್ಧೇ, ಮಹಾಡ್‌ ಮುನಿಸಿಪಾಲಿಟಿಯ ಅಧ್ಯಕ್ಷನಾಗಿದ್ದ ಕಾಯಸ್ಥನಾದ ಸುರೇಂದ್ರನಾಥ್‌ ಟಿಪ್ಸಿನ್‌ ಮೊದಲಾದವರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಚಿತ್ರೇ ಮತ್ತು ಟಿಪ್ಸಿನ್‌ ಅಂಬೇಡ್ಕರ್‌ ನಂತರ ಸ್ಥಾಪಿಸಿದ ಇಂಡಿಪೆಂಡೆಂಟ್‌ ಲೇಬರ್‌ ಪಾರ್ಟಿಯ ಶಾಸಕರಾದರು. ಸಹಸ್ರಬುದ್ಧೇ ಅಂಬೇಡ್ಕರ್‌ ಸ್ಥಾಪಿಸಿದ ಜನತಾ ಪತ್ರಿಕೆಯ ಸಂಪಾದಕರಾದರು. ಚೌಡಾರ್‌ ಕೆರೆಗೆ ಬಲವಂತವಾಗಿ ನುಗ್ಗಲು ಸಮ್ಮೇಳನ ತೀರ್ಮಾನ ಕೈಗೊಳ್ಳುತ್ತದೆ. ಅನಂತ್‌ ರಾವ್‌ ಚಿತ್ರೇ ಎಂಬ ಎ.ಆರ್‌ ಚಿತ್ರೇ ಈ ಯೋಜನೆಯನ್ನು ಮುಂದಿಟ್ಟಿದ್ದರು. ನಂತರದ ಕಾಲದಲ್ಲಿ ಚಿತ್ರೇ ಆ ಸಂದರ್ಭದ ಕುರಿತು ಹೇಳಿದ ಒಂದು ಮಾತನ್ನು ಓಮ್ವೆತ್‌ ದಾಖಲಿಸುತ್ತಾರೆ. ʼಮೊದಲೇ ಯೋಜಿಸಿದ್ದ ಹಾಗೆ ನಾನೊಂದು ಬಾಂಬ್‌ ಹಾಕಿಬಿಟ್ಟೆ.ʼ

ಹೀಗೆ ಸಾವಿರದಷ್ಟು ಜನರನ್ನು ಸೇರಿಸಿಕೊಂಡು ಚೌಡಾರ್‌ ಕೆರೆಗೆ ಪ್ರವೇಶಿಸುವ ಅಂಬೇಡ್ಕರ್‌ ತಮ್ಮ ಬೊಗಸೆಯಲ್ಲಿ ನೀರೆತ್ತಿಕೊಂಡು ಕುಡಿಯುತ್ತಾರೆ. ನಂತರದ ಕಾಲದಲ್ಲಿ ಮರಾಠಿಯ ಪ್ರಮುಖ ಕವಿ ಅರ್ಜುನ್‌ ಡಾಂಗ್ಲೇ ಮಹಾಡ್‌ ಸತ್ಯಾಗ್ರಹದ ಕೈಗಳು ಎಂಬ ಕವಿತೆಯಲ್ಲಿ ಹೀಗೆ ಬರೆಯುತ್ತಾರೆ.

ಊರಬಾಗಿಲಾಚೆಯಿಂದ

ಸದ್ದಿಲ್ಲದ ಕಾಲುದಾರಿಯೊಳಗಿಂದ

ನೀ ಬಂದು ಘರ್ಜಿಸಿದೆ.

ಎಲ್ಲರೂ ಬೆಚ್ಚಿ ಎದ್ದು

ಧೂಳು ಕೊಡವಿಕೊಂಡರು.

ಹೊತ್ತುರಿಯುವ ಪಂಜು ಹಿಡಿದು

ನೀ ಮುಂದೆ ನಡೆದೆ

ಕತ್ತಲ ವ್ಯಾಪಾರಿಗಳು

ಹೆದರಿ ನಡುಗಿದರು

ನೀನು ನಡೆಯುತ್ತಲೇ ಇದ್ದೆ

ಎಲ್ಲರೂ ನಿನ್ನ ಹಿಂದೆ

ನೀನು ಕೆರೆಯ ದಡದಲ್ಲಿ ನಿಂತೆ

ನಮಗೆ ಬದುಕು ನೀಡಿದೆ.

ಅಂಬೇಡ್ಕರ್‌ ಕುಡಿದ ಆ ಒಂದು ಬೊಗಸೆ ನೀರು ನಮಗೆ ಜೀವಜಲವಾಗಿತ್ತು ಎಂದು ಕವಿ ಇಲ್ಲಿ ಹೇಳುತ್ತಿದ್ದಾರೆ. ಆದರೆ ಆ ಜೀವಜಲ ಸುಲಭದಲ್ಲಿ ದಕ್ಕುವಂಥದ್ದಾಗಿರಲಿಲ್ಲ. ಮರುದಿನ ಕೆರೆಯನ್ನು ಅಶುದ್ಧಿಗೊಳಿಸಿದರೆಂದು ಬ್ರಾಹ್ಮಣರು ಶುದ್ಧಿ ಕರ್ಮ ಮಾಡಿದರು. ಸಾವಿರ ಕೊಡ ನೀರನ್ನು ಕೆರೆಯಿಂದ ಎತ್ತಿ ಚೆಲ್ಲಿ ಶುದ್ಧಿ ಮಾಡಿದರು. ಈ ಘಟನೆ ಮಹಾರಾಷ್ಟ್ರದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸಿತು. ಈ ಪರಿಸ್ಥಿತಿಯಲ್ಲಿ ಅಂಬೇಡ್ಕರ್‌ ತನ್ನ ಎರಡನೇ ಪತ್ರಿಕೆ ಬಹಿಷ್ಕೃತ ಭಾರತ ಹೊರ ತರಲು ತಯಾರಿ ನಡೆಸುವುದು. ೧೯೨೭ ಏಪ್ರಿಲ್‌ ೩ರಂದು ಮೊದಲ ಸಂಚಿಕೆ ಬರುತ್ತದೆ. ಅಂಬೇಡ್ಕರ್‌ ಆರಂಭಿಸಿದ ಮೊದಲ ಪತ್ರಿಕೆ ಮೂಕನಾಯಕ.

ಮಹಾಡ್‌ ಸತ್ಯಾಗ್ರಹ ಅಲ್ಲಿಗೆ ಮುಗಿಯುವುದಿಲ್ಲ. ೧೯೨೭ ಜುಲೈ ೩ರಂದು ಅಂಬೇಡ್ಕರ್‌ ಅಧ್ಯಕ್ಷತೆಯಲ್ಲಿ ಬಾಂಬೆಯ ಕೋವಾಸ್ಜೀ ಜಹಾಂಗೀರ್‌ ಹಾಲಿನಲ್ಲಿ ನಡೆದ ಬಹಿಷ್ಕೃತ ಹಿತಕರಿಣಿ ಸಭಾದ ಸಾರ್ವಜನಿಕ ಸಭೆಯಲ್ಲಿ ಮಹಾಡ್‌ ಸತ್ಯಾಗ್ರಹವನ್ನು ಪುನರಾರಂಭಿಸಲು ತೀರ್ಮಾನಿಸಲಾಗುತ್ತದೆ. ಅದೇ ವರ್ಷ ದೀಪಾವಳಿ ಕಳೆದು ಸತ್ಯಾಗ್ರಹ ಆರಂಭಿಸಲು ಯೋಜನೆ ಸಿದ್ದಗೊಳಿಸಲಾಯಿತು. ಹೀಗೆ ೧೯೨೭ ಡಿಸೆಂಬರ್‌ ೨೬, ೨೭ರಂದು ಸತ್ಯಾಗ್ರಹ ನಡೆಸುವುದೆಂದು ತೀರ್ಮಾನವಾಗುತ್ತದೆ. ಇದನ್ನರಿತ ಜಾತಿಹಿಂದೂಗಳು ಸತ್ಯಾಗ್ರಹವನ್ನು ಹಿಮ್ಮೆಟ್ಟಿಸುವ ಯೋಜನೆ ರೂಪಿಸಲು ವೀರೇಶ್ವರ್‌ ದೇವಸ್ಥಾನದಲ್ಲಿ ಸಭೆ ಸೇರುತ್ತಾರೆ. ಆದರೆ ಆ ಸಭೆ ಗಲಭೆಯಲ್ಲಿ ಕೊನೆಗೊಳ್ಳುತ್ತದೆ. ಅದರ ನಂತರ ಅವರು ೧೯೨೭ ಡಿಸೆಂಬರ್‌ ೨೭ರಂದು ಅಂಬೇಡ್ಕರ್‌ ಮತ್ತು ಇತರರ ಮೇಲೆ ಮಹಾಡ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಅವರು ಮಹಾಡ್‌ ಪ್ರವೇಶಿಸುವುದಕ್ಕೆ ತಡೆಯಾಜ್ಞೆ ತರುತ್ತಾರೆ. ಈ ಬೆಳವಣಿಗೆಗಳ ನಡುವೆ ೧೯೨೭ ಆಗಸ್ಟ್‌ ೪ರಂದು ಮಹಾಡ್‌ ಪುರಸಭೆಯು ದಲಿತರು ಚೌಡಾರ್‌ ಕೆರೆಯನ್ನು ಬಳಸುವುದಕ್ಕೆ ಅನುಮತಿ ನೀಡಿದ್ದ ಆಜ್ಞೆಯನ್ನು ಹಿಂಪಡೆಯುತ್ತದೆ.

೧೯೨೭ ಡಿಸೆಂಬರ್‌ ೨೫ರಂದು ಅಂಬೇಡ್ಕರ್‌ ಮಹಾಡ್‌ ತಲುಪುತ್ತಾರೆ. ಬೃಹತ್‌ ಜನಸಾಗರದ ನಡುವೆ ನಿಂತುಕೊಂಡು ಸಂಪ್ರದಾಯವಾದಿ ಬ್ರಾಹ್ಮಣ್ಯದ ಮೂಲಭೂತ ತತ್ವಗಳಿಗೆ ಆಧಾರ ಗ್ರಂಥಗಳಲ್ಲಿ ಒಂದಾಗಿದ್ದ ಮನುಸ್ಮೃತಿಯನ್ನು ಸುಟ್ಟು ಹಾಕುತ್ತಾರೆ. ಚೌಡಾರ್‌ ಕೆರೆ ಪ್ರವೇಶ ಕಾನೂನು ಉಲ್ಲಂಘನೆಯಾಗುತ್ತದೆಯೆಂದು ತನ್ನ ಅನುಯಾಯಿಗಳನ್ನು ಅದರಿಂದ ತಡೆಯುತ್ತಾರೆ. ಕೊನೆಗೆ ೧೯೩೭ ಮಾರ್ಚ್‌ ೧೭ರಂದು ನ್ಯಾಯಾಲಯವು ಚೌಡಾರ್‌ ಕೆರೆಯನ್ನು ದಲಿತರಿಗಾಗಿ ತೆರೆದು ಕೊಡುವ ತೀರ್ಮಾನವನ್ನು ಕೈಗೊಳ್ಳುವುದು.

ಹಲವು ವರ್ಷಗಳ ಕಾಲ ನಡೆದ ಚಳುವಳಿಯನ್ನು ಒಟ್ಟಾಗಿ ಮಹಾಡ್‌ ಸತ್ಯಾಗ್ರಹವೆಂದು ನಾವಿಂದು ಕರೆಯುತ್ತೇವೆಯಾದರೂ ಮೊದಲ ಸತ್ಯಾಗ್ರಹ ನಡೆದ ೧೯೨೭ ಮಾರ್ಚ್‌ ೨೦ನ್ನು ʼದಲಿತರ ಸ್ವಾತಂತ್ರ್ಯ ದಿನʼ ಎಂದು ಗೇಲ್‌ ಓಮ್ವೆತ್‌ ತರದ ಚಿಂತಕರು ದಾಖಲಿಸುತ್ತಾರೆ.

ರಂಜಿತ್‌ ಕುಮಾರ್‌ ಡೇ ಅಭಿಪ್ರಾಯದಲ್ಲಿ ಮಹಾಡ್‌ ಸತ್ಯಾಗ್ರಹವು ಜಲಾಶಯ ಪ್ರವೇಶಕ್ಕಾಗಿ ನಡೆದ ಹೋರಾಟ ಮಾತ್ರವೇ ಆಗಿರಲಿಲ್ಲ. ಅದು ಸಮಾನ ಮಾನವ ಹಕ್ಕುಗಳನ್ನು ಪಡೆಯಲು ನಡೆದ ಹೋರಾಟ ಮತ್ತು ಹಿಂದೂಗಳ ಮನಸ್ಸನ್ನು ಅರಿಯಲು ನಡೆಸಿದ ಪ್ರಯೋಗವೂ ಆಗಿತ್ತು. ಅಂತಹ ಇನ್ನೊಂದು ಮಹತ್ವದ ಪ್ರಯೋಗ ೧೯೩೦ರಲ್ಲಿ ನಡೆದ ನಾಸಿಕಿನ ಕಾಲಾರಾಮ್‌ ದೇವಸ್ಥಾನ ಪ್ರವೇಶಕ್ಕಾಗಿ ನಡೆದ ಸತ್ಯಾಗ್ರಹವಾಗಿತ್ತು. ಅಂಬೇಡ್ಕರ್‌ ಮತ್ತು ಸ್ಥಳೀಯ ಮಹಾರ್‌ ನಾಯಕರು ಜಂಟಿಯಾಗಿ ಈ ಹೋರಾಟವನ್ನು ಕಟ್ಟಿದ್ದರು. ಸಾವಿರಾರು ʼಅಸ್ಪೃಶ್ಯರುʼ ಇದರಲ್ಲಿ ಪಾಲ್ಗೊಂಡರು. ಆ ಸಂದರ್ಭದಲ್ಲಿ ಅಂಬೇಡ್ಕರ್‌ ಹೇಳಿದ ಮಾತು ಹೀಗಿದೆ:

ʼಈ ಸತ್ಯಾಗ್ರಹವು ಹಿಂದೂಮನಸ್ಸಿಗೆ ಒಂದು ಸವಾಲು. ಸಾವಿರಾರು ವರ್ಷಗಳಿಂದ ಉನ್ನತಜಾತಿಯ ಹಿಂದೂಗಳು ನಮ್ಮ ಮಾನವಹಕ್ಕುಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ. ಒಬ್ಬ ಮನುಷ್ಯನನ್ನು ಮನುಷ್ಯನಾಗಿಯೇ ಕಾಣಬೇಕು ಎಂಬುದು ಹೊಸ ಕಾಲದ ಹೊಸ ತತ್ವಶಾಸ್ತ್ರ. ಇದನ್ನು ಒಪ್ಪುತ್ತೀರೋ ಬಿಡುತ್ತೀರೋ ಎಂಬುದು ನಿಮಗೆ ನಿಜವಾದ ನಿಮ್ಮ ಮನಸ್ಸಿನ ಪರೀಕ್ಷೆ. ಅದಕ್ಕೆ ಇಂದು, ಈ ಸತ್ಯಾಗ್ರಹದ ಮೂಲಕ ನಮಗೆ ಉತ್ತರ ಲಭಿಸಲಿದೆ.ʼ

ಒಂದು ಕಡೆ ದಲಿತರು ಹೀಗೆ ಬ್ರಾಹ್ಮಣಿಸಮ್ಮಿನ ಸರಪಳಿಯನ್ನು ತುಂಡರಿಸುತ್ತಿರುವಾಗ ಇನ್ನೊಂದು ಕಡೆ ಹಿಂದುಳಿದವರು ಮತ್ತು ಸವರ್ಣೀಯರೂ ಅದನ್ನು ಕತ್ತರಿಸಿ ಹಾಕಲು ಪ್ರಯತ್ನಿಸುತ್ತಿದ್ದರು. ನಾವು ಈ ಹಿಂದೆ ಗಮನಿಸಿದ ಮಹಾತ್ಮಾ ಜ್ಯೋತಿಬಾ ಫುಲೆ ಸ್ಥಾಪಿಸಿದ ಸತ್ಯಶೋಧಕ ಸಮಾಜ ಹತ್ತೊಂಬತ್ತನೇ ಶತಮಾನದ ದ್ವಿತೀಯಾರ್ಧದಲ್ಲಿ ಬ್ರಾಹ್ಮಣ ವಿರೋಧಿ ರಾಜಕಾರಣ ಮತ್ತು ಬ್ರಾಹ್ಮಣೇತರ ರಾಜಕಾರಣದ ಸೂಜಿಗಲ್ಲಾಗಿತ್ತು. ಮರಾಠಾ ಎಂಬ ಸಮುದಾಯದ (ಶಿವಾಜಿ ಈ ಸಮುದಾಯದವನು) ಒಂದು ವಿಭಾಗವು, ಈ ಬ್ರಾಹ್ಮಣ ವಿರೋಧಿ ರಾಜಕಾರಣದೊಂದಿಗೆ ಸಹಮತ ಹೊಂದಿತ್ತು. ೧೯೧೨ರಲ್ಲಿ ಬಂದ ವಾಸುದೇವ್‌ ರಾವ್‌ ಬಿರ್ಸೇ ಅವರ ಕ್ಷತ್ರಿಯರು ಮತ್ತು ಅವರ ಪ್ರಭಾವ ಎಂಬ ಪುಸ್ತಕ ಮತ್ತು ಕಾಶೀನಾಥ್‌ ಬಾಪೂಜಿ ದೇಶ್‌ಮುಖ್‌ ಅವರ ಕ್ಷತ್ರಿಯ ಮರಾಠರ ಪ್ರಾಚೀನ ಮತ್ತು ಆಧುನಿಕ ಇತಿಹಾಸ ಎಂಬ ಎರಡು ಸಂಪುಟಗಳ ಪುಸ್ತಕವೂ ಇದನ್ನು ಪುಷ್ಟೀಕರಿಸುತ್ತದೆ. ಬ್ರಾಹ್ಮಣೇತರರೆಲ್ಲ ಶೂದ್ರರು ಎಂದು ಅವರು ವಾದಿಸುತ್ತಾರೆ. ಅಂದರೆ, ಬ್ರಾಹ್ಮಣ ಜಾತಿ ವ್ಯವಸ್ಥೆಯ ಬಹುಮುಖ್ಯ ಸ್ವಭಾವವಾಗಿದ್ದ ಉನ್ನತಜಾತಿ ಉನ್ಮುಖತೆಯನ್ನು ತಿರುಗಾಮುರುಗಾ ಮಾಡುವ ರೀತಿಯನ್ನು ಕ್ಷತ್ರಿಯ ಮರಾಠರ ಈ ವಿಭಾಗವು ಕೈಗೊಂಡಿತ್ತು. ತಮ್ಮಲ್ಲಿನ ʼಕೆಳಜಾತಿʼಯಾದ ಶೂದ್ರರೊಂದಿಗೆ ಒಗ್ಗಟ್ಟು ಸಾಧಿಸುವ ಸಿದ್ದಾಂತವನ್ನು ಮುಂದಿಡುವ ಮೂಲಕ ʼನೀಚಜಾತಿ ಉನ್ಮುಖತೆʼ ಎಂಬ ಕ್ರಾಂತಿಕಾರಿ ಸಿದ್ಧಾಂತವನ್ನು ಅವರು ಮುಂದಿಟ್ಟಿದ್ದರು.

ವಿಕ್ರಂ ಸಂಪತ್‌ ತರಹದ ಸಾವರ್ಕರನ್ನು ಮರಳಿ ತರಲು ಪ್ರಯತ್ನಿಸುವವರು ಹೇಳುವುದು, ಬ್ರಾಹ್ಮಣಿಸಂ ಹಿಡಿತದಿಂದ ಹಿಂದೂಯಿಸಂ ಬಿಡುಗಡೆಯು ನಿಜವಾಗಿ ಹಿಂದೂ ರಾಷ್ಟ್ರೀಯ ನಾಯಕರಿಗೆ ಸಹಕಾರಿಯಾಗಿತ್ತು ಎಂದು.

ಆದರೆ, ಸಾವರ್ಕರನ್ನು ಹಿಂದೂ ರಾಷ್ಟ್ರೀಯ ನಾಯಕನೆಂದು ಕರೆಯುವುದು ಯಾಕೆ ಎಂಬುದನ್ನು ವಿಕ್ರಂ ಸಂಪತ್‌ ಸ್ಪಷ್ಟಪಡಿಸುವುದಿಲ್ಲ. ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಮುಖಮುದ್ರೆಯಾಗಿದ್ದ ಬ್ರಿಟಿಷ್‌ ವಿರೋಧಿ ನಿಲುವಿನಿಂದಲೂ ಹಿಮ್ಮೆಟ್ಟಿಕೊಂಡು, ಹಿಂದೂ ಜನಾಂಗೀಯ ರಾಜಕಾರಣಕ್ಕೆ, ಒಂದರ್ಥದಲ್ಲಿ ಬ್ರಿಟಿಷ್‌ ಅನುಕೂಲಕರ ರಾಜಕಾರಣಕ್ಕೆ ಕೆಂಪು ಹಾಸನ್ನು ಸಾವರ್ಕರ್‌ ಹಾಸಿಕೊಡುತ್ತಿದ್ದರು ಎಂದು ನಾವೀಗಾಗಲೇ ಚಾರಿತ್ರಿಕ ದಾಖಲೆಗಳ ಮೂಲಕ ಕಂಡುಕೊಂಡಿದ್ದೇವೆ.

Related Articles

ಇತ್ತೀಚಿನ ಸುದ್ದಿಗಳು